Advertisement
ನಾಗರಿಕತೆ ಬೆಳೆದಂತೆಲ್ಲಿ ಆರ್‌ಸಿಸಿ ಕಟ್ಟಡಗಳು ದೊಡ್ಡ ಪ್ರಮಾಣದಲ್ಲಿ ತಲೆ ಎತ್ತುತ್ತಿವೆ. ಆರ್‌ಸಿಸಿ ಕಟ್ಟಡಗಳು ಬಿಸಿಲನ್ನು ಪ್ರತಿಫಲಿಸಿ ಹೆಚ್ಚಿನ ಬಿಸಿಯನ್ನುಂಟು ಮಾಡುತ್ತವೆ. ಹಿಂದಿನ ತಲೆಮಾರಿನ ಜನರು ನಿರ್ಮಿಸುತ್ತಿದ್ದ ತೊಲೆ, ಜಂತಿ, ಕಂಬಗಳನ್ನು ಹೊಂದಿದ್ದ ಮಣ್ಣಿನ ಮನೆಗಳನ್ನು ತಣ್ಣಗಿರುತ್ತಿದ್ದವು. ಪ್ರಾಚೀನ ಕಾಲದ ತಂತ್ರಜ್ಞಾನವನ್ನು ಬಳಸಿಕೊಂಡಿರುವ ಐಐಎಸ್ಸಿ, ಹೊಸ ವಿಧಾನದಲ್ಲಿ ಮಣ್ಣಿನ ಮನೆಗಳನ್ನು ನಿರ್ಮಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. 1500 ಎಕರೆ ಪ್ರದೇಶದಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮನೆ ನಿರ್ಮಾಣದಲ್ಲಿ ವಿಶಿಷ್ಟ ಪ್ರಯೋಗವನ್ನು ನಡೆಸಿ ಯಶಸ್ವಿಯಾಗಿದೆ. ಗೃಹ ನಿರ್ಮಾಣಕ್ಕೆ ಸಾಲ ನೀಡುವ ಎಚ್‌ಡಿಎಫ್‌ಸಿ, ಐಐಎಸ್ಸಿಗೆ ಅನುದಾನ ನೀಡಿದೆ. ಈ ಅನುದಾನವನ್ನು ಬಳಸಿಕೊಂಡು ಎನ್. ಗೌರೀಪುರ ಗ್ರಾಮದಲ್ಲಿ ಪರಿಸರ ಸ್ನೇಹಿ ಸಮುದಾಯ ಭವನವನ್ನು ನಿರ್ಮಿಸಲಾಗಿದೆ.
Related Articles
Advertisement
ಅಡಿಪಾಯ ಹಾಗೂ ಗೋಡೆಗಳನ್ನು ನಿರ್ಮಿಸಿದ ನಂತರ ಕಾಂಕ್ರಿಟ್ ಬಳಸಿ ಮೇಲ್ಛಾವಣಿ ನಿರ್ಮಿಸಲಾಗುವುದು. ಆದರೆ ಐಐಎಸ್ಸಿ ನಿರ್ಮಿಸಿದ ಹೊಸ ರೀತಿಯ ಕಟ್ಟಡದಲ್ಲಿ ಆರ್‌ಸಿಸಿಯ ಮೇಲ್ಭಾಗದಲ್ಲಿ ಮತ್ತೂಂದು ಸ್ತರದ ಪೂರ್ವ ನಿರ್ಮಿತ ಕಾಂಕ್ರಿಟ್ ಸ್ಲ್ಯಾಬ್‌ಗಳ್ನು(ಪ್ರೀಕಾಸ್ಟ್ ಸ್ಲ್ಯಾಬ್) ಹಾಕಲಾಗಿದೆ. ಎರಡು ಸ್ತರಗಳ ಮೇಲ್ಭಾಗದಲ್ಲಿ ವಾಟರ್ ಪ್ರೂಪ್ ಹೊದಿಕೆ ಹಾಕಲಾಗಿದೆ. ಎರಡು ಸ್ತರಗಳ ನಡುವೆ 9 ಇಂಚಿನಷ್ಟು ಸ್ಥಳಾವಕಾಶವಿದೆ. ಈ ನಡುವಿನ ಜಾಗದಲ್ಲಿ ಗಾಳಿ ಸಂಚಾರವಾಗುತ್ತದೆ. ಹೀಗಾಗಿ ಸೂರ್ಯನ ಬೆಳಕು ಕೆಳಗಿನ ಆರ್‌ಸಿಸಿ ಪದರವನ್ನು ಬಿಸಿಯಾಗಲು ಅವಕಾಶ ನೀಡುವುದಿಲ್ಲ. ಆದ್ದರಿಂದ ಕಟ್ಟಡದ ಒಳಗೆ ತಣ್ಣನೆಯ ಅನುಭವ ನೀಡುತ್ತದೆ.
