ನಾಯಕನಹಟ್ಟಿ: ಚನ್ನಕೇಶವ ಸ್ವಾಮಿ ದೇವರ ಉತ್ಸವ ಭಾನುವಾರ ಸಂಭ್ರಮದಿಂದ ಜರುಗಿತು. ಕುರುಬ ಜನಾಂಗದ ಆರಾಧ್ಯ ದೈವವಾದ ಚನ್ನಕೇಶವ ಸ್ವಾಮಿ ದೇವರ ಉತ್ಸವದ ಅಂಗವಾಗಿ ಚನ್ನಕೇಶವ ದೇವಾಲಯದಿಂದ ರಂಗನಾಥ ಸ್ವಾಮಿ(ಮರಡಿ ರಂಗನಾಥ) ದೇವಾಲಯದವರೆಗೆ ಪಲ್ಲಕ್ಕಿ ಉತ್ಸವ ನಡೆಯಿತು.
ಚನ್ನಕೇಶವ ದೇವರ ಕುಲ ದೇವರಾಗಿ ಹೊಂದಿರುವ ಜಿಲ್ಲೆಯ ನೇರಲಗುಂಟೆ, ಗೌಡಗೆರೆ, ಕೊಂಡ್ಲಹಳ್ಳಿ, ಕೋನಸಾಗರ ಸೇರಿದಂತೆ ತಾಲೂಕಿನ ನಾನಾ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಈ ಬಾರಿ ದೇವಾಲಯದಲ್ಲಿ ದೇವರ ವಿಗ್ರಹ ಪ್ರಾಣ ಪ್ರತಿಷ್ಠಾಪನೆಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಚನ್ನಕೇಶವ ಸ್ವಾಮಿ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆ ನಡೆಸಲಾಯಿತು.
ದೇವಾಲಯದಿಂದ ಹೊರಟ ಮೆರವಣಿಗೆ ತೇರು ಬೀದಿ ಮೂಲಕ ಮರಡಿ ರಂಗನಾಥ ಸ್ವಾಮಿ ದೇವಾಲಯ ತಲುಪಿತು. ಡೊಳ್ಳು ವಾದ್ಯಗಳು ಹಾಗೂ ಹರಕೆ ಹೊತ್ತ ನೂರಾರು ಮಹಿಳೆಯರು ಮೆರವಣಿಗೆಯಲ್ಲಿದ್ದರು. ಪಲ್ಲಕ್ಕಿಯ ಸುತ್ತ ಕುರಿಗಳನ್ನು ಪ್ರದಕ್ಷಿಣೆ ನಡೆಸುವುದು ವಿಶಿಷ್ಟ ಆಚರಣೆ ಇಲ್ಲಿ ರೂಢಿಯಲ್ಲಿದೆ. ಮೆರವಣಿಗೆ ಪಾದಗಟ್ಟೆ ಪ್ರದೇಶಕ್ಕೆ ಬಂದಾಗ ನೂರಾರು ಕುರಿಗಳ ಹಿಂಡನ್ನು ಚನ್ನಕೇಶ್ವರ ಸ್ವಾಮಿ ಪಲ್ಲಕ್ಕಿಯ ಸುತ್ತ ಪ್ರದಕ್ಷಿಣೆ ಮಾಡಿಸಲಾಯಿತು. ಕುರಿಗಾರರು ಕುರಿಗಳನ್ನು ಒಂದಾದ ಎಳೆದು ತಂದು ಪಲ್ಲಕ್ಕಿ ಸುತ್ತ ಸುತ್ತಿಸಿದರು.
ಮೊದಲು ನಿಧಾನವಾಗಿ ಸುತ್ತಿದ ಕುರಿಗಳು ಎರಡು ಹಾಗೂ ಮೂರನೇ ಸುತ್ತಿನಲ್ಲಿ ವೇಗವಾಗಿ ಚಲಿಸಿದವು. ದೇವರ ಸುತ್ತ ಕುರಿಗಳು ಸರಾಗವಾಗಿ ಚಲಿಸಿದರೆ ಕುರಿಗಳಿಗೆ ದೇವರ ಆಶೀರ್ವಾದವಿದೆ ಎನ್ನುವ ಭಾವನೆ ಕುರಿಗಾರರಲ್ಲಿದೆ. ಕುರಿಗಳು ವೇಗವಾಗಿ ಸುತ್ತುವಾಗ ನೆರೆದಿದ್ದ ಭಕ್ತರು ಸಿಳ್ಳೆ, ಚಪ್ಪಾಳೆಯೊಂದಿಗೆ ಸಂತಸಪಟ್ಟರು.
ಉತ್ಸವದ ದಿನದಂದು ಪಲ್ಲಕ್ಕಿಯ ಸುತ್ತ ಕುರಿಗಳನ್ನು ಚನ್ನಕೇಶವ ದೇವರ ಸುತ್ತ ಪ್ರದಕ್ಷಿಣೆ ಮಾಡಿಸಿದರೆ ಕುರಿಗಳಿಗೆ ರೋಗ ರುಜಿನಗಳ ಕಾಟವಿರುವುದಿಲ್ಲ. ಕುರಿಗಳ ಸಂಖ್ಯೆ ವೇಗವಾಗಿ ಬೆಳೆಯುತ್ತದೆ ಎನ್ನುವ ನಂಬಿಕೆ ಜನಾಂಗದಲ್ಲಿದೆ. ಹರಕೆ ಹೊತ್ತ ಮಹಿಳೆಯರು ತಾಮ್ರದ ಸರಳನ್ನು ಚುಚ್ಚಿಕೊಂಡು ದೇವರಿಗೆ ಹರಕೆ ಸಲ್ಲಿಸಿದರು. ದೇವಾಲಯದ ಸುತ್ತ ಪ್ರದಕ್ಷಿಣೆಯ ನಂತರ ಅಕ್ಕಿ ಬೇಳೆ, ಕಾಯಿಗಳನ್ನು ದೇವರಿಗೆ ಸಲ್ಲಿಸಿ ಹರಕೆ ಪೂರೈಸಿದರು. ಚನ್ನಕೇಶವ ದೇವಾಲಯ ಸಮಿತಿ ಅಧ್ಯಕ್ಷ ಸಿ.ಕಾಳಪ್ಪ, ಉಪಾಧ್ಯಕ್ಷ ಬಿ.ಟಿ.ಗುರುಸ್ವಾಮಿ, ಸಮಿತಿ ಸದಸ್ಯರಾದ ನಾಗಣ್ಣ, ಸಿ.ತಿಪ್ಪೇಸ್ವಾಮಿ, ಡ್ರೈವರ್ ತಿಪ್ಪೇಸ್ವಾಮಿ, ರಂಗನಾಥ್, ಆರ್. ಮಂಜಣ್ಣ, ಪಾಲಾಕ್ಷ, ರಾಮಚಂದ್ರಪ್ಪ, ಚನ್ನಪ್ಪ, ಸಿ.ಚನ್ನಯ್ಯ, ಪೂಜಾರಿ ತಿಪ್ಪೇರುದ್ರಪ್ಪ ಮತ್ತಿತರರಿದ್ದರು.