ಇಸ್ಲಾಮಾಬಾದ್ : ಮುಂದಿನ ತಿಂಗಳಲ್ಲಿ ಕಝಕಿಸ್ಥಾನದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಓ) ಶೃಂಗ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರೊಳಗೆ ಭೇಟಿ, ಮಾತುಕತೆ ನಡೆಯುವ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎಂದು ಷರೀಫ್ ಅವರ ಸಲಹೆಗಾರ ಸರ್ತಾಜ್ ಅಜೀಜ್ ಹೇಳಿದ್ದಾರೆ.
ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧ್ಯವ ತೀವ್ರವಾಗಿ ಹದಗೆಟ್ಟು ಪ್ರಕೃತ ಗಡಿ ಉದ್ರಿಕ್ತತೆಯು ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಭಾರತ – ಪಾಕ್ ಪ್ರಧಾನಿಗಳ ನಡುವೆ ಭೇಟಿ, ಮಾತುಕತೆಯನ್ನು ವ್ಯವಸ್ಥೆಗೊಳಿಸುವ ಹಿಂಬಾಗಿಲ ಸಂಪರ್ಕಗಳು ಕ್ರಿಯಾಶೀಲವಾಗಿರುವುದನ್ನು ಸರ್ತಾಜ್ ಅಜೀಜ್ ಹೇಳಿಕೆ ದೃಢಪಡಿಸಿದೆ.
“ಭಾರತ ಒಂದೊಮ್ಮೆ ಆಸಕ್ತಿ ತೋರಿಸಿದಲ್ಲಿ ಪಾಕಿಸ್ಥಾನ ಕೂಡ ಆಸಕ್ತಿ ತೋರಿ ಉಭಯ ದೇಶಗಳ ಪ್ರಧಾನಿ ಮಾತುಕತೆಯನ್ನು ಸಾಧ್ಯಗೊಳಿಸಬಲ್ಲುದು’ ಎಂದು ಸರ್ತಾಜ್ ಹೇಳಿರುವುದನ್ನು ಉಲ್ಲೇಖೀಸಿ “ದ ನೇಶನ್’ ಸುದ್ದಿ ಪತ್ರಿಕೆ ವರದಿ ಮಾಡಿದೆ.
“ಆದರೆ ಉಭಯ ದೇಶಗಳ ಪ್ರಧಾನಿಗಳ ಮಾತುಕತೆಯ ಸಂಭಾವ್ಯತೆಯ ಬಗ್ಗೆ ಈಗಲೇ ಹೇಳುವುದು ಕಷ್ಟ; ಏಕೆಂದರೆ ಹಾಗೆ ಹೇಳುವುದು ಬೇಗನೇ ಆದೀತು ಎಂದು “ದ ನೇಶನ್’ ಹೇಳಿದೆ.
ಪಾಕಿಸ್ಥಾನಕ್ಕೆ ಎಸ್‌ಸಿಓ ಶೃಂಗ ಸಭೆ ಅತೀ ಮುಖ್ಯವಾಗಿದೆ; ಕಾರಣ ಪಾಕಿಸ್ಥಾನವು ಆ ಸಂಘಟನೆಯ ಖಾಯಂ ಸದಸ್ಯನಾಗಿದೆ ಎಂದು ಅಜೀಜ್ ಹೇಳಿದರು.