ಸಮುದಾಯ ಭವನದಲ್ಲಿ ದೊಡ್ಡ ದೊಡ್ಡ ಕಿಟಕಿಗಳನ್ನು ಅಳವಡಿಸಲಾಗಿದೆ. ಹೀಗಾಗಿ ಹೆಚ್ಚಿನ ಪ್ರಮಾಣದ ಗಾಳಿ ಹಾಗೂ ಬೆಳಕು ಪ್ರವೇಶಿಸುತ್ತದೆ. ಹೊಸ ಮಾದರಿಯ ಎಲ್ಇಡಿ ಟ್ಯೂಬ್‌ಲೈಟ್‌ಗಳು ಕಟ್ಟಡದ ಒಳಭಾಗದಲ್ಲಿ ತಣ್ಣನೆಯ ಬೆಳಕನ್ನು ನೀಡುತ್ತಿವೆ. ಶೀಘ್ರದಲ್ಲಿ ಕಟ್ಟಡದ ಉದ್ಘಾಟನೆ ನೆರವೇರಲಿದೆ. ನಂತರ ಕಟ್ಟಡವನ್ನು ಸಂಸ್ಥೆಯು ಸ್ಥಳೀಯ ಗ್ರಾಪಂಗೆ ಹಸ್ತಾಂತರಿಸಲಾಗುತ್ತದೆ.
ನೂತನ ಕಟ್ಟಡ ಇಲ್ಲಿನ ಹೆಚ್ಚಿನ ಉಷ್ಣತೆಯ ಪ್ರದೇಶಕ್ಕೆ ಹೇಳಿ ಮಾಡಿಸಿದಂತಿದೆ. ಬಿರು ಬೇಸಿಗೆಯ ದಿನಗಳಲ್ಲಿ ಕಟ್ಟಡದ ಒಳಗಿರುವ ಜನರಿಗೆ ತಣ್ಣನೆಯ ಅನುಭವ ನೀಡುತ್ತದೆ. ಹಣ ಉಳಿಸುವ ಹಾಗೂ ಸಾಂಪ್ರದಾಯಿಕ ಮಣ್ಣಿನ ಮನೆ ನಿರ್ಮಿಸುವುದರಿಂದ ವೆಚ್ಚದ ಉಳಿತಾಯದ ಜತೆಗೆ ತಣ್ಣನೆಯ ಅನುಭವ ಇಲ್ಲಿ ದೊರೆಯುತ್ತದೆ.
ಕಾರ್ಪೋರೆಟ್ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ನಿಧಿಯನ್ನು ಬಳಸಿ ಈ ಭವನನ್ನು ನಿರ್ಮಿಸಲಾಗಿದೆ. ಸಾಂಪ್ರದಾಯಿಕ ರೀತಿಯಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಹೆಚ್ಚಿನ ವೆಚ್ಚ ತಗಲುತ್ತದೆ. ಆದರೆ ಈ ತಂತ್ರಜ್ಞಾನದಿಂದ ಹಣದ ಉಳಿತಾಯದ ಜತೆಗೆ ಪರಿಸರ ಸ್ನೇಹಿಯಾಗಿರುತ್ತದೆ. ಪ್ರಾಚೀನ ಕಾಲದ ಜನರು ಬಳಸಿಕೊಂಡಿರುವ ವಿಧಾನವನ್ನು ಅಭಿವೃದ್ಧಿಪಡಿಸಲಾಗಿದೆ. ಐಐಎಸ್ಸಿ ಹಾಗೂ ಎಚ್‌ಡಿಎಫ್‌ಸಿ ಸಂಸ್ಥೆಗಳು ಸ್ಥಳೀಯರಿಗೆ ಈ ಸಮುದಾಯ ಭವವನ್ನು ಕೊಡುಗೆಯಾಗಿ ನೀಡಿವೆ.• ಪ್ರೊ| ಬಿ.ವಿ. ವೆಂಕಟರಾಮ ರೆಡ್ಡಿ,
ಮುಖ್ಯಸ್ಥರು, ಸಿ ಬೆಲ್ಟ್ ವಿಭಾಗ, ಐಐಎಸ್ಸಿ. ಎನ್. ಗೌರೀಪುರ ಗ್ರಾಮಕ್ಕೆ ಐಐಎಸ್ಸಿ ಹಾಗೂ ಎಚ್‌ಡಿಎಫ್‌ಸಿ ವತಿಯಿಂದ ಉಚಿತವಾಗಿ ಸಮುದಾಯ ಭವನವನ್ನು ನೀಡಲಾಗಿದೆ. ಹೊಸ ತಂತ್ರಜ್ಞಾನವನ್ನು ಪರಿಚಯಿಸುವ ಹಾಗೂ ನವೀಕರಿಸಲಾಗುವ ಇಂಧನಗಳನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಲಾಗಿದೆ. ಇದೇ ಮಾದರಿಯ ಕಟ್ಟಡವನ್ನು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಉಚಿತ ಕೊಡುಗೆಯಾಗಿ ನೀಡಲಾಗುವುದು.
• ಪ್ರೊ| ಬಿ.ಎನ್. ರಘುನಂದನ್,
ಮುಖ್ಯಸ್ಥರು, ಕುದಾಪುರ ಐಐಎಸ್ಸಿ.