ಸುಳ್ಯ: ದಕ್ಷಿಣ ಕನ್ನಡ ಹಾಗೂ ಕೊಡಗು ಗಡಿ ಪ್ರದೇಶದ ಸುಬ್ರಹ್ಮಣ್ಯ ಸಮೀಪದ ಕೂಜಿಮಲೆ ಎಸ್ಟೇಟ್ ಪ್ರದೇಶಕ್ಕೆ ನಕ್ಸಲರು ಭೇಟಿ ನೀಡಿ ಅಂಗಡಿಯಿಂದ ಸಾಮಗ್ರಿ ಖರೀದಿಸಿದ ಪ್ರಕರಣಕ್ಕೆ ಸಂಬಂಧಿಸಿ ನಡೆಸುತ್ತಿರುವ ಶೋಧ ಕಾರ್ಯ ಬುಧವಾರವೂ ಮುಂದುವರಿದಿದೆ.
ಕಾರ್ಕಳದಿಂದ ಆಗಮಿಸಿರುವ ನಕ್ಸಲ್ ನಿಗ್ರಹ ದಳದ ಸಿಬಂದಿ ಅರಣ್ಯ ಪ್ರದೇಶದಲ್ಲಿ 3 ದಿನಗಳಿಂದ ಶೋಧ ನಡೆಸುತ್ತಿದ್ದು, ಕಾರ್ಯವನ್ನು ಮತ್ತಷ್ಟು ವಿಸ್ತರಿಸಲಾಗಿದೆ.
ಬುಧವಾರ ಬಿಸ್ಲೆ, ಕಡಮಕಲ್ಲು, ಸಂಪಾಜೆ, ಕರಿಕೆ, ಕೂಜಿಮಲೆ, ಗುಂಡ್ಯ, ಶಿಶಿಲ ಭಾಗದಲ್ಲಿ ಶೋಧ ನಡೆಸಲಾಗಿದೆ. ಹೆಚ್ಚುವರಿ ಎರಡು ತಂಡ ಆಗಮಿಸಿ ಶೋಧ ಕಾರ್ಯದಲ್ಲಿ ತೊಡಗಿಕೊಂಡಿವೆ. ನಕ್ಸಲ್ ನಿಗ್ರಹ ದಳದ ಎಸ್.ಪಿ. ಜಿತೇಂದ್ರ ಕುಮಾರ್ ದಯಾಮ ಅವರು ಮಡಿಕೇರಿಯಲ್ಲೇ ಇದ್ದುಕೊಂಡು ಶೋಧ ಕಾರ್ಯ, ತನಿಖೆಯ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಅರಣ್ಯ ಇಲಾಖೆ ಸಾಥ್
ನಕ್ಸಲರು ಭೇಟಿ ನೀಡಿದ ಕೂಜಿಮಲೆ ಪ್ರದೇಶ ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯಲ್ಲಿದೆ. ಪುಷ್ಪಗಿರಿ ವನ್ಯಧಾಮ ಸೇರಿದಂತೆ ಅರಣ್ಯ ಭಾಗದ ಇತರೆಡೆ ಶೋಧ ನಡೆಸುತ್ತಿರುವುದರಿಂದ ನಕ್ಸಲ್ ನಿಗ್ರಹ ದಳಕ್ಕೆ ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬಂದಿ ಕೂಡ ಸಹಕಾರ ನೀಡುತ್ತಿದ್ದಾರೆ. ಅರಣ್ಯದೊಳಗಿನ ಪ್ರದೇಶಗಳ ಸಮರ್ಪಕ ಮಾಹಿತಿ ಇರುವ ಸಿಬಂದಿಯನ್ನು ಶೋಧ ಕಾರ್ಯದ ತಂಡಕ್ಕೆ ಮಾರ್ಗದರ್ಶನ ನೀಡಲು ಬಳಸಲಾಗುತ್ತಿದೆ.