Advertisement

ಯೋಜನಾಬದ್ಧ ಕೃಷಿಯಿಂದ ಅಧಿಕ ಲಾಭ

07:16 PM Sep 07, 2019 | Naveen |

ನಾಯಕನಹಟ್ಟಿ: ಯೋಜನಾಬದ್ಧ ಕೃಷಿ ಕೈಗೊಂಡರೆ ಮಾತ್ರ ಲಾಭ ಗಳಿಕೆ ಸಾಧ್ಯ ಎಂದು ಪ್ರಗತಿಪರ ರೈತ ಎಸ್‌.ಸಿ. ವೀರಭದ್ರಪ್ಪ ಹೇಳಿದರು.

Advertisement

ಇಲ್ಲಿನ ಮೈರಾಡ ಸಂಪನ್ಮೂಲ ಕೇಂದ್ರದಲ್ಲಿ ಏರ್ಪಡಿಸಿದ್ದ ತಿಪ್ಪೇರುದ್ರಸ್ವಾಮಿ ರೈತ ಉತ್ಪಾದಕರ ಕಂಪನಿಯ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ರೈತರು ತಾವು ಹೊಂದಿರುವ ಭೂಮಿಯಲ್ಲಿ ನಿರಂತರ ಆದಾಯ ಪಡೆಯುವ ಬೆಳೆಗಳನ್ನು ಬೆಳೆಯಬೇಕು. ಕೇವಲ ಖುಷ್ಕಿ ಭೂಮಿ ಹೊಂದಿದ್ದರೆ ಅಲ್ಲಿನ ಎಲ್ಲ ನೀರನ್ನು ಕನಿಷ್ಟ 20 ವರ್ಷಗಳ ಕಾಲ ನಿರಂತರವಾಗಿ ಸಂರಕ್ಷಿಸಬೇಕು. ಹೊಲದಲ್ಲಿನ ನೀರು ಹಾಗೂ ಮಣ್ಣು ಅತ್ಯಂತ ಪ್ರಮುಖ ಸಂಪನ್ಮೂಲವಾಗಿದೆ. ದೈನಿಕ, ಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕ ಆದಾಯ ನೀಡುವಂತೆ ಯೋಜನೆ ರೂಪಿಸಿಕೊಳ್ಳಬೇಕು. ಹೀಗಾದರೆ ಮಾತ್ರ ರೈತರಿಗೆ ನಿರಂತರ ಆದಾಯ ಸಾಧ್ಯವಿದೆ. ಪ್ರತಿದಿನ ಆದಾಯ ನೀಡಲು ಹಸುಗಳನ್ನು ಸಾಕಬೇಕು. ತಿಂಗಳಿಗೊಮ್ಮೆ ಲಾಭ ಪಡೆಯಲು ರೇಷ್ಮೆ ಸಾಕಾಣಿಕೆ ಕೈಗೊಳ್ಳಬೇಕು. ಮೂರು ತಿಂಗಳಿಗೊಮ್ಮೆ ಆದಾಯಕ್ಕಾಗಿ ಖುಷ್ಕಿ ಬೇಸಾಯ ಅವಶ್ಯವಾಗಿದೆ. ಆರು ತಿಂಗಳಿಗೊಮ್ಮೆ ಹಣ ಪಡೆಯಲು ತೆಂಗು ಬೆಳೆಯಬೇಕು. ವರ್ಷಕ್ಕೊಮ್ಮೆ ವರಮಾನ ಪಡೆಯಲು ಮಾವು, ಹುಣಸೆ ಮರಗಳನ್ನು ಬೆಳೆಸಬೇಕು. ಇವುಗಳ ಜತೆಗೆ ಜೇನುಸಾಕಾಣಿಕೆ, ಎರೆಹುಳು ಸಾಕಾಣಿಕೆ ಕೈಗೊಳ್ಳಬೇಕು. ಒಂದೇ ಸಂಪನ್ಮೂಲದಿಂದ ರೈತರ ಆದಾಯ ಹೆಚ್ಚುವುದಿಲ್ಲ. ಪ್ರತಿ ಬಾರಿ ಸರಕಾರವನ್ನು ದೂರುವ ಬದಲು ನಮ್ಮ ಹೊಲದಲ್ಲಿ ಯೋಜಿತ ರೀತಿಯಲ್ಲಿ ಮಿಶ್ರ ಕೃಷಿ ಕೈಗೊಳ್ಳಬೇಕು ಎಂದರು.

ನಬಾರ್ಡ್‌ ಅಭಿವೃದ್ಧಿ ವ್ಯವಸ್ಥಾಪಕಿ ಕವಿತಾ ಶಶಿಧರ್‌ ಮಾತನಾಡಿ, ಇಲ್ಲಿನ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಮರಗಳ ಸಂಖ್ಯೆ ಕಡಿಮೆಯಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಆದ್ದರಿಂದ ಪ್ರತಿ ರೈತರು ತಮ್ಮ ಹೊಲಗಳ ಬದುಗಳಲ್ಲಿ ಮರಗಳನ್ನು ಬೆಳೆಸುವುದಕ್ಕೆ ಹೆಚ್ಚಿನ ಗಮನ ಹರಿಸಬೇಕು. ಇದು ಇಡೀ ರೈತ ಸಮುದಾಯದ ಸಾಂಘಿಕ ಜವಾಬ್ದಾರಿಯಾಗಿದೆ. ಮರಗಳನ್ನು ನಾನಾ ಕಾರಣಕ್ಕಾಗಿ ಕಡಿಯುವ ಪ್ರವೃತ್ತಿ ಮುಂದುವರಿದರೆ ಇಲ್ಲಿನ ಪ್ರದೇಶ ಮರುಭೂಮಿಯಾಗುತ್ತದೆ ಎಂದರು.

ಕೃಷಿ ಅಧಿಕಾರಿ ಜಿ.ಎಸ್‌. ಸುಮ ಮಾತನಾಡಿ, ರೈತರು ತಮ್ಮ ಹೊಲಕ್ಕೆ ಅಗತ್ಯ ಬಿತ್ತನೆ ಬೀಜಗಳನ್ನು ತಮ್ಮಲ್ಲಿ ದಾಸ್ತಾನು ಇಟ್ಟುಕೊಳ್ಳಬೇಕು. ಹೊಲದಲ್ಲಿ ಒಂದೇ ರೀತಿಯ ಬೆಳೆಗಳನ್ನು ಬೆಳೆಯುವುದರಿಂದ ಹಲವಾರು ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದ ಒಂದು ಬೆಳೆಯಲ್ಲಿನ ನಷ್ಟ ಇನ್ನೊಂದು ಬೆಳೆಯಲ್ಲಿ ತುಂಬಿಕೊಡಲು ಮಿಶ್ರ ಬೇಸಾಯ ಅವಶ್ಯ ಎಂದರು. ಕೊಂಡ್ಲಹಳ್ಳಿಯ ಎಸ್‌.ಸಿ. ವೀರಭದ್ರಪ್ಪ ಅವರನ್ನು ಸನ್ಮಾನಿಸಲಾಯಿತು. ಮೈರಾಡ ಸಂಸ್ಥೆಯ ಪ್ರಸಾದ್‌ ಮೂರ್ತಿ, ಅಶೋಕ್‌ ಹಗೆದಾಳ್‌, ಕಂಪನಿ ಅಧ್ಯಕ್ಷ ಸಿ.ಮಂಜುನಾಥ್‌ ಹಾಗೂ ಮೃರಾಡ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next