Advertisement

ನಕ್ಸಲರೀಗ ಕಾಡಂಚಿನ ಮನೆಗಳ ಖಾಯಂ ಅತಿಥಿಗಳು! ಪಶ್ಚಿಮಘಟ್ಟ ಅರಣ್ಯ ವಾಸಿಗಳ ಹಳಿತಪ್ಪಿದ ಬದುಕು

10:19 AM Apr 08, 2024 | Team Udayavani |

ಕಾರ್ಕಳ/ ಸುಬ್ರಹ್ಮಣ್ಯ: ಜಗತ್ತಿನ ಜೀವ ವೈವಿಧ್ಯಗಳ ಒಡಲು, ಪಶ್ಚಿಮ ಘಟ್ಟಗಳ ಶ್ರೇಣಿಯ ನಿತ್ಯ ಹರಿದ್ವರ್ಣ ಕಾಡಿನಿಂದ ಕಂಗೊಳಿಸುವ ಕಾಡು-ಗುಡ್ಡಗಳ ಒಡಲಲ್ಲಿ ಆತಂಕದ ಬೇಗುದಿ ನಿರಂತರ ಕುದಿಯುತ್ತಲೇ ಇದೆ.

Advertisement

ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ನಕ್ಸಲರ ತಂಡ ಕಾಡಂಚಿನ ಮನೆಗಳಿಗೆ ನಿರಂತರ ಭೇಟಿ ನೀಡುತ್ತಿದ್ದು, ಕೆಲವೊಂದು ಭೇಟಿ ಸುದ್ದಿಯಾದರೆ ಇನ್ನುಳಿದವು ಸುದ್ದಿಯಾಗುವುದೇ ಇಲ್ಲ. ನಕ್ಸಲರೀಗ ಪಶ್ಚಿಮ ಘಟ್ಟದ ಬೆಟ್ಟಗುಡ್ಡಗಳ ನಡುವಿನ ಕಾಡಂಚಿನ ಮನೆಗಳ ಖಾಯಂ ಅತಿಥಿಗಳು ಎನ್ನುವಷ್ಟರ ಮಟ್ಟಿಗೆ ನಿವಾಸಿಗಳಿಗೆ ಚಿರಪರಿಚಿತರಾಗಿದ್ದಾರೆ.

ಸರಣಿ ಭೇಟಿ, ಸಕ್ರಿಯ ಸೂಚನೆ
ಒಂದು ತಿಂಗಳ ಒಳಗಿನ‌ ಅವಧಿಯಲ್ಲಿ ಪುಷ್ಪಗಿರಿ ತಪ್ಪಲಿನ ಕೂಜುಮಲೆ, ಐನಕಿದು ಹಾಗೂ ಇದಕ್ಕೆ ಹೊಂದಿಕೊಂಡ‌ ಕಡಬ ತಾಲೂಕಿನ ಚೇರು ಈ ಮೂರು ಕಡೆಗೆ ನಕ್ಸಲರು ಭೇಟಿ ನೀಡಿದ್ದಾರೆ. ಸಾಮಾನ್ಯವಾಗಿ ಒಂದು ಬಾರಿ ಭೇಟಿ ಕೊಟ್ಟ ಬಳಿಕ ಆ ಪ್ರದೇಶದಲ್ಲಿ ಮತ್ತೆ ನಕ್ಸಲರು ಕಾಣಿಸಿಕೊಳ್ಳುವುದಿಲ್ಲ. ಈ ಬಾರಿ ಎಎನ್‌ಎಫ್ ಪಡೆಗಳ ನಿರಂತರ ಶೋಧದ ನಡುವೆಯೂ ಅತ್ಯಲ್ಪ ಅಂತರದ ಅವಧಿಯಲ್ಲಿ ಮೂರು ಸ್ಥಳಗಳಿಗೆ ಭೇಟಿ ನೀಡಿ “ನಾವಿನ್ನೂ ಈ ಭಾಗದಲ್ಲಿ ಸಕ್ರಿಯರಾಗಿದ್ದೇವೆ’ ಎನ್ನುವ ಸೂಚನೆಯನ್ನು ಆಡಳಿತಕ್ಕೆ ಮುಟ್ಟಿಸಿದ್ದಾರೆ.

