ನಾಯಕನಹಟ್ಟಿ: ಶೇಂಗಾ ಬಿತ್ತನೆ ಬೀಜ ಪಡೆಯಲು ರೈತರು ರಾತ್ರಿಯಿಡೀ ನಿದ್ದೆಗೆಟ್ಟು ಸರತಿ ಸಾಲಿನಲ್ಲಿ ನಿಂತು ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಕೃಷಿ ಇಲಾಖೆ ಒಂದು ತಿಂಗಳು ವಿಳಂಬವಾಗಿ ಬಿತ್ತನೆ ಬೀಜ ಮಾರಾಟ ಆರಂಭಿಸಿರುವುದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲಿನ ಪ್ರದೇಶದಲ್ಲಿ ಒಂದು ವಾರದಿಂದ ಸಣ್ಣ ಪ್ರಮಾಣದ ಮಳೆ ಆರಂಭವಾಗಿದೆ. ಹೀಗಾಗಿ ರೈತರು ಬಿತ್ತನೆ ಬೀಜ ಪಡೆಯುವ ಧಾವಂತದಲ್ಲಿದ್ದಾರೆ. ಬಿತ್ತನೆ ಶೇಂಗಾ ಕಾಯಿ ಪಡೆದ ನಂತರ ಸಿಪ್ಪೆಯಿಂದ ಬೀಜಗಳನ್ನು ಬೇರ್ಪಡಿಸಲು ಸಾಕಷ್ಟು ಸಮಯ ಬೇಕು. ಆದರೆ ಇಲಾಖೆ ತಡವಾಗಿ ಬಿತ್ತನೆ ಬೀಜ ವಿತರಿಸುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ.
20 ದಿನಗಳ ಹಿಂದೆ ಕೃಷಿ ಇಲಾಖೆ ದಾಖಲೆ ಪರಿಶೀಲಿಸಿ ಟೋಕನ್ ನೀಡಿದ್ದರೂ ಇಲ್ಲಿಯವರೆಗೂ ಬಿತ್ತನೆ ಬೀಜವನ್ನು ವಿತರಿಸಿಲ್ಲ. ಕಳೆದ 15 ದಿನಗಳಿಂದ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಅಲೆಯಬೇಕಾದ ಪರಿಸ್ಥಿತಿ ಉಂಟಾಗಿದೆ. ಕಳೆದ ವರ್ಷ ನಾಯಕನಹಟ್ಟಿ ಹೋಬಳಿಯ ಸುಮಾರು 21 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿತ್ತು. ಹೀಗಾಗಿ ಸುಮಾರು 14 ಸಾವಿರ ರೈತರಿಗೆ ಶೇಂಗಾ ವಿತರಣೆಯಾಗಬೇಕಿದೆ.
ಪ್ರತಿ ನಿತ್ಯ 150 ರಿಂದ 200 ಜನರಿಗೆ ಮಾತ್ರ ಬಿತ್ತನೆ ಶೇಂಗಾ ಬೀಜ ವಿತರಣೆ ಮಾಡಲಾಗುತ್ತಿದೆ. ಇದೇ ಆಮೆ ವೇಗದಲ್ಲಿ ವಿತರಿಸಿದರೆ ಒಂಭತ್ತು ಗ್ರಾಪಂ ವ್ಯಾಪ್ತಿಯ ಎಲ್ಲ ರೈತರು ಬಿತ್ತನೆ ಬೀಜ ಪಡೆಯಲು ಕನಿಷ್ಠ ಒಂದು ತಿಂಗಳಾದರೂ ಬೇಕು. ಇದೀಗ ರೈತ ಸಂಪರ್ಕ ಕೇಂದ್ರಗಳಿರುವ ತಳಕು, ನಾಯಕನಹಟ್ಟಿ, ಚಳ್ಳಕೆರೆ, ಕಸಬಾ ಹಾಗೂ ಪರಶುರಾಂಪುರ ಹೋಬಳಿ ಕೇಂದ್ರಗಳಲ್ಲಿ ಮಾತ್ರ ಬಿತ್ತನೆ ಶೇಂಗಾ ವಿತರಣೆ ಮಾಡಲಾಗುತ್ತಿದೆ. ಬಿತ್ತನೆ ಬೀಜ ವಿತರಣೆಯನ್ನು ಆನ್‌ಲೈನ್‌ನಲ್ಲಿ ಮಾಡಲಾಗುತ್ತಿದೆ. ಅದಕ್ಕೆ ಪ್ರೂಟ್ಸ್ ತಂತ್ರಾಂಶದಲ್ಲಿ ರೈತರು ಹೆಸರನ್ನು ನೊಂದಾಯಿಸಿರಬೇಕು. ದಾಖಲೆಗಳನ್ನು ಪರಿಶೀಲನೆ ಮಾಡಿ ಬಿತ್ತನೆ ಬೀಜವನ್ನು ರಿಯಾಯತಿ ದರದಲ್ಲಿ ವಿತರಿಸಬೇಕು. ಒಂದೊಂದು ಗ್ರಾಪಂ ವ್ಯಾಪ್ತಿಯ ರೈತರಿಗೆ ಒಂದೊಂದು ದಿನ ವಿತರಿಸುವ ವ್ಯವಸ್ಥೆ ಮಾಡಿದರೆ ಸಮಸ್ಯೆಗೆ ಸ್ಪಲ್ಪ ಪರಿಹಾರ ದೊರೆಯಬಹುದು.
ಡೋಂಟ್ವರಿ, ಬಿತ್ತನೆ ಶೇಂಗಾ ಬೀಜದ ದಾಸ್ತಾನಿದೆ
ಇದೀಗ ಶೇಂಗಾ ಬಿತ್ತನೆ ಆರಂಭವಾಗಿದೆ. ಬಿತ್ತನೆ ಶೇಂಗಾದ ಸಾಕಷ್ಟು ದಾಸ್ತಾನು ಇದೆ. ಹೀಗಾಗಿ ರೈತರು ಆತಂಕಕ್ಕೆ ಒಳಗಾಗಬೇಕಾಗಿಲ್ಲ. ಮಾರುಕಟ್ಟೆಯಲ್ಲಿ ಬಿತ್ತನೆ ಶೇಂಗಾ ಬೆಲೆ ಹೆಚ್ಚಾಗಿರುವುದರಿಂದ ಕೃಷಿ ಇಲಾಖೆಯಿಂದ ವಿತರಿಸುವ ಬಿತ್ತನೆ ಬೀಜಕ್ಕೆ ಬೇಡಿಕೆ ಹೆಚ್ಚಾಗಿದೆ. ರೈತರ ಸಂಖ್ಯೆ ಜಾಸ್ತಿ ಇರುವುದರಿಂದ ಒತ್ತಡ ಕಡಿಮೆ ಮಾಡಲು ಕೃಷಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ರೈತರು ಆತಂಕಕ್ಕೆ ಒಳಗಾಗದೆ ತಾಳ್ಮೆಯಿಂದ ಬಿತ್ತನೆ ಬೀಜ ಖರೀದಿಸಬೇಕು. ಎಲ್ಲ ರೈತರಿಗೂ ಬಿತ್ತನೆ ಬೀಜ ವಿತರಿಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಎನ್. ಮಾರುತಿ ತಿಳಿಸಿದ್ದಾರೆ.