ಜಮ್ಮು : ‘ನಕ್ಸಲ್ ಅಂಕಲ್ ದಯವಿಟ್ಟು ನಮ್ಮ ತಂದೆಯನ್ನು ಬಿಡುಗಡೆ ಮಾಡಿ’ ಎಂದು ಸಿಆರ್ ಪಿಎಫ್ ಯೋಧ ರಾಕೇಶ್ವರ್ ಸಿಂಗ್ ಮನ್ಹಾಸ್ ಅವರ ಐದು ವರ್ಷದ ಪುಟ್ಟ ಮಗಳು ಬೇಡಿಕೊಂಡಿದ್ದಾಳೆ.
ಚತ್ತೀಸಘಡದಲ್ಲಿ ನಡೆದ ಕಾಳಗದಲ್ಲಿ ಸಿಆರ್‌ಪಿಎಫ್ ಯೋಧ ರಾಕೇಶ್ವರ್ ಸಿಂಗ್ ನಾಪತ್ತೆಯಾಗಿದ್ದಾರೆ. ಇವರನ್ನು ಮಾವೋದಿಗಳು ಅಪಹರಿಸಿರುವ ಶಂಕೆ ವ್ಯಕ್ತವಾಗಿದೆ. ಗುಂಡಿನ ದಾಳಿಗೈದು 22 ಜನರ ಯೋಧರ ಮಾರಣ ಹೋಮ ನಡೆಸಿರುವ ಕೆಂಪು ಉಗ್ರರು ರಾಕೇಶ್ವರ್ ಸಿಂಗ್ ಅವರನ್ನು ಹಿಡಿದುಕೊಟ್ಟಿದ್ದಾರೆ ಎನ್ನುವ ಸುದ್ದಿ ಅವರ ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ.
ನಕ್ಸಲೀಯರ ಹಿಡಿತದಲ್ಲಿ ತಮ್ಮ ತಂದೆ ಸಿಲುಕಿಕೊಂಡಿರುವುದಕ್ಕೆ ಕಣ್ಣೀರು ಸುರಿಸಿರುವ ರಾಕೇಶ್ವರ್ ಸಿಂಗ್ ಪುತ್ರಿ ಶ್ರಾಗ್ವಿ, ತಂದೆಯನ್ನು ಬಿಡುಗಡೆ ಮಾಡುವಂತೆ ಪರಿಪರಿಯಾಗಿ ಕೇಳಿ ಕೊಂಡಿರುವುದು ಎಲ್ಲರ ಕಣ್ಣುಗಳಲ್ಲಿ ನೀರು ತರಿಸುವಂತಿದೆ.
ವರದಿಗಾರನಿಗೆ ಅಪರಿಚಿತ ಕರೆ :
ಇನ್ನು ಚತ್ತೀಸಘಡದ ಸ್ಥಳೀಯ ವರದಿಗಾರನಿಗೆ ಅಪರಿಚಿತ ಕರೆಯೊಂದು ಬಂದಿದ್ದು, ಈ ವೇಳೆ ಭಾರತೀಯ ಯೋಧನೋರ್ವನನ್ನು ಹಿಡಿದಿಟ್ಟುಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ. ಯೋಧ ಸುರಕ್ಷಿತ, ಆದರೆ ನಮ್ಮ ಸೆರೆಯಲ್ಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ಕುರಿತು ಪೊಲೀಸರಿಗೆ ವರದಿಗಾರ ಮಾಹಿತಿ ನೀಡಿದ್ದಾರೆ. ವರದಿಗಾರನ ಜೊತೆ ಫೋನ್ ಮೂಲಕ ಮಾತನಾಡಿದ ರಾಕೇಶ್ವರ್ ಸಿಂಗ್ ಪತ್ನಿ ಮೀನಾ ಮನ್ಹಾಸ್, ಪತಿ ಕುರಿತು ಮಾಹಿತಿಗಳನ್ನು ಪಡೆದಿದ್ದಾರೆ.