Advertisement

38.50 ಲಕ್ಷ ರೂ. ಕಾಣಿಕೆ ಸಂಗ್ರಹ

04:07 PM Oct 16, 2019 | Naveen |

ನಾಯಕನಹಟ್ಟಿ: ಮಧ್ಯ ಕರ್ನಾಟಕದ ಪ್ರಮುಖ ದೇವಾಲಯವಾಗಿರುವ ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಮಂಗಳವಾರ ಹುಂಡಿ ಎಣಿಕಾ ಕಾರ್ಯ ನಡೆಯಿತು. ಒಟ್ಟು 38.50 ಲಕ್ಷ ರೂ. ಕಾಣಿಕೆ ಸಂಗ್ರಹಗೊಂಡಿದೆ.

Advertisement

ಒಳಮಠದ ಹುಂಡಿಗಳಲ್ಲಿ 30,51,395 ರೂ., ಹೊರಮಠದ ಹುಂಡಿಗಳಲ್ಲಿ 5,13,270 ರೂ. ಹಾಗೂ ದಾಸೋಹದ ಹುಂಡಿಯಲ್ಲಿ 2,85,415 ರೂ. ಸೇರಿದಂತೆ ಎರಡು ದೇವಾಲಯ ಹಾಗೂ ದಾಸೋಹದ  ಹುಂಡಿಗಳಲ್ಲಿ ಒಟ್ಟು 38,50,080 ರೂ. ಸಂಗ್ರಹವಾಗಿದೆ.

ಕಳೆದ ವರ್ಷ ನವೆಂಬರ್‌ 22 ರಂದು ಕಾಣಿಕೆ ಎಣಿಕೆ ಮಾಡಿದಾಗ 45,23,301 ರೂ. ದೇಣಿಗೆ ಹಣವನ್ನು ಭಕ್ತರು ನೀಡಿದ್ದರು. ಈ ಬಾರಿ ಕಳೆದ ವರ್ಷಕ್ಕಿಂತ ಒಂದು ತಿಂಗಳು ಮುಂಚೆ ಹುಂಡಿ ಹಣ ಎಣಿಕೆ ಮಾಡಲಾಗಿದೆ. ಹೀಗಾಗಿ 6,73,221 ರೂ. ಕಡಿಮೆ ಹಣ ಸಂಗ್ರಹವಾಗಿದೆ.

ಬೆಳ್ಳಿ ವಸ್ತುಗಳೇ ಹೆಚ್ಚು: ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಪ್ರಮಾಣದಲ್ಲಿ ಬೆಳ್ಳಿ ವಸ್ತುಗಳನ್ನು ಭಕ್ತರು ಹುಂಡಿಗೆ ಹಾಕಿದ್ದರು. ಬೆಳ್ಳಿಯ ಕಣ್ಣು, ತೊಟ್ಟಿಲು, ನಾಗರ ಹೆಡೆ, ಉಂಗುರ, ಛತ್ರಿ, ಪಾದುಕೆ, ತಟ್ಟೆ, ಇಷ್ಟಲಿಂಗದ ಕರಡಿಗೆ, ಮೀಸೆ ಸೇರಿದಂತೆ ನಾನಾ ವಸ್ತುಗಳಿದ್ದವು. ಮಕ್ಕಳಾಗಲಿ ಎಂದು ಹರಕೆ ಸಲ್ಲಿಸಿದವರು ಬೆಳ್ಳಿ ತೊಟ್ಟಿಲನ್ನು ಅರ್ಪಿಸುತ್ತಾರೆ.

ಹೀಗಾಗಿ 14 ಬೆಳ್ಳಿ ತೊಟ್ಟಿಲು ಹುಂಡಿಯಲ್ಲಿದ್ದವು. ಇವುಗಳ ಜತೆಗೆ ಬಂಗಾರದ ಉಂಗುರ, ಚೈನ್‌ ಸೇರಿದಂತೆ ನಾನಾ ವಸ್ತುಗಳಿದ್ದವು. ಅಲ್ಲದೆ ಸಿಂಗಪುರದ 20 ಸೆಂಟ್‌ ನಾಣ್ಯ ಹಾಗೂ ನ್ಯೂಜಿಲ್ಯಾಂಡ್‌ ನಾಣ್ಯಗಳು ಹುಂಡಿಯಲ್ಲಿ ಕಂಡು ಬಂದವು. ಚಲಾವಣೆಯನ್ನು
ನಿಷೇಧಿಸಲಾಗಿರುವ 500 ರೂ. ಮೌಲ್ಯದ 11 ನೋಟುಗಳನ್ನು ಭಕ್ತರು ಹುಂಡಿಗೆ ಸಮರ್ಪಿಸಿದ್ದರು.

