Advertisement

ಪೊಲೀಸ್‌ ಇಲಾಖೆಗೆ ತಲೆನೋವಾದ ಹುಂಡಿ ಕಳ್ಳರು

05:24 PM Oct 27, 2019 | Naveen |

ನಾಯಕನಹಟ್ಟಿ: ತುರುವನೂರು ಹೋಬಳಿಯ ದೊಡ್ಡಘಟ್ಟ ಗ್ರಾಮದ ಲಕ್ಷ್ಮೀ ನರಸಿಂಹಸ್ವಾಮಿ ಹಾಗೂ ಈಶ್ವರ ದೇವಾಲಯಗಳಲ್ಲಿ ಶುಕ್ರವಾರ ರಾತ್ರಿ ಹುಂಡಿಗಳನ್ನು ಒಡೆದು ಹಣ ದೋಚಲಾಗಿದೆ. ಒಂದು ತಿಂಗಳ ಅವಧಿಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದ ಎಂಟನೇ ಹುಂಡಿ ಕಳ್ಳತನದ ಪ್ರಕರಣ ಇದಾಗಿದ್ದು, ಹುಂಡಿ ಕಳ್ಳರು ಪೊಲೀಸ್‌ ಇಲಾಖೆಗೆ ತಲೆನೋವಾಗಿ ಪರಿಣಮಿಸಿದ್ದಾರೆ.

Advertisement

ತುರುವನೂರು ಸಮೀಪದ ದೊಡ್ಡಘಟ್ಟ ಗ್ರಾಮದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಹಾಗೂ ಈಶ್ವರ ದೇವಾಲಯಗಳಲ್ಲಿನ ಬಾಗಿಲಿನ ಬೀಗ ಒಡೆದು ಕಳ್ಳರು ದೇವಾಲಯದ ಒಳಗೆ ನುಗ್ಗಿದ್ದಾರೆ. ನಂತರ ಹುಂಡಿಯನ್ನು ದೇವಾಲಯದಿಂದ ಹೊರಗೆ ತೆಗೆದುಕೊಂಡು ಹೋಗಿದ್ದಾರೆ. ಹುಂಡಿಯ ಮೇಲೆ ದೊಡ್ಡ ಕಲ್ಲು ಎತ್ತಿ ಹಾಕಿ ಹುಂಡಿಯನ್ನು ಒಡೆದಿದ್ದಾರೆ. ನಂತರ ಹುಂಡಿಯ ಹಣವನ್ನು ಕಳವು ಮಾಡಲಾಗಿದೆ. ಅರ್ಚಕರು ಸೇರಿದಂತೆ ಯಾವುದೇ ವ್ಯಕ್ತಿಗಳು ದೇವಾಲಯದಲ್ಲಿ ಮಲಗುವುದಿಲ್ಲ. ಇದನ್ನು ಅರಿತ ಕಳ್ಳರು ಕೃತ್ಯ ಎಸಗಿದ್ದಾರೆ. ಎರಡು ದೇವಾಲಯದಲ್ಲಿನ ಹುಂಡಿಗಳಲ್ಲಿನ ಪೂರ್ಣ ಹಣವನ್ನು ದೋಚಲಾಗಿದೆ. ಘಟನಾ ಸ್ಥಳಕ್ಕೆ ತುರುವನೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ಒಂದು ತಿಂಗಳಿನಿಂದ ಜಿಲ್ಲೆಯ ಚಳ್ಳಕೆರೆ, ಹೊಸದುರ್ಗ, ಹಿರಿಯೂರು ತಾಲೂಕುಗಳಲ್ಲಿ ನಿರಂತರವಾಗಿ ದೇವಾಲಯಗಳ ಹುಂಡಿ ಹಣ ಕಳ್ಳತನಗಳು ನಡೆಯುತ್ತಿವೆ. ಒಂದು ತಿಂಗಳ ಅವ ಧಿಯಲ್ಲಿ ಜಿಲ್ಲೆಯ ಮುಜರಾಯಿ ಇಲಾಖೆಯ ಎರಡು ದೇವಾಲಯಗಳು ಹಾಗೂ ಸ್ಥಳೀಯವಾಗಿರುವ ಆರು ದೇವಾಲಯಗಳ ಹುಂಡಿ ಹಣ ಕಳುವಾಗಿವೆ.

