ನಾಯಕನಹಟ್ಟಿ: ಕೋವಿಡ್ ದೃಢಪಟ್ಟ ವ್ಯಕ್ತಿಗೆ ಪಟ್ಟಣದ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದಂತೆ ಒತ್ತಾಯಿಸಿ ಬುಧವಾರ ರಾತ್ರಿ ಸಾರ್ವಜನಿಕರು ದಿಢೀರ್ ಪ್ರತಿಭಟನೆ ನಡೆಸಿದರು.
ಚಳ್ಳಕೆರೆ ಸಮೀಪದ ದೊಡ್ಡೇರಿ ಗ್ರಾಮದ ವ್ಯಕ್ತಿಯೊಬ್ಬರಿಗೆ ಕೋವಿಡ್ ದೃಢಪಟ್ಟಿದೆ. ಆ ವ್ಯಕ್ತಿ ಆರೋಗ್ಯ ಇಲಾಖೆಯಲ್ಲಿ “ಡಿ’ ಗ್ರೂಪ್ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉತ್ತರಪ್ರದೇಶದ ವಲಸೆ ಕಾರ್ಮಿಕರನ್ನು ಚಳ್ಳಕೆರೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಅಲ್ಲಿದ್ದ 23 ಕಾರ್ಮಿಕರಿಗೆ ಸೋಂಕು ತಗುಲಿತ್ತು. ಜಿಲ್ಲಾ ಮಟ್ಟದ ರ‍್ಯಾಪಿಡ್ ರೆಸ್ಪಾನ್ಪ್ ಟೀಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಆರೋಗ್ಯ ಇಲಾಖೆಯ “ಡಿ’ ಗ್ರೂಪ್ ನೌಕರ ಇವರೊಂದಿಗೆ ಸಂಪರ್ಕದಲ್ಲಿದ್ದರು. ಇದೀಗ ಅವರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ತುಳಸಿರಂಗನಾಥ್ ಅವರು ಈ ವ್ಯಕ್ತಿಗೆ ನಾಯಕನಹಟ್ಟಿಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಈ ವಿಷಯ ತಿಳಿದ ಪಪಂ ಸದಸ್ಯರು, ಸಾರ್ವಜನಿಕರು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಿ ಆರೋಗ್ಯ ಇಲಾಖೆಯ ಅಂಬ್ಯುಲೆನ್ಸ್ ಆಸ್ಪತ್ರೆಗೆ ಪ್ರವೇಶ ಮಾಡದಂತೆ ಆಸ್ಪತ್ರೆ ಗೇಟ್ ಮುಚ್ಚಿ ಪ್ರತಿಭಟನೆ ನಡೆಸಿದರು.
ಪಪಂ ಸದಸ್ಯ ಎಸ್. ಉಮಾಪತಿ ಮಾತನಾಡಿ, ಪಟ್ಟಣದಿಂದ 28 ಕಿಮೀ ದೂರದಲ್ಲಿರುವ ದೊಡ್ಡೇರಿ ಗ್ರಾಮದ ವ್ಯಕ್ತಿಯನ್ನು ಇಲ್ಲಿಗೆ ತರುವುದು ಸರಿಯಲ್ಲ. ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಕೋವಿಡ್ ಆಸ್ಪತ್ರೆಯಿದೆ. ಅಲ್ಲಿ ದಾಖಲಾಗಿದ್ದ ಎಲ್ಲರೂ ಗುಣಮುಖರಾಗಿ ಹಿಂದಿರುಗಿದ್ದಾರೆ. ಅಲ್ಲಿನ ಆಸ್ಪತ್ರೆ ಖಾಲಿ ಇದ್ದರೂ ಇಲ್ಲಿನ ಸೋಂಕಿತರನ್ನು ಕರೆತರುವುದು ಸರಿಯಲ್ಲ. ಇಲ್ಲಿ ಆರಂಭಿಸಲಾಗಿರುವ ಕೋವಿಡ್ ಕೇರ್ ಸೆಂಟರ್ ನಾಮಕಾವಸ್ತೆಗೆ ಮಾತ್ರ ಇದೆ. ಈ ಆಸ್ಪತ್ರೆಗೆ ಬೇರೆ ಸಿಬ್ಬಂದಿ, ಉಪಕರಣಗಳು, ಪಿ.ಪಿ.ಇ ಕಿಟ್, ಮಾಸ್ಕ್ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ಒದಗಿಸಿಲ್ಲ. ಬೋರ್ಡ್, ಬೆಡ್‌ಗಳನ್ನು ಬಿಟ್ಟರೆ ಯಾವುದೇ ವ್ಯವಸ್ಥೆಗಳಿಲ್ಲ. ಇಲ್ಲಿರುವ ಸಿಬ್ಬಂದಿಗೆ ಯಾವುದೇ ಸುರಕ್ಷಾ ಸಾಧನಗಳನ್ನು ನೀಡದೇ ಏಕಾಏಕಿ ಕೋವಿಡ್ ಸೋಂಕಿತರನ್ನು ಕರೆತರುವುದು ಸರಿಯಲ್ಲ. ಇಲ್ಲಿನ ಆಸ್ಪತ್ರೆಗೆ ದಾಖಲು ಮಾಡಿದರೆ ಇಲ್ಲಿನ ಸಿಬ್ಬಂದಿ ಹಾಗೂ ಇತರೆ ರೋಗಿಗಳಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಹಾಗಾಗಿ ಯಾವುದೇ ಕಾರಣಕ್ಕೆ ಸೋಂಕಿತ ವ್ಯಕ್ತಿಯನ್ನು ಪಟ್ಟಣಕ್ಕೆ ತರಬಾರದು ಎಂದರು.
