ನಾಯಕನಹಟ್ಟಿ: ಸೋಮವಾರ ವಿತರಿಸುವ ಶೇಂಗಾ ಬಿತ್ತನೆ ಬೀಜಕ್ಕಾಗಿ ಭಾನುವಾರ ರಾತ್ರಿಯೇ ರೈತರು ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದು, ಬಿತ್ತನೆ ಬೀಜ ಪಡೆಯಲು ಅನ್ನದಾತರು ಹರಸಾಹಸ ಪಡುವಂತಾಗಿದೆ.
ಹದಿನೈದು ದಿನಗಳಿಂದ ಶೇಂಗಾ ಬಿತ್ತನೆ ಬೀಜ ವಿತರಣೆ ವ್ಯವಸ್ಥೆ ಸುಧಾರಣೆಯಾಗುತ್ತಿಲ್ಲ. ನಾಯಕನಹಟ್ಟಿ ಹೋಬಳಿಯಲ್ಲಿನ 9 ಗ್ರಾಪಂಗಳಲ್ಲಿ ಪ್ರತಿ ದಿನ ಮೂರು ಗ್ರಾಪಂಗಳಿಗೆ ಮಾತ್ರ ಬಿತ್ತನೆ ಬೀಜ ನೀಡಲಾಗುತ್ತಿದೆ. ನಂತರ ಇದೇ ರೀತಿಯ ಪುನಾರಾವರ್ತನೆಯಾಗುತ್ತದೆ. ಕೃಷಿ ಇಲಾಖೆ ಪ್ರತಿದಿನ 150 ರಿಂದ 200 ರೈತರಿಗೆ ಮಾತ್ರ ಬಿತ್ತನೆ ಬೀಜ ವಿತರಿಸುತ್ತಿದೆ. ಹೋಬಳಿಯಲ್ಲಿ 21 ಸಾವಿರ ಹೆಕ್ಟೇರ್ ಶೇಂಗಾ ಬಿತ್ತನೆ ಕ್ಷೇತ್ರವಿದೆ. ಪಹಣಿಯನ್ನು ಹೊಂದಿರುವ ಸುಮಾರು 15 ಸಾವಿರ ರೈತರಿಗೆ ಶೇಂಗಾ ಬಿತ್ತನೆ ಬೀಜ ವಿತರಣೆ ಆಗಬೇಕಾಗಿದೆ.
ಜೂನ್ ತಿಂಗಳು ಶೇಂಗಾ ಬಿತ್ತನೆ ಸಕಾಲವಾಗಿದೆ. ಆದರೆ ಇಲ್ಲಿನ ಪ್ರದೇಶದಲ್ಲಿ ಇಲ್ಲಿಯವರೆಗೂ ಬಿತ್ತನೆಗೆ ಸಾಕಾಗುವಷ್ಟು ಮಳೆಯಾಗಿಲ್ಲ. ಈ ವಾರದಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಬಿತ್ತನೆ ದಾವಂತದಲ್ಲಿ ರೈತರಿದ್ದಾರೆ. ಹೀಗಾಗಿ ಹೇಗಾದರೂ ಮಾಡಿ ಬಿತ್ತನೆ ಬೀಜ ಪಡೆಯಬೇಕು ಎನ್ನುವ ಹಠಕ್ಕಾಗಿ ರಾತ್ರಿಯೇ ಬಂದು ರೈತ ಸಂಪರ್ಕ ಕೇಂದ್ರದಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದಾರೆ.
ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಪಟ್ಟಣದ ಹೊರ ವಲಯದಲ್ಲಿದೆ. ಕಚೇರಿ ಆವರಣದಲ್ಲಿ ಯಾವುದೇ ವಿದ್ಯುತ್ ದೀಪಗಳಿಲ್ಲ. ಚಳಿ, ಮಳೆಯ ನಡುವೆ ರೈತರು, ರೈತ ಮಹಿಳೆಯರು ಕಚೇರಿ ಮುಂಭಾಗಿಲಿನಲ್ಲಿ ಮಲಗಿದ್ದಾರೆ. ನೆಲವೇ ಹಾಸಿಗೆ, ತಂದಿದ್ದ ಟವೆಲ್ ಅಥವ ಸೀರೆಯೇ ಹೊದಿಕೆಯಾಗಿದೆ. ರೈತ ಸಂಪರ್ಕ ಕೇಂದ್ರದ ಮುಂದೆ ದೀಪ, ನೀರು, ಶೌಚಾಲಯ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲ. ಹೀಗಿದ್ದರೂ ನೂರಾರು ರೈತರು ರಾತ್ರಿಯೇ ಬಂದು ಬೆಳಗ್ಗೆ ವಿತರಣೆ ಮಾಡುವ ಶೇಂಗಾ ಬಿತ್ತನೆ ಬೀಜಕ್ಕಾಗಿ ಕಾದು ಕುಳಿತಿದ್ದಾರೆ. ಅಬ್ಬೇನಹಳ್ಳಿ, ಮಲ್ಲೂರಹಳ್ಳಿ, ಎನ್.ಮಹಾದೇವಪುರ ಗ್ರಾಮದ ನೂರಾರು ರೈತರು ಬೆಳಗ್ಗೆ 10 ಗಂಟೆಯಾಗುವುದನ್ನೇ ಕಾಯುತ್ತಿದ್ದಾರೆ. ಹದಿನೈದು ದಿನಗಳಿಂದ ಶೇಂಗಾ ಬಿತ್ತನೆ ಬೀಜಕ್ಕಾಗಿ ಸುತ್ತಾಡಿ ರೋಸಿ ಹೋಗಿದ್ದೇವೆ ಎನ್ನುತ್ತಾರೆ ತಿಪ್ಪೇಸ್ವಾಮಿ, ಶಂಕ್ರಪ್ಪ, ಚೌಳಕೆರೆ ಗುಂಡಪ್ಪ, ಓಬಮ್ಮ ಮತ್ತಿತರರಿರು. ಇನ್ನಾದರು ಇಲಾಖೆ ರೈತರಿಗೆ ಶೀಘ್ರವಾಗಿ ಶೇಂಗಾ ವಿತರಣೆ ವ್ಯವಸ್ಥೆ ಒದಗಿಸಬೇಕು ಎನ್ನುವುದು ರೈತರ ಅಳಲು.