Advertisement

Naxal chandru-19 ವರ್ಷದ ಬಳಿಕ ನಕ್ಸಲ್‌ ಚಂದ್ರು ಸೆರೆ; ಏನಿದು ಪ್ರಕರಣ?

10:45 AM Jul 04, 2024 | Team Udayavani |

■ ಉದಯವಾಣಿ ಸಮಾಚಾರ
ಪಾವಗಡ(ತುಮಕೂರು): ತಾಲೂಕಿನ ನಾಗಲಮಡಿಕೆ ಹೋಬಳಿ ವೆಂಕಟಮ್ಮನಹಳ್ಳಿ ಗ್ರಾಮದ ಪೊಲೀಸ್‌ ಕ್ಯಾಂಪ್‌ ಮೇಲೆ ನಡೆದ ನಕ್ಸಲ್‌ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 19 ವರ್ಷದಿಂದ ತಲೆ ಮರೆಸಿಕೊಂಡಿದ್ದ 75ನೇ ಆರೋಪಿಯನ್ನು ಪೊಲೀಸರು ಮಂಗಳವಾರ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

Advertisement

ಆಂಧ್ರಪ್ರದೇಶದ ಅನಂತಪುರ ಜಿಲ್ಲೆ, ಸಿಂಗಲಮಲ್ಲ ತಾಲೂಕು ಕೇಶವ ಪುರಂ ಗ್ರಾಮದ ಕೊಡಮುಲ ಮುತ್ಯಾಲಚಂದ್ರು ಬಿನ್‌ ಬಾಯನ್ನ (38) ಬಂಧಿತ ಆರೋಪಿ. ಮಂಗಳವಾರ ಆರೋಪಿಯನ್ನು ಪಾವಗಡ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕರೆದೊಯ್ಯಲಾಗಿದೆ.

ವೆಂಕಟಮ್ಮನಹಳ್ಳಿ ಪೊಲೀಸ್‌ ಹತ್ಯಾಕಾಂಡ ಪ್ರಕರಣ ಕುರಿತು ಪಾವಗಡ ಮತ್ತು ಮಧುಗಿರಿ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ನಡೆಯುತ್ತಿದೆ. ಬಹುತೇಕ ಆರೋಪಿಗಳ ವಿರುದ್ಧ ಕೋರ್ಟ್‌ ಜಾಮೀನು ರಹಿತ ವಾರಂಟ್‌ ಹೊರಡಿಸಿದೆ. ಕೆಲವು ಆರೋಪಿಗಳು ಆಂಧ್ರ ಪ್ರದೇಶ, ಬೆಂಗಳೂರಿನ ಬಿಬಿಎಂಪಿಯಲ್ಲಿ 12 ವರ್ಷದಿಂದ ಪತಿ, ಪತ್ನಿ ಇಬ್ಬರೂ ಪೌರ ಕಾರ್ಮಿಕರಾಗಿ ಜೀವನ ಸಾಗಿಸುತ್ತಿದ್ದಾರೆ. ಪ್ರಕರಣದ ಸಂಬಂಧ ಪೊಲೀಸರು ಆರೋಪಿಗಳನ್ನು ಹಂತ ಹಂತವಾಗಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು  ಪಡಿಸುತ್ತಿದ್ದಾರೆ.

ತುಮಕೂರು, ಬೆಂಗಳೂರು ಐಎಸ್‌ಡಿ ವಿಭಾಗದ ನಕ್ಸಲ್‌ ನಿಗ್ರಹ ಪಡೆ ಮಾಹಿತಿ ಮೇರೆಗೆ ತುಮಕೂರು ಜಿಲ್ಲಾ ವರಿಷ್ಠಾಧಿಕಾರಿಗಳ ತಂಡ, ಸಿಐ ತಂಡವು ತಲೆ ಮರೆಸಿಕೊಂಡಿದ್ದ ಮುತ್ಯಾಲಚಂದ್ರುನನ್ನು ಬೆಂಗಳೂರಿನ ಜೆ.ಪಿ.ನಗರದ ಸುರಭಿ ನಗರದ ಮನೆಯಲ್ಲಿ ಬಂಧಿಸಿದ್ದಾರೆ.

ಏನಿದು ಪ್ರಕರಣ?
ಆಂಧ್ರಪ್ರದೇಶ -ಕರ್ನಾಟಕದ ಗಡಿ ಭಾಗದಲ್ಲಿ ಹೆಚ್ಚಾಗಿದ್ದ ನಕ್ಸಲರ ಹಾವಳಿ ನಿಯಂತ್ರಣಕ್ಕೆ ನಕ್ಸಲ್‌ ನಿಗ್ರಹ ಪಡೆ ವೆಂಕಟಮ್ಮನಹಳ್ಳಿಯಲ್ಲಿ ಕ್ಯಾಂಪ್‌ ಹೂಡಿತ್ತು. 2005, ಫೆ.10ರ ರಾತ್ರಿ 10.30ರ ವೇಳೆ ವೆಂಕಟಮ್ಮನಹಳ್ಳಿಯ ಪೊಲೀಸ್‌ ಕ್ಯಾಂಪ್‌ ಮೇಲೆ ಸುಮಾರು 300 ಜನ ನಕ್ಸಲರು ಬಂದೂಕು, ಬಾಂಬ್‌, ಹ್ಯಾಂಡ್‌ ಗ್ರಾನೈಡ್‌ಗಳೊಂದಿಗೆ ದಾಳಿ ನಡೆಸಿದ್ದರು. ಕರ್ತವ್ಯದಲ್ಲಿದ್ದ 7 ಮಂದಿ ಪೊಲೀಸರನ್ನು ಕೊಲೆ ಮಾಡಿ, 5 ಮಂದಿ ಪೊಲೀಸ್‌ ಸಿಬ್ಬಂದಿಯನ್ನು ಗಾಯಗೊಳಿಸಿ, ಖಾಸಗಿ ಬಸ್‌ ಕ್ಲೀನರ್‌ನ ನ್ನು ಕೊಲೆ ಮಾಡಿದ್ದರು. ಕ್ಯಾಂಪ್‌ನಲ್ಲಿದ್ದ ಅತ್ಯಾಧುನಿಕ ಬಂದೂಕು, ಮದ್ದು ಗುಂಡುಗಳನ್ನು ದೋಚಿ ಪರಾರಿಯಾಗಿ ದ್ದರು. ಈ ಬಗ್ಗೆ ತಿರುಮಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಲೆಮರೆಸಿಕೊಂಡಿದ್ದ 32 ಆರೋಪಿಗಳ ವಿರುದ್ಧ ಪಾವಗಡದ ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ರಹಿತ ವಾರಂಟ್‌ ಹೊರಡಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next