ನಾಯಕನಹಟ್ಟಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾನುವಾರ ಪಟ್ಟಣದಲ್ಲಿ ಸೈಕಲ್ ನಲ್ಲಿ ಸುತ್ತಿ ತಿಪ್ಪೇರುದ್ರಸ್ವಾಮಿ ಜಾತ್ರೆಯ ಸಿದ್ಧತೆಗಳನ್ನು ಪರಿಶೀಲಿಸಿದರು. ರಜಾ ದಿನವಾದ ಭಾನುವಾರ ಎಸ್ಪಿ ಜಿ. ರಾಧಿಕಾ, ಎಎಸ್ಪಿ ಮಹನಿಂಗ ನಂದಗಾವಿ, ಡಿವೈಎಸ್ಪಿ ರೋಷನ್ ಜಮೀರ್, ಸಿಪಿಐ ಆನಂದ್, ಪಿಎಸ್‌ಐ ಎನ್. ರಘುನಾಥ್ ಅವರು ಮಾ. 12 ರಂದು ಜರುಗುವ ಜಾತ್ರೆಗಾಗಿ ಬೆಳಿಗ್ಗೆ 6:30ಕ್ಕೆ ಸ್ಥಳೀಯ ಪೊಲೀಸ್ ಸಿಬ್ಬಂದಿ ಜೊತೆಗೆ ಪಟ್ಟಣ ಹಾಗೂ ಸುತ್ತಲಿನ ಪ್ರದೇಶಗಳನ್ನು ಸೈಕಲ್‌ನಲ್ಲಿ ಸುತ್ತಾಟ ನಡೆಸಿದರು.
ಶಾಲಾ ವಿದ್ಯಾರ್ಥಿಗಳ ಸೈಕಲ್‌ಗಳನ್ನು ಸ್ಥಳೀಯ ಪೊಲೀಸರು ತೆಗೆದಿರಿಸಿಕೊಂಡಿದ್ದರು. ಹತ್ತಾರು ಸೈಕಲ್‌ಗಳಲ್ಲಿ ಪೊಲೀಸ್ ಅಧಿಕಾರಿಗಳ ತಂಡ ಪಟ್ಟಣದ ನಾನಾ ಪ್ರದೇಶಗಳಿವೆ ಭೇಟಿ ನೀಡಿತು. ಮನಮೈನಹಟ್ಟಿ ಕ್ರಾಸ್, ಜಗಳೂರು ಬಸ್ ನಿಲ್ದಾಣ, ತಳಕು ಕ್ರಾಸ್, ಒಳಮಠ, ಹೊರಮಠ ಹಾಗೂ ತೇರು ಬೀದಿಗಳಲ್ಲಿ ಪಾರ್ಕಿಂಗ್ ಸ್ಥಳಗಳನ್ನು ವೀಕ್ಷಿಸಿತು. ಸುತ್ತಾಟದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ರಾಧಿಕಾ, ಜಾತ್ರೆಗೆ ಪೊಲೀಸ್ ಇಲಾಖೆ ಸಂಪೂರ್ಣವಾಗಿ ಸಿದ್ಧಗೊಂಡಿದೆ. 2 ಲಕ್ಷಕ್ಕೂ ಹೆಚ್ಚು ಜನರು ಜಾತ್ರೆಗೆ ಸೇರುವ ನಿರೀಕ್ಷೆಯಿದೆ. ಎರಡೂ ದೇವಾಲಯಗಳಲ್ಲಿ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಬ್ಯಾರಿಕೇಡ್ ವ್ಯವಸ್ಥೆ ಒದಗಿಸಲಾಗಿದೆ. ಪಟ್ಟಣದ ಸುತ್ತಲಿನ ಐದು ಕಿಮೀ ವ್ಯಾಪ್ತಿಯ ಜಿಪಿಎಸ್ ಆಧಾರಿತ ಆ್ಯಪ್ ಸಿದ್ಧಪಡಿಸಲಾಗಿದೆ. ಈ ಬೃಹತ್ ನಕ್ಷೆಯನ್ನು ಹೊರಮಠ, ಒಳಮಠ, ಪೊಲೀಸ್ ಠಾಣೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಲಾಗುವುದು ಎಂದರು.
