Advertisement

ಮೊಳಕಾಲ್ಮೂರಿಗೂ ವಿವಿ ಸಾಗರ ನೀರು!

11:28 AM May 01, 2020 | Naveen |

ನಾಯಕನಹಟ್ಟಿ: ವಾಣಿವಿಲಾಸ ಸಾಗರದಿಂದ ನೀರು ಪಡೆಯಲು ಚಳ್ಳಕೆರೆ ಹಾಗೂ ಹಿರಿಯೂರು ಶಾಸಕರ ಸ್ಪರ್ಧೆ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ತಾವು ಪ್ರತಿನಿಧಿಸುವ
ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಗೆ 0.25 ಟಿಎಂಸಿ ನೀರು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 2005ರಲ್ಲಿ ಚಳ್ಳಕೆರೆ ತಾಲೂಕಿಗೆ 0.25 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿತ್ತು. ಆದರೆ ಈ ಪ್ರಮಾಣದ ನೀರು ಹಿರಿಯೂರು ತಾಲೂಕಿನಲ್ಲಿಯೇ ಪೂರ್ಣಗೊಂಡಿತ್ತು. ವಿವಿ ಸಾಗರದಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಬಾರದು ಎಂದು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಪಟ್ಟು ಹಿಡಿದಿದ್ದರು.

Advertisement

ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಚಳ್ಳಕೆರೆ ತಾಲೂಕಿನ ಗಡಿಯಿಂದ 0.25 ಟಿಎಂಸಿ ನೀರು ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ವೇದಾವತಿ ನದಿಗೆ ವಿವಿ ಸಾಗರದಿಂದ ನೀರು ಹರಿಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಇವರಿಬ್ಬರ ನಡುವೆ ತಮ್ಮ ಕ್ಷೇತ್ರ ವ್ಯಾಪ್ತಿಯ ಜನರಿಗೆ 0.25 ಟಿಎಂಸಿ ನೀರು ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ. “ಇಬ್ಬರ ಜಗಳ ಮೂರನೆಯವರಿಗೆ ಲಾಭ’ ಎನ್ನುವಂತೆ ಎರಡು ತಾಲೂಕುಗಳ ನಡುವಿನ ನೀರಿನ ಜಗಳದಲ್ಲಿ ಮೊಳಕಾಲ್ಮೂರು ಕ್ಷೇತ್ರಕ್ಕೆ ಲಾಭವಾಗಿದೆ.

ಈ ಸಮಸ್ಯೆ ತಾರಕಕ್ಕೇರುವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಚಳ್ಳಕೆರೆಗೆ ದಕ್ಕಬೇಕಾದ 0.25 ನೀರು ಬಂದಿಲ್ಲ. ತಕ್ಷಣ ಚಳ್ಳಕೆರೆ ಗಡಿಯಲ್ಲಿ ಗೇಜ್‌ ಅಳವಡಿಸಿ 0.25 ಟಿಎಂಸಿ ನೀರು ಒದಗಿಸಬೇಕು. ಜತೆಗೆ ಇದೇ ನದಿ ಪಾತ್ರದಲ್ಲಿರುವ ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಯ ಕುಡಿಯುವ ನೀರಿಗಾಗಿ 0.25 ಟಿಎಂಸಿ ನೀರು ಒದಗಿಸುವಂತೆ ಜಲ ಸಂಪನ್ಮೂಲ ಸಚಿವ ಹಾಗೂ ಮುಖ್ಯಮಂತ್ರಿಯವರಿಗೆ ಏ. 29 ರಂದು ಪತ್ರ ಬರೆದಿದ್ದರು. ತಕ್ಷಣ ಈ ಪತ್ರಗಳಿಗೆ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರು ಸ್ಪಂದಿಸಿದ್ದಾರೆ. ಚಳ್ಳಕೆರೆಗೆ ನೀರು ಹರಿಸುವುದರ ಜತೆಗೆ ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಗೆ 0.25 ನೀರು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.  ಈ ಬಗ್ಗೆ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿಗಳಿಂದ ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಏ. 30 ರಂದು ಆದೇಶ ರವಾನೆಯಾಗಿದೆ.

ಮೊಳಕಾಲ್ಮೂರಿನ ಯಾವ ಹಳ್ಳಿಗಳಿಗೆ ಅನುಕೂಲ?
ಮೊಳಕಾಲ್ಮೂರು ಕ್ಷೇತ್ರದ ಕ್ಯಾತಗೊಂಡನಹಳ್ಳಿ, ಗುಡಿಹಳ್ಳಿ, ರೇಣುಕಾಪುರ, ಬಸಾಪುರ, ಭೋಗನಹಳ್ಳಿ ಭೋಗನಹಳ್ಳಿ, ಮಿಟ್ಲಕಟ್ಟೆ ಗ್ರಾಮಗಳ ಜನರಿಗೆ ವಿವಿ ಸಾಗರ ನೀರಿನಿಂದ ಅನುಕೂಲವಾಗಲಿದೆ. ಚಳ್ಳಕೆರೆ ಮತ್ತು ಹಿರಿಯೂರು ಕ್ಷೇತ್ರದ ಶಾಸಕರ ಜಗಳದ ಮಧ್ಯಸ್ಥಿಕೆ ವಹಿಸಿದ್ದ ಬಿ. ಶ್ರೀರಾಮುಲು ಜಗಳ ಬಗೆಹರಿಸಿ ತಮ್ಮ ಕ್ಷೇತ್ರದ ಜನರಿಗೆ ನೀರು ಹರಿಸಿ ಹಳ್ಳಿಗಳ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next