Advertisement

ರೈತನ ಕೈ ಹಿಡಿದ ದಾಳಿಂಬೆ!

04:26 PM Mar 07, 2020 | Naveen |

ನಾಯಕನಹಟ್ಟಿ: ಚಳ್ಳಕೆರೆ ತಾಲೂಕು ತೊರೆಕೋಲಮ್ಮನಹಳ್ಳಿ ಗ್ರಾಮದ ರೈತ ಕೆ.ನಾಗರಾಜ್‌ ನಾಲ್ಕು ಎಕರೆಯಲ್ಲಿ ನೂರು ಟನ್‌ ದಾಳಿಂಬೆ ಬೆಳೆದು ಗಮನ ಸೆಳೆದಿದ್ದಾರೆ.

Advertisement

ನಾಲ್ಕು ಎಕರೆಯಲ್ಲಿ ಕೆಂಪು ಮಣ್ಣಿನ ಭೂಮಿಯಲ್ಲಿ 1900 ದಾಳಿಂಬೆ ಗಿಡಗಳನ್ನು ಬೆಳೆಸಿದ್ದಾರೆ. ಮೂರು ಬೋರ್‌ ವೆಲ್‌ಗ‌ಳಿಂದ ತಲಾ ಎರಡು ಇಂಚ್‌ನಷ್ಟು ನೀರು ದೊರೆಯುತ್ತಿದೆ. ಇಡೀ ತೋಟಕ್ಕೆ ಡ್ರಿಪ್‌ ಮೂಲಕ ನೀರು ಹಾಯಿಸಲಾಗುವುದು. ಗಿಡಗಳ ಮೇಲ್ಭಾಗದಲ್ಲಿ ಗ್ಲೋಕವರ್‌ ಬಳಕೆ, ಜೈವಿಕ ಬೇಲಿ ಸೇರಿದಂತೆ ನಾನಾ ವಿಧಾನಗಳಿಂದ ದಾಖಲೆಯ ಇಳುವರಿ ಪಡೆದಿದ್ದಾರೆ.

ಗಿಡವನ್ನು ನಾಟಿ ಮಾಡುವುದಕ್ಕೆ ಮುಂಚೆ ಗುಂಡಿ ತೆಗೆದು 70 ಕೆ.ಜಿ.ಯಷ್ಟು ಕೊಟ್ಟಿಗೆ
ಗೊಬ್ಬರ ಹಾಕಲಾಗಿದೆ. ನಂತರ ಹಸಿರೆಲೆ ಗೊಬ್ಬರದ ಜತೆಗೆ ಗಿಡ ನಾಟಿ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ದಾಳಿಂಬೆ ಹಣ್ಣು ಉತ್ತಮ ಬಣ್ಣ ಹಾಗೂ ಗಾತ್ರ ಹೊಂದಿರಬೇಕು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬಿಸಿಲಿನಿಂದಾಗಿ ಹಣ್ಣಿನ ಬಣ್ಣ ಕೆಡುತ್ತಿದೆ. ಜತೆಗೆ ಹಣ್ಣನ್ನು ಪಕ್ಷಿಗಳಿಂದ ಹಾಗೂ ಗಾಳಿಯಿಂದ ಹರಡುವ ರೋಗಗಳಿಂದ ರಕ್ಷಿಸಲು ನಾಗರಾಜ್‌ ಗ್ಲೋಕವರ್‌ಗಳನ್ನು ಬಳಸಿದ್ದಾರೆ. ಹತ್ತು ಅಡಿ ಅಗಲದ ಪ್ಲಾಸ್ಟಿಕ್‌ ಹಾಗೂ ಕಾಟನ್‌ ಮಿಶ್ರಿತ ಕವರ್‌ ಇಡೀ ಗಿಡಕ್ಕೆ ಹರಡಿದ್ದಾರೆ. ಇದಕ್ಕಾಗಿ ಕಟ್ಟಿಗೆಗಳನ್ನು ಆಧಾರವಾಗಿ ಬಳಸಿದ್ದಾರೆ.

ತೋಟದಲ್ಲಿರುವ ಎಲ್ಲ 1900 ದಾಳಿಂಬೆ ಗಿಡಗಳಿಗೆ ಗ್ಲೋ ಕವರ್‌ ಹೊದಿಸಲಾಗಿದೆ.
ದಾಳಿಂಬೆಗೆ ಗಾಳಿಯಿಂದ ಹರಡುವ ಟ್ರಿಪ್ಸ್‌, ಕಾಯಿಕೊರೆಕ ಹೆಚ್ಚಿನ ಸಮಸ್ಯೆ ಉಂಟು ಮಾಡುತ್ತವೆ. ಸುತ್ತಲಿನ ಹೊಲಗಳಿಂದ ಹರಡುವ ರೋಗಗಳನ್ನು ತಡೆಯಲು ಜೀವಂತ ಬೇಲಿ ನಿರ್ಮಿಸಲಾಗಿದೆ. ನಾಲ್ಕು ಎಕರೆ ದಾಳಿಂಬೆ ತೋಟದ ಸುತ್ತಲೂ ಕಬ್ಬಿಣದ ಮುಳ್ಳು ತಂತಿ ಹಾಕಲಾಗಿದೆ.

