Advertisement

ನವಾಜ್‌ ಶರೀಫ್, ಪುತ್ರಿ ಬಂಧನ

06:00 AM Jul 14, 2018 | Team Udayavani |

ಲಾಹೋರ್‌/ಪೇಶಾವರ: ಸಂಸತ್‌ ಚುನಾವಣೆಯ ಹೊಸ್ತಿಲಲ್ಲಿರುವ ಪಾಕಿಸ್ಥಾನದಲ್ಲಿ ಶುಕ್ರವಾರ ಹೈಡ್ರಾಮಾ ನಡೆದಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿರುವ ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಜ್‌ ಶರೀಫ್, ಅವರ ಪುತ್ರಿ ಮರ್ಯಮ್‌ ಅವರನ್ನು ಬಂಧಿಸಲಾಗಿದೆ. ಲಂಡನ್‌ನಿಂದ ಅಬುಧಾಬಿ ಮೂಲಕ ವಿಮಾನದಲ್ಲಿ ಲಾಹೋರ್‌ಗೆ ಬಂದಿಳಿದ ತತ್‌ಕ್ಷಣವೇ ಅವರನ್ನು ಬಂಧಿಸಿ, ಹೆಲಿ ಕಾಪ್ಟರ್‌ ಮೂಲಕ ಇಸ್ಲಾಮಾಬಾದ್‌ಗೆ ಕರೆದೊಯ್ದು, ಅಲ್ಲಿಂದ ರಾವಲ್ಪಿಂಡಿ ಸಮೀಪದ ಪಟ್ಟಣ ಅಡಿಯಾಲದಲ್ಲಿರುವ ಜೈಲಿಗೆ ಕರೆದೊಯ್ಯಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಲಾಹೋರ್‌, ಇಸ್ಲಾಮಾಬಾದ್‌ ಏರ್‌ಪೋರ್ಟ್‌ಗೆ ತೆರಳುವ ಪ್ರಮುಖ ರಸ್ತೆಗಳನ್ನು ಬಂದ್‌ ಮಾಡಲಾಗಿತ್ತು.

Advertisement

ಶರೀಫ್ ಶುಕ್ರವಾರ ಸಂಜೆ 6 ಗಂಟೆಗೆ ಲಾಹೋರ್‌ಗೆ ಆಗಮಿಸಬೇಕಾಗಿತ್ತು. ನಿಗ ದಿತ ಸಮಯಕ್ಕಿಂತ ಎರಡೂವರೆ ಗಂಟೆ ವಿಳಂಬದ ಬಳಿಕ ವಿಮಾನ  6 ಗಂಟೆಗೆ ಅಬಧಾಬಿಯಿಂದ ಟೇಕಾಫ್ ಆಯಿತು. ಎತಿಹಾದ್‌ ಏರ್‌ವೇಸ್ ವಿಮಾನದ ಮೂಲಕ ಅವರು ಲಾಹೋರ್‌ ವಿಮಾನ ನಿಲ್ದಾಣಕ್ಕೆ 8.48ಕ್ಕೆ ಆಗಮಿಸಿದರು. ಪ್ರಯಾಣಕ್ಕೆ ಮುನ್ನ ಅಬುದಾಭಿ ವಿಮಾನ ನಿಲ್ದಾಣದಲ್ಲಿ ಬಿಬಿಸಿ ಜತೆಗೆ ಮಾತನಾಡಿದ ಶರೀಫ್,  ನಮ್ಮ ದೇಶದಲ್ಲಿ ಪಕ್ಷದ ಕಾರ್ಯಕರ್ತರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಅನುಸರಿಸಲಾಗುತ್ತಿದೆ. ಇಂಥ ಕ್ರಮ ಕೈಗೊಳ್ಳುತ್ತಿ ರುವ ಸಂದರ್ಭದಲ್ಲಿಯೇ ನಡೆಯುತ್ತಿರುವ ಚುನಾವಣ ಪ್ರಕ್ರಿಯೆ ಮೇಲೆ ನಂಬಿಕೆ ಇರಿಸಬಹುದೇ? ಎಂದು ಪ್ರಶ್ನಿಸಿದ್ದಾರೆ.

ಮೊಬೈಲ್‌, ಇಂಟರ್‌ನೆಟ್‌  ಬಂದ್‌: ಪಾಕಿಸ್ಥಾನದಾದ್ಯಂತ ಮೊಬೈಲ್‌ ಇಂಟರ್ನೆಂಟ್‌ ಸೇವೆ ಸ್ಥಗಿತಗೊಳಿಸ ಲಾಗಿದೆ. ಪಂಜಾಬ್‌ ಪ್ರಾಂತ್ಯ ಸರಕಾರ ಪಿಎಂಎಲ್‌-ಎನ್‌ ನಾಯಕರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದಂತೆ ನಿಷೇಧ ಹೇರಿದೆ. 

