Advertisement

ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಶಾಲೆಗೆ ಬೀಗ

03:05 PM Aug 09, 2019 | Naveen |

ನಾಯಕನಹಟ್ಟಿ: ಶಾಲೆಯಲ್ಲಿ ಶಿಕ್ಷಕರ ಕೊರತೆ ನಿವಾರಣೆ ಮಾಡುವಂತೆ ಒತ್ತಾಯಿಸಿ ಗುರುವಾರ ಜೋಗಿಹಟ್ಟಿ ಗ್ರಾಮದ ಗ್ರಾಮಸ್ಥರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡ ಬಾಲರಾಜ್‌, ಸುತ್ತಲಿನ ಎರಡು ಗ್ರಾಮಗಳಿಗೆ ಇದು ಪ್ರಮುಖವಾದ ಹಿರಿಯ ಪ್ರಾಥಮಿಕ ಶಾಲೆಯಾಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 230ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಆದರೆ ಶಿಕ್ಷಣ ಇಲಾಖೆ ಶಾಲೆಗೆ ಅಗತ್ಯ ಸಂಖ್ಯೆಯಲ್ಲಿ ಶಿಕ್ಷಕರನ್ನು ನೇಮಕ ಮಾಡಿಲ್ಲ. ಅಗತ್ಯಕ್ಕೆ ಅನುಗುಣವಾಗಿ ಶಿಕ್ಷಕರನ್ನು ನೇಮಿಸಿಲ್ಲ. ಶಾಲೆಯಲ್ಲಿ ಐವರು ಶಿಕ್ಷಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಶಾಲೆಗೆ ಸುಸಜ್ಜಿತವಾದ ಕಟ್ಟಡ ಹಾಗೂ ಸೌಲಭ್ಯಗಳಿವೆ. ಇದಕ್ಕೆ ಪೂರಕವಾಗಿ ಶಾಲೆಗೆ ಹೆಚ್ಚುವರಿ ಶಿಕ್ಷಕರನ್ನು ನೇಮಕ ಮಾಡಬೇಕು. ಮೂವರು ಶಿಕ್ಷಕರು ಒಂದೇ ದಿನ ರಜೆ ಹಾಕಿದರೆ ಶಾಲೆಯನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಜತೆಗೆ ಶಾಲೆಯ ಶಿಕ್ಷಕರ ನಡುವೆ ಹೊಂದಾಣಿಕ ಸಮಸ್ಯೆ ಇದೆ. ಇದೆಲ್ಲವನ್ನೂ ಶಿಕ್ಷಣ ಇಲಾಖೆ ಅಧಿಕಾರಿಗಳು ಸರಿಪಡಿಸಬೇಕು. ಸರ್ಕಾರಿ ಶಾಲೆ ಅಭಿವೃದ್ಧಿಗೆ ಗ್ರಾಮಸ್ಥರು ಹಾಗೂ ಸಂಘ-ಸಂಸ್ಥೆಗಳು ಉತ್ತಮ ಸಹಕಾರ ನೀಡುತ್ತಿದ್ದೇವೆ. ಆದರೆ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುತ್ತಿಲ್ಲ. ಶಿಕ್ಷಕರ ಕೊರತೆಯಿಂದ ಶೈಕ್ಷಣಿಕವಾಗಿ ಹಿಂದುಳಿಯುವಂತಾಗಿದೆ. ಈ ಕುರಿತು ಕ್ಷೇತ್ರಶಿಕ್ಷಣಾಧಿಕಾರಿಗಳ ಗಮನಕ್ಕೆ ಹಲವಾರು ಬಾರಿ ತರಲಾಗಿದೆ. ಆದರೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣ ಹೆಚ್ಚುವರಿ ಶಿಕ್ಷಕರನ್ನು ಶಾಲೆಗೆ ನೇಮಿಸಬೇಕು. ಇಲ್ಲವಾದರೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ. ಕರಿಬಸವರಾಜು ಮಾತನಾಡಿ, ಗ್ರಾಮದಲ್ಲಿನ ಮಕ್ಕಳು ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಆದರೆ ಅವರಿಗೆ ಉತ್ತಮ ಶೈಕ್ಷಣಿಕ ಮಾರ್ಗದರ್ಶನ ದೊರೆಯತ್ತಿಲ್ಲ. ಆದ್ದರಿಂದ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಶಿಕ್ಷಣ ಇಲಾಖೆ ತಕ್ಷಣ ಹೆಚ್ಚುವರಿ ಶಿಕ್ಷಕರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯತ್‌ ಸದಸ್ಯ ಟಿ. ತಿಪ್ಪೇಸ್ವಾಮಿ, ಕೆ.ಒ. ನಾಗರಾಜ್‌, ಮುಖಂಡರಾದ ಜಿ.ಬಿ.ಬಾಲಯ್ಯ, ಎಸ್‌. ವೆಂಕಟೇಶ್‌, ಚಂದ್ರಪ್ಪ, ನರಸಿಂಹಪ್ಪ, ಎಸ್‌.ಜಿ. ವೆಂಕಟೇಶ್‌, ಬಿ. ಕೃಷ್ಣಪ್ಪ, ಶಾಂತಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next