Advertisement
ಕೊಡಗು, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡದ ಗಡಿ ಭಾಗ ಸಂಪಾಜೆ ಸುತ್ತಮುತ್ತ ನಕ್ಸಲರ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಜತೆಗೆ ಕೊಡಗಿಗೆ ಹೊಂದಿಕೊಂಡಿರುವ ವಯನಾಡು ಅರಣ್ಯ ಪ್ರದೇಶಗಳಲ್ಲೂ ನಕ್ಸಲರ ಜಾಡು ಇದೆ ಎನ್ನುವ ಮಾಹಿತಿ ಇದೆ ಎಂದು ಪೊಲೀಸ್ ಕೇಂದ್ರ ಕಚೇರಿ ಮೂಲಗಳು ತಿಳಿಸಿವೆ. ಈಗಾಗಲೇ ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳು ನಕ್ಸಲರ ಚಲನವಲನದ ಕುರಿತು ನಕ್ಸಲ್ ನಿಗ್ರಹ ದಳ (ಎಎನ್‌ಎಫ್) ಮತ್ತು ಕೇರಳ ಪೊಲೀಸರಿಗೆ ಈ ಮಾಹಿತಿ ರವಾನಿಸಿದೆ.
ಕೇರಳದ ವಯನಾಡ್ ಅರಣ್ಯ ಪ್ರದೇಶದಲ್ಲಿ ನಕ್ಸಲ್ ಸದಸ್ಯರು ಕಳೆದ 20 ದಿನಗಳ ಅವಧಿಯಲ್ಲಿ ನಾಲ್ಕೈದು ತಂಡಗಳಾಗಿ ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಓಡಾಡಿರುವುದು ಪತ್ತೆಯಾಗಿದೆ. ಈ ತಂಡಗಳು ಪ್ರವಾಹದಿಂದ ತತ್ತರಿಸಿರುವ ಕೊಡಗಿನಿಂದ ದಕ್ಷಿಣ ಕನ್ನಡದ ಕಡೆಗಿನ ಅರಣ್ಯ ಪ್ರದೇಶಗಳಲ್ಲಿ ಸಂಚರಿಸಿರುವ ಸಾಧ್ಯತೆ ದಟ್ಟವಾಗಿದೆ ಎಂದು ಗುಪ್ತಚರ ದಳದ ಮೂಲಗಳು ತಿಳಿಸಿವೆ.
Related Articles
Advertisement
ಸುತ್ತಮುತ್ತ ಹೆಚ್ಚಿನ ನಿಗಾ:ಗುಪ್ತಚರ ದಳದ ಮಾಹಿತಿ ಆಧರಿಸಿ ಕೇರಳ, ಕೊಡಗು, ಚಿಕ್ಕಮಗಳೂರು ಸೇರಿ ಪಶ್ಚಿಮ ಘಟ್ಟಗಳಲ್ಲಿ ಪೊಲೀಸರು ಹೆಚ್ಚಿನ ನಿಗಾವಹಿಸಿದ್ದಾರೆ. ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳಿಗೆ ಬಹುತೇಕ ಕಡಿವಾಣ ಬಿದ್ದಿತ್ತು. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸಕ್ರಿಯರಾಗಿದ್ದ ಅನೇಕ ಮಾವೋವಾದಿಗಳು ನೆರೆಯ ಕೇರಳದ ಕಾಡುಗಳಲ್ಲಿ ಆಶ್ರಯ ಪಡೆದುಕೊಂಡಿದ್ದರು ಎಂಬ ಮಾಹಿತಿ ಇತ್ತು. ಈಗ ಮತ್ತೆ ತಮ್ಮ ಚಟುವಟಿಕೆ ವಿಸ್ತರಿಸಲು ಅದೇ ತಂಡಗಳು ಕೊಡಗು ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಕೊಡಗು, ಮಡಿಕೇರಿ ಸೇರಿದಂತೆ ರಾಜ್ಯದ ಯಾವ ಭಾಗಕ್ಕೂ ನಕ್ಸಲರು ಆಗಮಿಸದಂತೆ ನಿರಂತರವಾಗಿ ಕಟ್ಟೆಚ್ಚರ ವಹಿಸಲಾಗಿದೆ. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಹದ್ದಿನ ಕಣ್ಣಿಡಲಾಗಿದೆ.
– ಕಮಲ್‌ಪಂಥ್, ಎಡಿಜಿಪಿ, ಕಾನೂನು ಸುವ್ಯವಸ್ಥೆ – ಮಂಜುನಾಥ್ ಲಘುಮೇನಹಳ್ಳಿ