ಜಾತ್ರೆಯ ಸಿದ್ಧತೆಗಾಗಿ 1800ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಡಿವೈಎಸ್ಪಿ, ಸಿಪಿಐ ಸೇರಿದಂತೆ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಯನ್ನು ಬಳಕೆ ಮಾಡಲಾಗುತ್ತಿದೆ. ಇಡೀ ಪಟ್ಟಣವನ್ನು 18 ಸೆಕ್ಟರ್‌ಗಳನ್ನಾಗಿ ವಿಭಾಗಿಸಲಾಗಿದೆ. ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಸಂಪರ್ಕ ಒದಗಿಸಲು 22 ಸಹಾಯವಾಣಿಗಳನ್ನು ನಿರ್ಮಿಸಲಾಗಿದೆ. ಪಟ್ಟಣವನ್ನು ಸಂಪರ್ಕಿಸುವ 7 ರಸ್ತೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗುವುದು. ರಥದ ಸುತ್ತಲೂ 150 ಕೆಎಸ್‌ಆರ್‌ಪಿ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಜನ ಸಮೂಹದ ಮೇಲೆ ನಿಗಾ ಇಡಲು 3 ವಾಚ್ ಟವರ್ ಹಾಗೂ 10 ಸ್ಕೈ ಸೆಂಟ್ರಿಗಳನ್ನು ನಿಯೋಜಿಸಲಾಗುವುದು. ತೇರು ಬೀದಿ, ಹೊರಮಠ,ಒಳಮಠಗಳಲ್ಲಿ ಸಿಸಿ ಕಣ್ಗಾವಲು ಇಡಲಾಗಿದೆ. 7 ತುರ್ತು ಪ್ರತಿಕ್ರಿಯಾ ದಳ (ಕ್ಯೂಆರ್‌ಟಿ) ತಂಡ, 3 ಕೆಎಸ್‌ಆರ್‌ಪಿ ತಂಡಗಳನ್ನು ಬಂದೋಬಸ್ತ್ಗೆ ಬಳಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಜಾತ್ರೆಯ ಬಸ್ ನಿಲ್ದಾಣಗಳು ದೇವಾಲಯದಿಂದ ಒಂದೆರಡು ಕಿಮೀ ದೂರವಿದೆ. ಇದರಿಂದ ಮಕ್ಕಳು ಹಾಗೂ ವೃದ್ಧರಿಗೆ ತೊಂದರೆಯಾಗುತ್ತದೆ ಎನ್ನುವ ಅಭಿಪ್ರಾಯವಿದೆ. ಇದನ್ನು ಸರಿಪಡಿಸಲು ಬಸ್ ನಿಲ್ದಾಣದಿಂದ ದೇವಾಲಯದವರೆಗೆ ಆಟೋಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕಡಿಮೆ ದರದಲ್ಲಿ ಆಟೋ ಸೇವೆ ಒದಗಿಸಲು ಸೂಚಿಸಲಾಗಿದೆ. ಪಟ್ಟಣದ ಪರಿಮಿತಿಯಲ್ಲಿ ಜಾತ್ರೆಯ ದಿನ ಬಸ್, ಲಾರಿ ಸೇರಿದಂತೆ ಬೃಹತ್ ವಾಹನಗಳನ್ನು ಪಟ್ಟಣದ ಒಳಗೆ ನಿಷೇಧಿಸಲಾಗಿದೆ ಎಂದರು.
ತೇರು ಬೀದಿಯಲ್ಲಿ ರಥದ ಪರಿಶೀಲನೆ ನಡೆಸಲಾಯಿತು. ನಂತರ ರಥವನ್ನು ನಿಯಂತ್ರಿಸುವ ಸಿಬ್ಬಂದಿ ಜತೆಗೆ ಎಸ್ಪಿ ಚರ್ಚೆ ನಡೆಸಿದರು. ಹತ್ತಾರು ಸೈಕಲ್‌ಗಳು ಹಾಗೂ ಅವುಗಳ ಮುಂದೆ ಹಾಗೂ ಹಿಂದೆ ಇದ್ದ ಪೊಲೀಸ್ ಬೆಂಗಾವಲು ಪಡೆ ಪಟ್ಟಣದ ನಾಗರಕರಲ್ಲಿ ಕುತೂಹಲ ಮೂಡಿಸಿತ್ತು.