ಬದುಕು ದುಸ್ತರ
ಶತಮಾನಗಳಿಂದಲೂ ಬದುಕು ಕಟ್ಟಿಕೊಂಡಿರುವ ಸಹಸ್ರಾರು ಕುಟುಂಬಗಳು ಇದೇ ಕಾಡಿನೊಳಗೆ ನೆಲೆಸಿವೆ. ಸಮಸ್ಯೆಗಳ ನಡುವೆಯೂ ಸಂತೃಪ್ತ ಜೀವನ ನಡೆಸುತ್ತಿದ್ದ ಅವರ ದೈನಂದಿನ ಜೀವನಕ್ಕೂ ಈಗ ಏಟು ಬಿದ್ದಿದೆ. ಸಾಮಾನ್ಯವಾಗಿ ಕೃಷಿ ಅವಲಂಬಿತರಾಗಿರುವ ಇಲ್ಲಿನ ಮಂದಿ ಅರಣ್ಯ ಉತ್ಪನ್ನಗಳ ಮೂಲಕವೇ ಜೀವನ ರೂಪಿಸಿಕೊಂಡಿದ್ದಾರೆ. ಅದೆಲ್ಲದಕ್ಕೂ ಈಗ ಕೊಡಲಿಯೇಟು ಬಿದ್ದಿದೆ.

ಕುಡಿಯುವ ನೀರಿನ ಮೇಲೂ ಕರಿಛಾಯೆ
ಸಂಪಾಜೆ, ಗಾಳಿಬೀಡು, ಬಾಳುಗೋಡು, ಮಡಪ್ಪಾಡಿ, ಹಾಡಿಕಲ್ಲು, ಉಪ್ಪುಕಳ, ಕೂಜುಮಲೆ, ಕೈಕಂಬ ಸೇರಿದಂತೆ ಮಲೆನಾಡಿನ ಉದ್ದಕ್ಕೂ ಇರುವ ನಿವಾಸಿಗಳು ಕಾಡಿನಿಂದ ಬರುವ ಪ್ರಕೃತಿದತ್ತ ಝರಿಯ ನೀರನ್ನು ಕುಡಿಯಲು, ಕೃಷಿಗೆ ಬಳಸುತ್ತಾರೆ. ಕಾಡೊಳಗಿಂದ ಕಿರಿದಾದ ಪೈಪ್‌ಗ್ಳ ಮೂಲಕ ಝರಿಯ ನೀರು ಮನೆ ಬಾಗಿಲಿಗೆ ಬರುತ್ತದೆ. ಬಿಸಿಲು ಹೆಚ್ಚಿರುವ ಈ ದಿನಗಳಲ್ಲಿ ಕಾಡಿನಿಂದ ಬರುವ ತಣ್ಣನೆಯ ಶುದ್ಧ ನೀರು ಇವರಿಗೆ ಸಂಜೀವಿನಿಯೇ ಆಗಿದೆ. ಕಾಡೊಳಗಿನಿಂದ ಕೊಳವೆ ಮೂಲಕ ನೀರು ಬರುವಾಗ ಆನೆ, ಇತರ ಪ್ರಾಣಿಗಳು ತುಳಿದು ಅಲ್ಲಲ್ಲಿ ಸಂಪರ್ಕ ತಪ್ಪುತ್ತದೆ, ನೀರು ಹರಿದು ಬರುವುದು ನಿಲ್ಲುತ್ತದೆ. ಆಗ ಕಾಡಿನತ್ತ ತೆರಳಿ ಪೈಪ್‌ ಸಂಪರ್ಕ ಸರಿ ಪಡಿಸುವುದು ಕ್ರಮ. ಆದರೀಗ ಅತ್ತ ತೆರಳಲು ನಕ್ಸಲರ ಭಯ, ಎನ್‌ಎಫ್ ಪಡೆಗಳ ಶೋಧ ಕಾರ್ಯ ಅರಣ್ಯ ವಾಸಿಗಳ ದೈನಂದಿನ ಬದುಕಿಗೆ ಅಡ್ಡಿಯಾಗಿದೆ. ಜನ ಕಾಡಿನತ್ತ ತೆರಳುವುದನ್ನು ನಿಲ್ಲಿಸಿರುವುದರಿಂದ ಕುಡಿಯುವ ನೀರಿನ ಮೇಲೂ ನಕ್ಸಲ್‌ ಕರಿಛಾಯೆ ಬೀರಿದೆ.