ಪಪಂನ ಮತ್ತೋರ್ವ ಸದಸ್ಯ ಜಿ.ಆರ್. ರವಿಕುಮಾರ್ ಮಾತನಾಡಿ, ಪಟ್ಟಣಕ್ಕೆ ಸೋಂಕು ಇಲ್ಲಿಯವರೆಗೂ ಹರಡಿಲ್ಲ. ಸೌಕರ್ಯಗಳಿಲ್ಲದ ಇಲ್ಲಿನ ಆಸ್ಪತ್ರೆಯಲ್ಲಿ ಸೋಂಕು ದೃಢಪಟ್ಟ ವ್ಯಕ್ತಿಗೆ ಚಿಕಿತ್ಸೆ ನೀಡುವುದು ಸರಿಯಲ್ಲ. ಇದರಿಂದ ಇಡೀ ಆಸ್ಪತ್ರೆ ಸಿಬ್ಬಂದಿ ಮತ್ತು ನಿವಾಸಿಗಳಿಗೆ ರೋಗ ಹರಡುವ ಭೀತಿ ಎದುರಾಗಿದೆ. ಸೌಲಭ್ಯಗಳಿಲ್ಲದ ಆಸ್ಪತ್ರೆಗೆ ರೋಗಿಯನ್ನು ಕರೆ ತಂದರೆ ಪಟ್ಟಣದ ಜನರು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜನರ ಪ್ರತಿಭಟನೆಗೆ ಮಣಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ತುಳಸಿರಂಗನಾಥ್, ಕೊರೊನಾ ಸೋಂಕಿತ ವ್ಯಕ್ತಿಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕಳುಹಿಸುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಸ್ಥಳಕ್ಕೆ ಪಿಎಸ್‌ಐ ರಘುನಾಥ್ ಸಿಬ್ಬಂದಿಯೊಂದಿಗೆ ಭೇಟಿ ನೀಡಿದ್ದರು. ಪಪಂ ಸದಸ್ಯ ಮನ್ಸೂರ್, ಯೂಸೂಫ್, ಶ್ರೀಕಾಂತ್, ಪಂಚಾಕ್ಷರಿಸ್ವಾಮಿ, ಜೆ.ಟಿ.ಎಸ್ ತಿಪ್ಪೇಸ್ವಾಮಿ, ಜಯದೇವ್ ಇತರರು ಇದ್ದರು .
ಕೋವಿಡ್ ಪೀಡಿತರ ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರದಲ್ಲಿ ಕೋವಿಡ್ ಆಸ್ಪತ್ರೆ ಇದೆ. ಹೀಗಿದ್ದರೂ ತಾಲೂಕು ಕೇಂದ್ರ ಹಾಗೂ ಜಿಲ್ಲಾ ಕೇಂದ್ರದಲ್ಲಿ ಚಿಕಿತ್ಸೆ ನೀಡದೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ರೋಗಿಯನ್ನು ವರ್ಗಾವಣೆ ಮಾಡುವ ಉದ್ದೇಶವಾದರೂ ಏನು?
ಜಿ.ಆರ್. ರವಿಕುಮಾರ್,
ಪಪಂ ಸದಸ್ಯ