Advertisement

ರೋಗದಿಂದ ಸತ್ತ ಕುರಿಗಳ ವಿಲೇವಾರಿಯೇ ಸಮಸ್ಯೆ!

05:26 PM Nov 20, 2019 | Naveen |

ನಾಯಕನಹಟ್ಟಿ: ಕುರಿಗಳಿಗೆ ಕಾಣಿಸಿಕೊಂಡಿರುವ ನೀಲಿ ನಾಲಿಗೆ ರೋಗ ಜಿಲ್ಲೆಯಾದ್ಯಾಂತ ವ್ಯಾಪಿಸುತ್ತಿದ್ದು, ಸತ್ತ ಕುರಿಗಳ ವಿಲೇವಾರಿ ಸಮಸ್ಯೆ ಸೃಷ್ಟಿಸುತ್ತಿದೆ. 17 ಲಕ್ಷ ಕುರಿಗಳಿರುವ ಚಿತ್ರದುರ್ಗ ಜಿಲ್ಲೆ ಕುರಿಗಳ ಸಂಖ್ಯೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ನಾಯಕನಹಟ್ಟಿ ಹೋಬಳಿಯೊಂದರಲ್ಲೇ 40 ಸಾವಿರ ಕುರಿಗಳಿವೆ. ನೀಲಿ ನಾಲಿಗೆ ಹೆಮ್ಮಾರಿ ಜಿಲ್ಲೆಯಲ್ಲಿ 900ಕ್ಕೂ ಹೆಚ್ಚು ಕುರಿಗಳನ್ನು ಬಲಿ ಪಡೆದಿದೆ. ಚಳ್ಳಕೆರೆ ತಾಲೂಕಿನಲ್ಲಿ ಇದರ ಸಂಖ್ಯೆ 320 ಮೀರಿದೆ. ಪ್ರತಿ ದಿನ ಕುರಿಗಳು ದೊಡ್ಡ ಪ್ರಮಾಣದಲ್ಲಿ ಸಾವನ್ನಪ್ಪುತ್ತಿದ್ದು ವಿಲೇವಾರಿ ಸಮಸ್ಯೆ ತಲೆದೋರಿದೆ.

Advertisement

ಕುರಿಗಳು ಸತ್ತ ನಂತರ ಅವುಗಳ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷೆಯ ನಂತರ ತಮ್ಮ ಗ್ರಾಮಕ್ಕೆ ಹೋಗುವ ದಾರಿಯಲ್ಲಿಯೇ ಎಲ್ಲೆಂದರಲ್ಲಿ ಬಿಸಾಕುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಕುರಿಗಳನ್ನು ಚೀಲದಲ್ಲಿ ತುಂಬಿಕೊಂಡು ಬರಲಾಗುತ್ತಿದೆ. ನಂತರ ಇಡೀ ಚೀಲಗಳನ್ನು ರಸ್ತೆ ಬದಿಗೆ ಬಿಸಾಡಲಾಗುತ್ತಿದೆ. ಇದರಿಂದ ರಸ್ತೆ ಬದಿಯಲ್ಲಿ ದುರ್ವಾಸನೆ ಹೆಚ್ಚಾಗಿದೆ. ಸತ್ತ ಕುರಿಗಳ ದೇಹವನ್ನು ನಾಯಿ, ನರಿಗಳು ಕಿತ್ತು ತಿನ್ನುತ್ತಿವೆ. ಇದರಿಂದ ರೋಗ ಇನ್ನಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ. ಈ ರೋಗವನ್ನು ಹರಡುವ ಕುರುಡು ನೊಣಗಳು ಇಂತಹ ಸತ್ತ ಕುರಿಗಳ ದೇಹದ ಮೇಲೆ ಕುಳಿತು ನಂತರ ಇತರೆ ಕುರಿಗಳಿಗೆ ಹರಡುವ ಸಾಧ್ಯತೆ ಹೆಚ್ಚಾಗಿದೆ.

ರೈತರು ನಿರ್ಲಕ್ಷ ಹಾಗೂ ಉದಾಸೀನತೆಯಿಂದ ವರ್ತಿಸಿದರೆ ರೋಗದ ತೀವ್ರತೆ ಹೆಚ್ಚಾಗುವ ಅಪಾಯವಿದೆ. ಜತೆಗೆ ಇಂತಹ ರೋಗ ಪೀಡಿತ ಕುರಿಗಳಲ್ಲಿನ ವೈರಸ್‌ ಇತರೆ ಪ್ರಾಣಿ-ಪಕ್ಷಿಗಳಿಗೆ ಹರಡುವ ಅಪಾಯವಿದೆ. ಆದ್ದರಿಂದ ರೈತರು ಹಾಗೂ ಕುರಿಗಾಹಿಗು ಕುರಿಗಳನ್ನು ಸೂಕ್ತವಾದ ರೀತಿಯಲ್ಲಿ ಹೂಳಬೇಕು. ಇಲ್ಲವಾದರೆ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next