Advertisement

ಬುಟ್ಟಿ ಹೆಣೆದು ಬದುಕು ಕಟ್ಟುವವರ ಸಂಕಷ್ಟ
ಕಾಡಂಚಿನ ಭಾಗದಲ್ಲಿ ಸಾಂಪ್ರದಾಯಿಕ ಬುಟ್ಟಿ ಹೆಣೆದು ಬದುಕು ಕಟ್ಟಿಕೊಂಡ ಹಲವು ಕುಟುಂಬಗಳಿವೆ. ಅವರೆಲ್ಲರೂ ಕಾಡಿಗೆ ತೆರಳಿ ಬುಟ್ಟಿ ಹೆಣೆಯಲು ಬೇಕಾದ ಬಿದಿರು, ಬೀಳು ಇತ್ಯಾದಿ ಕಚ್ಚಾವಸ್ತುಗಳನ್ನು ಕಾಡಿನಿಂದ ಸಂಗ್ರಹಿಸಿ ತಂದು ದಾಸ್ತಾನಿಟ್ಟಿರುತ್ತಾರೆ. ಮಳೆಗಾಲದ ಪೂರ್ವದಲ್ಲಿ ಸಂಗ್ರಹ ಮಾಡಿಟ್ಟು, ಮಳೆಗಾಲದಲ್ಲಿ ಬುಟ್ಟಿ ಹೆಣೆದು ಮಾರಾಟ ಮಾಡಿ ಜೀವನ ಸಾಗಿಸುತ್ತಾರೆ. ಆದರೀಗ ಅವರು ಕಾಡಿಗೆ ಹೋಗುವುದಕ್ಕೂ ಆಗುತ್ತಿಲ್ಲ.

ಮಳೆಗಾಲಕ್ಕೆ ತಯಾರಿ ಕಷ್ಟ
ಮಳೆಗಾಲಕ್ಕೆ ಪೂರ್ವ ಸಿದ್ಧತೆಗಳು ಗ್ರಾಮೀಣ ಭಾಗ ದಲ್ಲಿ ಇದೀಗ ಜೋರಾಗಿ ನಡೆಯುವ ಸಮಯ. ಕಾಡಿನಿಂದ ಕಟ್ಟಿಗೆ ತಂದು ಸಂಗ್ರಹಿಸಿಡುವ ಕೆಲಸ ಈ ಅವಧಿ ಯಲ್ಲಿ ನಡೆಯುತ್ತದೆ. ಆದರೆ ಕಟ್ಟಿಗೆ ತರಲು ಕಾಡಿಗೆ ಹೋಗುವುದಕ್ಕೂ ನಕ್ಸಲರು ಹಾಗೂ ಅವರಿಗಾಗಿ ನಡೆಯುತ್ತಿರುವ ಶೋಧ ಕಾರ್ಯ ಅಡ್ಡಿಯಾಗಿದೆ. ಮಹಿಳೆಯರು ಸೊಪ್ಪು, ತರಗೆಲೆ ತರಲು ಕಾಡಿನತ್ತ ಹೋಗುವುದಕ್ಕೆ ಭಯ ಪಡುತ್ತಿದ್ದಾರೆ. ಕಾಡುತ್ಪತ್ತಿಗ ಳಾದ ಉಂಡೆಹುಳಿ, ಸೀಗೆ ಸಂಗ್ರಹಕ್ಕೂ ಕಷ್ಟ. ಕಾಡಿನಲ್ಲಿ
ಹೇರಳವಾಗಿರುವ ರಾಮಪತ್ರೆ ಇನ್ನು ಕೆಲ ಸಮಯ ದಲ್ಲಿ ಕೊçಲಿಗೆ ಬರುತ್ತದೆ. ಅದಕ್ಕೂ ಈಗ ತಡೆಯಾಗಿದೆ. ಒಟ್ಟಿನಲ್ಲಿ ಕಾಡಿನಂಚಿನ ಜನರ ಜೀವನ ಹಳಿತಪ್ಪಿದೆ.