Advertisement

ಹಲವಾರು ಭಕ್ತರು ಬಂಗಾರ ಹಾಗೂ ಬೆಳ್ಳಿಯ ವಸ್ತುಗಳನ್ನು ರಶೀದಿ ಸಹಿತವಾಗಿ ಹುಂಡಿಗೆ ಹಾಕಿದ್ದು ಕಂಡು ಬಂತು. ಈ ಬಾರಿ ದೊಡ್ಡ ಪ್ರಮಾಣದಲ್ಲಿ ಚಿಲ್ಲರೆ ನಾಣ್ಯಗಳು ಸಂಗ್ರಹವಾಗಿರುವುದು ವಿಶೇಷ.

ಹೊರಮಠದಲ್ಲಿ 1,68,605 ರೂ., ಒಳಮಠದಲ್ಲಿ 51,275 ರೂ. ಹಾಗೂ ದಾಸೋಹ ಹುಂಡಿಯಲ್ಲಿ 6,575 ರೂ. ಸೇರಿದಂತೆ ಒಟ್ಟು 2,26,455 ರೂ. ಮೌಲ್ಯದ ಚಿಲ್ಲರೆ ನಾಣ್ಯಗಳು ಸಂಗ್ರಹವಾಗಿದ್ದವು. ಭಾರೀ ಪ್ರಮಾಣದ ಚಿಲ್ಲರೆ ಹಣವನ್ನು ಬ್ಯಾಂಕ್‌ ಸಿಬ್ಬಂದಿಗಳು ನಾಣ್ಯದ ಅವಶ್ಯಕತೆ ಇರುವ ಗ್ರಾಹಕರಿಗೆ ವಿತರಿಸಿದರು.

ಒಂದು ತಿಂಗಳು ಮುಂಚೆ ಎಣಿಕೆ ಏಕೆ?: ಕಳೆದ ಸೆ. 30 ರಂದು ಹೊರಮಠದ ಹುಂಡಿ ಹಣವನ್ನು ಕಳುವು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಒಂದು ತಿಂಗಳ ಮುಂಚೆ ಹಣವನ್ನು ಎಣಿಕೆ ಮಾಡಲಾಗಿದೆ. ವರ್ಷದಲ್ಲಿ ಮೂರು ಬಾರಿ ಹುಂಡಿ ಹಣವನ್ನು ಎಣಿಕೆ ಮಾಡಲಾಗುತ್ತದೆ. ಹುಂಡಿ ಎಣಿಕೆ ಕಾರ್ಯದ ವೀಡಿಯೋ ಚಿತ್ರೀಕರಣ ಮಾಡಲಾಯಿತು. ಸಂಗ್ರಹವಾದ ಹಣವನ್ನು ಸ್ಥಳೀಯ ಕೆನರಾ ಬ್ಯಾಂಕ್‌ನಲ್ಲಿನ ತಿಪ್ಪೇರುದ್ರಸ್ವಾಮಿ ದೇವಾಲಯದ ಖಾತೆಗೆ ಜಮಾ ಮಾಡಲಾಯಿತು. ಎಣಿಕೆ ಕಾರ್ಯದಲ್ಲಿ ಕಂದಾಯ ಇಲಾಖೆಯ 70 ಸಿಬ್ಬಂದಿ, ಕೆನರಾ ಬ್ಯಾಂಕ್‌ ಸಿಬ್ಬಂದಿ ಹಾಗೂ ದೇವಾಲಯ ಸಿಬ್ಬಂದಿ ಪಾಲ್ಗೊಂಡಿದ್ದರು.

ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ, ದೇವಾಲಯದ ಇಒ ಎಸ್‌.ಪಿ.ಬಿ ಮಹೇಶ್‌, ಉಪ ತಹಶೀಲ್ದಾರ್‌ ಟಿ. ಜಗದೀಶ್‌, ಮುಜರಾಯಿ ತಹಶೀಲ್ದಾರ್‌ ಸಮೀವುಲ್ಲಾ, ಮುಜರಾಯಿ ಇಲಾಖೆ ಸಿಬ್ಬಂದಿ ರಂಗಪ್ಪ, ರೇಣುಕಮ್ಮ, ದೇವಾಲಯ ಸಮಿತಿ ಅಧ್ಯಕ್ಷ ಜೆ.ಪಿ. ರವಿಶಂಕರ್‌, ವ್ಯವಸ್ಥಾಪನ ಸಮಿತಿ ಸದಸ್ಯರಾದ ರುದ್ರಮುನಿ, ನಾಗಣ್ಣ, ಮುನಿಯಪ್ಪ, ಗೋವಿಂದರಾಜ್‌, ಎಸ್‌.ವಿ.ಟಿ ರೆಡ್ಡಿ, ಹಂಸವೇಣಿ, ಕೆನರಾ ಬ್ಯಾಂಕ್‌ ವ್ಯವಸ್ಥಾಪಕ ಈಶ್ವರಪ್ಪ, ಸಿಬ್ಬಂದಿ ಸತೀಶ್‌, ವಿರೂಪಾಕ್ಷಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next