ನಾಯಕನಹಟ್ಟಿ: ಸಮೀಪದ ಚನ್ನಬಸಯ್ಯನಹಟ್ಟಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಲ್ಲಿ ಬಿದ್ದಿದ್ದ ಬಿಸಿಯೂಟದ ಸಾಂಬಾರ್ ಸೇವಿಸಿದ 71 ವಿದ್ಯಾರ್ಥಿಗಳನ್ನು ಬುಧವಾರ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು. 54 ವಿದ್ಯಾರ್ಥಿಗಳನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಉಳಿದ 17 ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಚಳ್ಳಕೆರೆ ಹಾಗೂ ಚಿತ್ರದುರ್ಗ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಏನಿದು ಘಟನೆ?: ಒಟ್ಟು 160 ಮಕ್ಕಳಿರುವ ಈ ಶಾಲೆಯಲ್ಲಿ ಬುಧವಾರ 150 ವಿದ್ಯಾರ್ಥಿಗಳು ಹಾಜರಾಗಿದ್ದರು. ಮಧ್ಯಾಹ್ನ ಎಲ್ಲರನ್ನೂ ಸಾಲಾಗಿ ಬಿಸಿಯೂಟಕ್ಕೆ ಕೂರಿಸಲಾಗಿತ್ತು. ಮೊದಲು 8ನೇ ತರಗತಿ ಮಕ್ಕಳಿಗೆ ಊಟ ಬಡಿಸಲಾಯಿತು. ಆಗ ಸಾಂಬಾರ್‌ನಲ್ಲಿ ಹಲ್ಲಿ ಬಾಲವಿರುವುದು ಒಬ್ಬ ವಿದ್ಯಾರ್ಥಿಗೆ ಗೋಚರಿಸಿತು. ಅಷ್ಟರಲ್ಲಾಗಲೇ ಹಲವಾರು ವಿದ್ಯಾರ್ಥಿಗಳು ಊಟ ಮಾಡಿದ್ದರು. ಶಿಕ್ಷಕರು ಬಿಸಿಯೂಟ ಮಾಡಿದ ವಿದ್ಯಾರ್ಥಿಗಳನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತಂದರು.
ವಿಷಯ ತಿಳಿದ ಪೋಷಕರು ಶಾಲೆಗೆ ದೌಡಾಯಿಸಿದರು. ಅಲ್ಲದೆ ತಮ್ಮ ಮಕ್ಕಳು ಬಿಸಿಯೂಟ ಮಾಡಿರಬಹುದು ಎಂಬ ಭಯದಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆರೋಗ್ಯ ಕೇಂದ್ರದಲ್ಲಿ ಜನದಟ್ಟಣೆಯಾಗಿದ್ದರಿಂದ ವೈದ್ಯರಿಗೆ ಚಿಕಿತ್ಸೆ ನೀಡಲು ಸ್ವಲ್ಪ ತೊಂದರೆಯಾಯಿತು. ಹಗಲು ಪಾಳಿಯ ವೈದ್ಯ ಡಾ| ವಿಕಾಸ್, ಅಸ್ವಸ್ಥಗೊಂಡಿದ್ದ ಮಕ್ಕಳಿಗೆ ಚಿಕಿತ್ಸೆ ನೀಡಿದರು. ನಂತರ ಚನ್ನಬಸಯ್ಯನಹಟ್ಟಿ ಶಾಲೆಗೆ ತೆರಳಿ ವಿದ್ಯಾರ್ಥಿಗಳ ಆರೋಗ್ಯವನ್ನು ಪರೀಕ್ಷಿಸಿದರು.
ಪೋಷಕರ ಒತ್ತಾಯದಿಂದ 50ಕ್ಕೂ ಹೆಚ್ಚು ಮಕ್ಕಳನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಇದೆ. ಹಾಗಾಗಿ ತಾಲೂಕು ಆರೋಗ್ಯಾಧಿಕಾರಿ ಡಾ| ಪ್ರೇಮಸುಧಾ ಸ್ಥಳಕ್ಕೆ ಬಂದ ನಂತರ ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿಯನ್ನು ಕರೆಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಸಿ.ಎಲ್. ಫಾಲಾಕ್ಷ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿದ ಅವರು, 6 ಆ್ಯಂಬುಲೆನ್ಸ್, ನಾಲ್ಕು 108 ವಾಹನಗಳನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆಸಲಾಗಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಎಲ್ಲಾ ಮಕ್ಕಳನ್ನು ಚಳ್ಳಕೆರೆ ಹಾಗೂ ಚಿತ್ರದುರ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಪ್ರಾಣಾಪಾಯ ಆಗಿಲ್ಲ. ಪೋಷಕರ ಧಾವಂತದಿಂದ ಮಕ್ಕಳು ದಿಗಿಲುಗೊಂಡಿದ್ದಾರೆ. ಆರೋಗ್ಯ ಇಲಾಖೆ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದೆ ಎಂದು ತಿಳಿಸಿದರು.
ಚಳ್ಳಕೆರೆ ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ವೆಂಕಟೇಶಪ್ಪ, ಪ್ರೊಬೇಷನರಿ ಡಿವೈಎಸ್ಪಿ ಸಂತೋಷ್, ಪಿಎಸ್‌ಐ ರಘುಪ್ರಸಾದ್, ಪಪಂ ಮುಖ್ಯಾಧಿಕಾರಿ ಟಿ. ಭೂತಪ್ಪ, ಅಕ್ಷರ ದಾಸೋಹ ಸಹ ನಿರ್ದೇಶಕ ತಿಪ್ಪೇಸ್ವಾಮಿ, ಮುಖಂಡರಾದ ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ, ಎಂ.ವೈ.ಟಿ. ಸ್ವಾಮಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಆರೋಗ್ಯದ ಮಾಹಿತಿ ಪಡೆದರು.