ನಾಯಕನಹಟ್ಟಿ: ನಿಶ್ಚಿತ ಆದಾಯಕ್ಕೆ ಹೈನುಗಾರಿಕೆ ಸಹಕಾರಿ ಎಂದು ಶಿವಮೊಗ್ಗ ಹಾಲು ಉತ್ಪಾದಕರ ಸಂಘದ ಉಪ ವ್ಯವಸ್ಥಾಪಕ ಡಾ| ತಿಪ್ಪೇಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ನಡೆದ ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು. ಕೃಷಿಯಲ್ಲಿ ನಿಶ್ಚಿತ ಆದಾಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ನೀರು, ವಿದ್ಯುತ್, ಉತ್ಪನ್ನಗಳ ದರದಲ್ಲಿನ ಏರಿಳಿತಗಳಿಂದ ಕೃಷಿಯಲ್ಲಿ ನಿಶ್ಚಿತ ಆದಾಯ ನಿರೀಕ್ಷಿಸುವುದು ಸಾಧ್ಯವಿಲ್ಲ. ಆದರೆ ಹೈನುಗಾರಿಕೆಯಲ್ಲಿ ಸ್ಪಷ್ಟವಾದ ನಿಯಮಗಳನ್ನು ಅನುಸರಿಸಿದರೆ ಉತ್ತಮ ಆದಾಯ ದೊರೆಯುವುದು ಸಾಧ್ಯವಿದೆ. ಪ್ರತಿ ಹತ್ತು ಲೀಟರ್‌ಗೆ ಐದು ಕೆಜಿ ಪಶು ಆಹಾರ ಹಾಗೂ ಪ್ರತಿ ದಿನ ಎರಡು ಬಾರಿ ಖನಿಜಾಂಶಗಳನ್ನು ನೀಡಬೇಕು. ಸರಿಯಾದ ಪೋಷಣೆಯಿದ್ದರೆ ಉತ್ತಮ ಆದಾಯ ಪಡೆಯಲು ಸಾಧ್ಯ ಎಂದರು.
ಒಕ್ಕೂಟ ಪ್ರತಿ ಲೀಟರ್ ಹಾಲಿಗೆ 27 ರೂ. ನೀಡುತ್ತಿದೆ. ಪ್ರತಿ ಲೀಟರ್ ಹಾಲಿಗೆ ಸರ್ಕಾರ 6 ರೂ. ಸಹಾಯಧನ ಒದಗಿಸುತ್ತಿದೆ. ಹೀಗಾಗಿ ರೈತರು ಪಶುಸಂಗೋಪನೆಯನ್ನು ಉದ್ಯಮವಾಗಿ ಮಾಡಿಕೊಳ್ಳಬೇಕು. ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘ 1.77 ಲಕ್ಷ ರೂ. ವಾರ್ಷಿಕ ಲಾಭ ಗಳಿಸಿದೆ. ಇದು ಇನ್ನಷ್ಟು ಹೆಚ್ಚಬೇಕು. ಸಮೀಪದಲ್ಲಿ ಬೃಹತ್ ಹಾಲು ಶೀತಲೀಕರಣ ಕೇಂದ್ರ ಸ್ಥಾಪನೆ ಆಗಿರುವುದರಿಂದ ಇಲ್ಲಿನ ಕೇಂದ್ರಕ್ಕೆ ಲಾಭಾಂಶ ಕಡಿಮೆಯಾಗಿದೆ ಎಂದು ತಿಳಿಸಿದರು.
ನಾಯಕನಹಟ್ಟಿ ಪಟ್ಟಣಕ್ಕೆ ಬೃಹತ್ ಹಾಲು ಶೀತಲೀಕರಣ ಕೇಂದ್ರ (ಬಿಎಂಸಿ) ನೀಡಬೇಕೆಂದು ನಿರ್ದೇಶಕರಾದ ಟಿ.ಕೆ. ಮುರುಗೇಶ್, ರಾಜಣ್ಣ ಮತ್ತಿತರರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಉಪ ವ್ಯವಸ್ಥಾಪಕ ಡಾ| ತಿಪ್ಪೇಸ್ವಾಮಿ, ಸಂಘದಿಂದ ಬಿಎಂಸಿಗೆ ನಿರ್ಣಯ ಅಂಗೀಕರಿಸಿ ನೀಡಿದ ನಂತರ ಇದರ ಬಗ್ಗೆ ಕಾರ್ಯಕಾರಿ ಮಂಡಳಿಯಲ್ಲಿ ತೀರ್ಮಾನಿಸಲಾಗುವುದು. ಮುಂದಿನ ದಿನಗಳಲ್ಲಿ ಪಟ್ಟಣಕ್ಕೆ ಬಿಎಂಸಿ ಕೇಂದ್ರ ನೀಡಲಾಗುವುದು ಎಂದರು.
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಡಿ. ತಿಪ್ಪೇಸ್ವಾಮಿ, ಪಪಂ ಸದಸ್ಯ ಮನ್ಸೂರ್,ವಿಸ್ತರಣಾಧಿಕಾರಿ ಕೃಷ್ಣಕುಮಾರ್, ಸಂಘದ ಕಾರ್ಯದರ್ಶಿ ಬಿ.ಎಂ. ಪ್ರೇಮರಾಜ್, ಮಂಡಳಿ ನಿರ್ದೇಶಕರಾದ ಎಂ. ಶಿವಾನಂದ್, ಮುರುಗೇಶ್, ಪಾಲಯ್ಯ, ಪರಮೇಶ್ವರಪ್ಪ, ಗಂಗಮ್ಮ, ಬಿ. ವಿಶ್ವನಾಥ್, ಬಿ. ತಿಪ್ಪೇಸ್ವಾಮಿ, ಯೋಗೀಶ್, ವೀರೇಶ್, ಎನ್.ಟಿ. ನಾಗರಾಜ್ ಮತ್ತಿತರರು ಇದ್ದರು.