ಶರಣಾಗತಿ ಇಲ್ಲವೆ ತಳವೂರುವ ಪ್ರಯತ್ನ
ಕಾಡಂಚಿನ ಮನೆಗಳಿಗೆ ದಿನಸಿ, ಆಹಾರದ ನೆಪದಲ್ಲಿ ಭೇಟಿ ನೀಡುವ ನಕ್ಸಲರು ಹೆಚ್ಚಿನ ತಾಳ್ಮೆಯನ್ನು ತೋರುತ್ತಿದ್ದಾರೆ. ಕಾಯಲು ಸಿದ್ಧರಾಗಿದ್ದಾರೆ. ಅವರು ಗುರಿಗಳನ್ನು ಹುಡುಕುತ್ತಿದ್ದಾರೆ. ಕಾಡಂಚಿನ ನಿವಾಸಿಗಳ, ಕಾರ್ಮಿಕರ ಮನಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ಇದೆಲ್ಲವೂ ಅವರು ಈ ಭಾಗದಲ್ಲಿ ತಮ್ಮ ನೆಲೆಯನ್ನು ಗಟ್ಟಿಯಾಗಿಸುವ ಪ್ರಯತ್ನದ ಭಾಗ ಎಂದು ಭಾವಿಸಲಾಗುತ್ತಿದೆ. ಇನ್ನೊಂದು ಮೂಲದ ಪ್ರಕಾರ ನಕ್ಸಲರಿಗೆ ಕಾಡು ಸಾಕಾಗಿದೆ. ಹಾಗಾಗಿ ಶರಣಾಗತಿಗೆ ಪ್ರಯತ್ನಿಸುತ್ತಿದ್ದಾರೆ ಎನ್ನುವ ಅನುಮಾನಗಳು ಅವರ ಇತ್ತೀಚಿನ ನಡವಳಿಕೆಯಿಂದ ಭಾಸವಾಗುತ್ತಿದೆ.

ಕಾಡಿಗೆ ತೆರಳಿ ಬೀಳು ತಂದು ಬುಟ್ಟಿ ನೇಯ್ದು ನನ್ನ ಕುಟುಂಬದ ಜೀವನ ಸಾಗಿಸುತ್ತಿದ್ದೆವು. ಈಗ ಎಲ್ಲಿಗೂ ಹೋಗ ಲಾಗುತ್ತಿಲ್ಲ. ಕಾಡಿಗೆ ಹೋಗಲು ಭಯವಾಗುತ್ತಿದೆ. ಮಳೆಗಾಲದಲ್ಲಿ ಜೀವನ ನಡೆಸುವುದು ಹೇಗೆ ಎನ್ನುವುದೇ ಚಿಂತೆಯಾಗಿದೆ.
– ಕಿಟ್ಟ, ಬುಟ್ಟಿ ನೇಯ್ದು ಬದುಕು ಕಟ್ಟಿಕೊಂಡ ವ್ಯಕ್ತಿ

– ಬಾಲಕೃಷ್ಣ ಭೀಮಗುಳಿ
– ದಯಾನಂದ ಕಲಾ°ರ್‌

Advertisement

Udayavani is now on Telegram. Click here to join our channel and stay updated with the latest news.

Next