ಸೆ. 30 ರಂದು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಹೊರಮಠ ದೇವಾಲಯದಲ್ಲಿ ಹುಂಡಿ ಹಣವನ್ನು ದೋಚಲಾಗಿತ್ತು. ದೇಗುಲದಲ್ಲಿದ್ದ ಐದು ಹುಂಡಿಗಳಲ್ಲಿ ಒಂದು ಹುಂಡಿಯ ಹಣವನ್ನು ಕಳವು ಮಾಡಲಾಗಿದೆ. ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಕಳ್ಳತನವಾದ ನಾಲ್ಕು ದಿನಗಳ ನಂತರ ಅ.2 ರಂದು ಹಿರಿಯೂರು ತಾಲೂಕಿನ ರಂಗನಾಥ ಪುರದ ಶ್ರೀರಂಗನಾಥ ಸ್ವಾಮಿ ದೇವಾಲಯದ ಹುಂಡಿಯಲ್ಲಿನ ಹಣವನ್ನು ಕಳವು ಮಾಡಲಾಗಿದೆ.

ಅ.22 ರ ಮಂಗಳವಾರ ಹೊಸದುರ್ಗ ತಾಲೂಕಿನ ಹಾಲುರಾಮೇಶ್ವರ ದೇವಾಲಯದ ಎರಡು ಹುಂಡಿಗಳನ್ನು ದೋಚಲಾಗಿದೆ. ದೇವಾಲಯದಿಂದ ಎರಡು ಹುಂಡಿಗಳನ್ನು ದೇವಾಲಯದ ಸಮೀಪದಲ್ಲಿನ ಜಮೀನಿಗೆ ತೆಗೆದುಕೊಂಡು ಹೋಗಿ ಹಣವನ್ನು ಕದ್ದೊಯ್ಯಲಾಗಿದೆ. ಕಳೆದ ವಾರ ಹಿರಿಯೂರು ತಾಲೂಕಿನ ಐಮಂಗಲ ಹೋಬಳಿಯ ಗುಡಿಹಳ್ಳಿ ಗ್ರಾಮದ ಮೈಲಾರಲಿಂಗೇಶ್ವರ ದೇವಾಲಯದಲ್ಲಿ ಹುಂಡಿ ಹಣವನ್ನು ಕಳವು ಮಾಡಲಾಗಿದೆ.

Advertisement

ಅ. 14 ರಂದು ಚಳ್ಳಕೆರೆ ತಾಲೂಕು ಎನ್‌. ಗೌರೀಪುರ ಗ್ರಾಮದ ಮಲಿಯಮ್ಮ ದೇವಿ ದೇವಾಲಯ ಹುಂಡಿಯಲ್ಲಿನ ಹಣವನ್ನು ಕಳ್ಳತನ ಮಾಡಲಾಗಿದೆ. ಶುಕ್ರವಾರ ತುರುವನೂರು ಗ್ರಾಮದ ಸಮೀಪವಿರುವ ದೊಡ್ಡಘಟ್ಟದ ಎರಡು ದೇವಾಲಯಗಳಲ್ಲಿ ಹುಂಡಿ ಹಣ ಕಳವು ಮಾಡಲಾಗಿದೆ. ಈ ಎಲ್ಲ ಪ್ರಕರಣಗಳಲ್ಲಿ ಸಾಮ್ಯತೆ ಇದೆ. ನುರಿತ ಹಾಗೂ ಅನುಭವಿ ಕಳ್ಳರ ತಂಡ ಇದರಲ್ಲಿ ಶಾಮೀಲಾಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಜಿಲ್ಲೆಯ ನಾನಾ ಕಡೆಗಳಲ್ಲಿ ಒಂದು ವಾರದ ಬಿಡುವಿನ ನಂತರ ಕಳ್ಳತನಗಳು ನಡೆಯುತ್ತಿವೆ. ನೆರೆಯ ಆಂಧ್ರ ಮೂಲದ ತಂಡ ಇಲ್ಲಿನ ಪ್ರದೇಶದಲ್ಲಿ ಸಕ್ರಿಯವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ ಹುಂಡಿ ಕಳ್ಳರನ್ನು ಪತ್ತೆಹಚ್ಚಬೇಕಾಗಿದೆ. ಭಕ್ತರು ಹಾಕಿದ ಹುಂಡಿ ಹಣ ದೇವಾಲಯದ ಅಭಿವೃದ್ಧಿಗೆ ಬಳಕೆಯಾಗಬೇಕು. ಆದರೆ ಕಳ್ಳರ ಪಾಲಾಗುತ್ತಿರುವುದು ಭಕ್ತರ ಕಳವಳಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next