ತಂತಿಯ ಮೇಲ್ಭಾಗದಲ್ಲಿ ಗಿಡಗಳು ಹಾಗೂ ಬಳ್ಳಿಗಳನ್ನು ಬೆಳೆಸಿದ್ದಾರೆ. ತೋಟದ
ಸುತ್ತಲಿರುವ ಜೀವಂತ ತಂತಿ ಬೇಲಿ ಜನರು ಹಾಗೂ ಕೀಟಗಳಿಂದ ರಕ್ಷಣೆ ಒದಗಿಸಿದೆ.
ಜೀವಂತ ತಂತಿ ಬೇಲಿ ನಿರ್ಮಾಣದಿಂದ ಗಾಳಿ ಹಾಗೂ ಕೀಟಗಳ ಪ್ರಸಾರಕ್ಕೆ ತಡೆ ಒಡ್ಡಿದೆ.
ಜತೆಗೆ ಇದು ಒಣಗಿದ ನಂತರ ಉತ್ತಮ ಕಾಂಪೋಸ್ಟ್‌ ಗೊಬ್ಬರವಾಗಿ ಮಾರ್ಪಾಟು ಹೊಂದುತ್ತದೆ.

Advertisement

ಗಿಡಗಳನ್ನು ಬೆಳೆಸಿದ ಮೊದಲ ವರ್ಷದಲ್ಲಿ ನಾಲ್ಕು ಎಕರೆ ತೋಟದಿಂದ 45 ಟನ್‌,
ಎರಡನೇ ವರ್ಷದಲ್ಲಿ 60 ಟನ್‌, ಮೂರನೇ ವರ್ಷದಲ್ಲಿ 78 ಟನ್‌ ಇದೀಗ 100 ಟನ್‌ ಇಳುವರಿ ಪಡೆದಿದ್ದಾರೆ. ವರ್ಷದಿಂದ ವರ್ಷಕ್ಕೆ ಹೊಸ ವಿಧಾನಗಳ ಅಳವಡಿಕೆಯಿಂದ ಇಳುವರಿ ಪ್ರಮಾಣ ಹೆಚ್ಚಾಗುತ್ತಿದೆ. ಪ್ರತಿ ಎಕರೆಗೆ ಸರಾಸರಿ 25 ಟನ್‌ ದಾಳಿಂಬೆ ಫಸಲು ಪಡೆದಿದ್ದಾರೆ.

ಪ್ರತಿ ಗಿಡದಿಂದ ಸುಮಾರು 60 ಕೆಜಿ ಇಳುವರಿ ಪಡೆಯಲಾಗುತ್ತಿದೆ. ಪ್ರತಿ ಗಿಡವು ಹೆಚ್ಚಿನ ಫಸಲಿನಿಂದಾಗಿ ನೆಲ ಮುಟ್ಟುತ್ತಿದೆ. ಹಣ್ಣಿನ ಭಾರದಿಂದ ನೆಲಕ್ಕೆ ಬೀಳುವುದನ್ನು ತಡೆಯಲು ಗಿಡಗಳಿಗೆ ಆಧಾರವಾಗಿ ಕಟ್ಟಿಗೆ ಒದಗಿಸಲಾಗಿದೆ. ಕಳೆದ ಬಾರಿಯ ಕಟಾವಿನಲ್ಲಿ ದೊಡ್ಡ ಗಿಡದಲ್ಲಿ ಬಿಟ್ಟಿದ್ದ ಹಣ್ಣು 1ಕೆಜಿ 200 ಗ್ರಾಂ ತೂಕವಿತ್ತು. ಬೆಂಗಳೂರಿನ ವರ್ತಕರು ತೋಟದಲ್ಲಿಯೇ ಬೆಳೆ ಖರೀದಿಸುತ್ತಿದ್ದಾರೆ.

ಪ್ರತಿ ಕೆಜಿಗೆ 85 ರಿಂದ 90 ರೂ. ಬೆಲೆ ದೊರೆತಿದೆ. ನಾಲ್ಕು ಎಕರೆ ಭೂಮಿಯಿಂದ ಲಕ್ಷಾಂತರ ರೂ. ಆದಾಯ ಗಳಿಸಿದ ಇವರು ಇತರ ರೈತರಿಗೆ ಮಾದರಿಯಾಗಿದ್ದಾರೆ. ಆರ್‌ಎಂಪಿ ವೈದ್ಯರಾಗಿದ್ದ ಇವರು ತಮ್ಮ ವೃತ್ತಿಯನ್ನು ಬಿಟ್ಟು ಪೂರ್ಣ ಪ್ರಮಾಣದಲ್ಲಿ ರೈತರಾಗಿ ಜೀವನ
ರೂಪಿಸಿಕೊಂಡಿದ್ದಾರೆ. ದಾಳಿಂಬೆಯಿಂದ ಬಂದ ಲಾಭದಲ್ಲಿ ಇನ್ನೂ ಐದು ಎಕರೆ ಜಮೀನು ಖರೀದಿಸಿರುವ ಇವರು ಹೊಸ ಹೊಲದಲ್ಲಿ ಡ್ರಾಗನ್‌ ಫ್ರೂಟ್ಸ್‌ ಗಳನ್ನು ಬೆಳೆಯುವ
ಚಿಂತನೆಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next