ನಾಯಕನಹಟ್ಟಿ: ತಿಪ್ಪೇರುದ್ರಸ್ವಾಮಿ ದೇವಾಲಯದ ಹುಂಡಿಯಲ್ಲಿ ನಾಲ್ಕು ತಿಂಗಳ ಅವ ಧಿಯಲ್ಲಿ ಒಟ್ಟು 25.54 ಲಕ್ಷ ರೂ. ಕಾಣಿಕೆ ಸಂಗ್ರಹವಾಗಿದೆ. ಗುರುವಾರ ದೇವಾಲಯದ ಹುಂಡಿ ಹಣದ ಎಣಿಕಾ ಕಾರ್ಯ ಜರುಗಿತು. ಒಳಮಠದ ಹುಂಡಿಗಳಲ್ಲಿ 18,82,105, ರೂ., ಹೊರಮಠದಲ್ಲಿ 5,15,509 ರೂ. ಹಾಗೂ ದಾಸೋಹ ಭವನದ ಹುಂಡಿಯಲ್ಲಿ 1,57,344 ರೂ. ಸಂಗ್ರಹವಾಗಿದೆ.
ಒಟ್ಟಾರೆ ಎರಡೂ ದೇವಾಲಯದ ಹುಂಡಿಗಳಲ್ಲಿ 25,54,958 ರೂ.ಗಳು ಸಂಗ್ರಹವಾಗಿವೆ. ಕಳೆದ ವರ್ಷ ಮಾರ್ಚ್ 16 ರಂದು ನಡೆದಿದ್ದ ಜಾತ್ರೆಗೆ ಮುಂಚಿತವಾಗಿ ನಡೆದ ಹುಂಡಿ ಎಣಿಕೆಯಲ್ಲಿ 16,45,095 ರೂ. ಸಂಗ್ರಹವಾಗಿತ್ತು. ಈ ಬಾರಿ ಸಂಗ್ರಹವಾದ ಕಾಣಿಕೆ 9,09,863 ರೂ. ದಷ್ಟು ಹೆಚ್ಚಾಗಿದೆ. ಹೊರಮಠದಲ್ಲಿ 27,574
ರೂ ನಾಣ್ಯಗಳು ಸಂಗ್ರಹವಾಗಿತ್ತು.
ಒಳಮಠದಲ್ಲಿ 87,100 ರೂ. ನಾಣ್ಯಗಳು ಸಂಗ್ರಹವಾಗಿದೆ. 5ರೂ. ನಾಣ್ಯಗಳನ್ನು ಎಣಿಸಲಾಯಿತು. 1ಹಾಗೂ 2 ರೂ. ನಾಣ್ಯಗಳನ್ನು ತೂಕದ ರೀತಿಯಲ್ಲಿ ಎಣಿಸಲಾಯಿತು. ಇತ್ತೀಚಿನ ದಿನಗಳಲ್ಲಿ ನಾಣ್ಯಗಳ ಬಳಕೆ ಕಡಿಮೆಯಾಗಿದೆ. ಎರಡು ವರ್ಷಗಳ ಹಿಂದಿನ ಅವಧಿಯಲ್ಲಿ ಸುಮಾರು 1 ಲಕ್ಷ ರೂ. ಚಿಲ್ಲರೆ ಸಂಗ್ರಹವಾಗುತ್ತಿತ್ತು. ಆದರೆ ಈ ಬಾರಿ ನೋಟುಗಳ ಪ್ರಮಾಣ ಹೆಚ್ಚಾಗಿದೆ.
100 ಹಾಗೂ 500 ರೂ ನೋಟುಗಳ ಪ್ರಮಾಣ ಜಾಸ್ತಿ ಇದೆ. ಕಂದಾಯ ಇಲಾಖೆಯ 100ಕ್ಕೂ ಹೆಚ್ಚು ಸಿಬ್ಬಂದಿ, ಕೆನರಾ ಬ್ಯಾಂಕ್ ಹಾಗೂ ದೇವಾಲಯ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆ ಆರಂಭವಾದ ಎಣಿಕಾ ಕಾರ್ಯ ಸಂಜೆ ಮುಕ್ತಾಯಗೊಂಡಿತು. ಎಣಿಕೆ ಕಾರ್ಯವನ್ನು ವೀಡಿಯೋ ಚಿತ್ರೀಕರಣ ಮಾಡಲಾಯಿತು.
ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ, ಕಾರ್ಯ ನಿರ್ವಹಣಾಧಿಕಾರಿ ಎಸ್ .ಪಿ.ಬಿ ಮಹೇಶ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ.ಪಿ. ರವಿಶಂಕರ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಈಶ್ವರಪ್ಪ, ಬ್ಯಾಂಕ್ ಅಧಿ ಕಾರಿ ಸಂತೋಷ್, ಸಿಬ್ಬಂದಿ ಮಂಜುನಾಥ್, ಉಪ ತಹಶೀಲ್ದಾರ್ ಜಗದೀಶ್, ಪಿಎಸ್‌ಐ ರಘುಪ್ರಸಾದ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಗೋವಿಂದರಾಜ್, ರುದ್ರಮುನಿ, ನಾಗಣ್ಣ, ಹಂಸವೇಣಿ, ಮುನಿಯಪ್ಪ, ಟಿ. ರುದ್ರಮುನಿ, ವಿರೂಪಾಕ್ಷಪ್ಪ ಮತ್ತಿತರರು ಇದ್ದರು.
ಹುಂಡಿಯಲ್ಲಿದ್ದವು ವಿದೇಶಿ ನಾಣ್ಯ
ಹೊರಮಠದ ಹುಂಡಿಯಲ್ಲಿ ಮಲೇಷಿಯಾ, ವಿಯೆಟ್ನಾಂ ದೇಶದ ನೋಟುಗಳು ಕಂಡು ಬಂದಿವೆ. ಜತೆಗೆ ಕೊರಿಯಾ ಹಾಗೂ ಅಮೆರಿಕ ದೇಶದ ನಾಣ್ಯಗಳೂ ಇದ್ದವು. ದೇವರ ಹುಂಡಿಯಲ್ಲಿ ತೊಟ್ಟಿಲು, ಮುಖಪದ್ಮ, ಕರಡಿಗೆ, ನಂದಿ, ಪಾದುಕೆ ಜತೆಗೆ ಚಿನ್ನದ ನಾಣ್ಯ ಸೇರಿದಂತೆ ನಾನಾ ವಸ್ತುಗಳನ್ನು ಹಾಕಲಾಗಿದೆ. ಸುಮಾರು 40ಕ್ಕೂ ಹೆಚ್ಚು ನಾಗರ ಹೆಡೆಗಳ ಚಿತ್ರವಿರುವ ತಾಮ್ರದ ನಾಣ್ಯಗಳು ಹುಂಡಿಯಲ್ಲಿದ್ದವು.