10 ಸಾವಿರ ಪೊಲೀಸರು:
ಲಾಹೋರ್‌ ಮತ್ತು ಇಸ್ಲಾಮಾ ಬಾದ್‌ನಲ್ಲಿ ಭದ್ರತೆಗಾಗಿ ಹತ್ತು ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಶುಕ್ರವಾರ ಒಂದೇ ದಿನ ಲಾಹೋರ್‌ನಲ್ಲಿ 378ಕ್ಕೂ ಅಧಿಕ ಮಂದಿ ನವಾಜ್‌ ಶರೀಫ್ ಬೆಂಬಲಿಗರನ್ನು ಬಂಧಿಸಲಾಗಿದೆ. ಗುರುವಾರ ಪಾಕಿಸ್ಥಾನದಾದ್ಯಂತ ನಡೆಸಿದ್ದ ಕಾರ್ಯಾಚರಣೆಯಲ್ಲಿ 500ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು.

ಬೆಂಬಲವಾಗಿ ನಿಲ್ಲಿ:
ಪಾಕಿಸ್ಥಾನದ ಭವಿಷ್ಯ ಬದಲಾಯಿ ಸುವ ನಿಟ್ಟಿನಲ್ಲಿ ಬೆಂಬಲ ನೀಡಿ ಎಂದು ಶರೀಫ್ ತಮ್ಮ ಪಕ್ಷ ಪಾಕಿಸ್ಥಾನ ಮುಸ್ಲಿಂ ಲೀಗ್‌-ನವಾಜ್‌ (ಪಿಎಂಎಲ್‌-ಎನ್‌)ನ ಕಾರ್ಯಕರ್ತರಿಗೆ ಮನವಿ ಮಾಡಿಕೊಂಡಿದ್ದಾರೆ. “ಪಾಕಿಸ್ಥಾನ ಈಗ ಕವಲು ದಾರಿಯಲ್ಲಿದೆ’ ಎಂದು ಅವರು ಅಬುಧಾಬಿಯಿಂದ ಕಳುಹಿಸಿರುವ ವೀಡಿಯೋ ಸಂದೇಶದಲ್ಲಿ ಹೇಳಿ ಕೊಂಡಿದ್ದಾರೆ.  “ನನಗೆ ಏನು ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿದ್ದೇನೆ. ಹತ್ತು ವರ್ಷ ಜೈಲು ಶಿಕ್ಷೆಯಾಗಿರುವುದೂ ಗಮನಕ್ಕೆ ಬಂದಿದೆ. ಸ್ವದೇಶಕ್ಕೆ ಬಂದ ಕೂಡಲೇ ಜೈಲಿಗೆ ತೆರಳಲಿದ್ದೇನೆ. ಪಾಕಿಸ್ಥಾನಿ ಯರಿಗಾಗಿ ಈ ಎಲ್ಲವನ್ನೂ ಮಾಡುತ್ತಿದ್ದೇನೆ ತಿಳಿಯಿರಿ’ ಎಂದು ಹೇಳಿದ್ದಾರೆ.

Advertisement

ಮೊಮ್ಮಕ್ಕಳ ಬಂಧನ:
ಲಂಡನ್‌ನಲ್ಲಿ ಶರೀಫ್ರ ಇಬ್ಬರು ಮೊಮ್ಮಕ್ಕಳನ್ನು ಪೊಲೀಸರು ಬಂಧಿಸಿದ್ದಾರೆ. ಮಾಜಿ ಪಿಎಂ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದವರ ಜತೆಗೆ ಗಲಾಟೆ ಹಿನ್ನೆಲೆಯಲ್ಲಿ ಬಂಧಿಸಿದ್ದಾರೆ.

ಬಾಂಬ್‌ ದಾಳಿಗೆ 90 ಬಲಿ
ಈ ಎಲ್ಲ ಬೆಳವಣಿಗೆಗಳ ನಡು ವೆಯೇ ಪಾಕಿಸ್ಥಾನದ 2 ಸ್ಥಳಗಳಲ್ಲಿ ಚುನಾವಣ ಪ್ರಚಾರ ಭಾಷಣ ನಡೆಯುತ್ತಿರುವ ಸಂದರ್ಭ ಪ್ರತ್ಯೇಕ ಬಾಂಬ್‌ ದಾಳಿಗಳು ನಡೆದಿವೆ. ಅದರಲ್ಲಿ ಒಟ್ಟು 90 ಮಂದಿ ಅಸುನೀಗಿ, 150ಕ್ಕೂ ಅಧಿಕ ಮಂದಿ ಗಾಯ ಗೊಂಡಿದ್ದಾರೆ. ಬಲೂಚಿಸ್ಥಾನದ ಮಸ್ತಂಗ್‌ನಲ್ಲಿ ನಡೆದ ಸ್ಫೋಟದಲ್ಲಿ ಬಲೂಚಿಸ್ಥಾನ ಅವಾಮಿ ಪಾರ್ಟಿ (ಬಿಎಪಿ) ನಾಯಕ ಸಿರಾಜ್‌ ರೈಸಾನಿ ಸಹಿತ 85 ಮಂದಿ ಅಸುನೀಗಿದ್ದಾರೆ. ಈ ಘಟನೆಯಲ್ಲಿ  150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next