ನವಲಗುಂದ: ಕೋವಿಡ್ 19 ವಿರುದ್ಧ ಹೋರಾಡಲು ಮನೆಯಲ್ಲಿದ್ದು ಆರೋಗ್ಯ ಕಾಪಾಡಿಕೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.
ಪಟ್ಟಣದಲ್ಲಿ ಬುಧವಾರ ಲಾಕ್‌ಡೌನ್ ಪರಿಸ್ಥಿತಿ ಪರಿಶೀಲಿಸಿ ತಾಪಂ ಸಭಾಭವನದಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿ ಸಾರ್ವಜನಿಕರ ಹಾಗೂ ರೈತರ ಸಮಸ್ಯೆಗಳ ಕುರಿತು ಚರ್ಚಿಸಿದರು. ರೈತರಿಗೆ ಬೀಜ, ಗೊಬ್ಬರ ಇತರೆ ಕೃಷಿ ಚಟುವಟಿಕೆಗೆ ಬೇಕಾಗುವ ವಸ್ತುಗಳ ಕೊರತೆ ಇರಲ್ಲ. ಮುಂಗಾರು ಬಿತ್ತನೆ ಕೃಷಿಕರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ನಿಗಾ ವಹಿಸಬೇಕೆಂದರು. ಬಡವರ ಹೊಸ ಪಡಿತರ ಚೀಟಿಗೆ ಅರ್ಜಿ ನೀಡಿದವರಿಗೂ ಪಡಿತರ ನೀಡಲು ಸೂಚನೆ ನೀಡಿದರು.
ಹಿರಿಯ ನಾಗರಿಕರ, ಅಂಗವಿಕಲರ, ವಿಧವಾ ಹಾಗೂ ಇತರೆ ಮಾಸಾಶನ, ಕೃಷಿ ಸಮ್ಮಾನ, ಉದ್ಯೋಗ ಖಾತ್ರಿ ಯೋಜನೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಾರ್ಯ ನಿರ್ವಹಣೆ, ವಾರ್ಡ್‌ವಾರು ತರಕಾರಿ ಹಾಗೂ ದಿನಸಿ ವಸ್ತುಗಳ ಮಾರಾಟ ವ್ಯವಸ್ಥೆ, ಮುಂಗಾರು ಬಿತ್ತನೆಗೆ ಬೇಕಾಗುವ ಬೀಜ ಹಾಗೂ ಗೊಬ್ಬರ ದಾಸ್ತಾನಿನ ಕುರಿತು ಅಧಿ ಕಾರಿಗಳಿಂದ ಮಾಹಿತಿ ಪಡೆದರು. ತಹಶೀಲ್ದಾರ್ ನವೀನ ಹುಲ್ಲೂರ ಮಾಹಿತಿ ನೀಡಿದರು.
ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ನ್ಯಾಯಬೆಲೆ ಅಂಗಡಿಗಳು ಇರದ ಗ್ರಾಮಗಳ ಜನರು ಪಡಿತರ ಪಡೆಯಲು ಬೇರೆ ಗ್ರಾಮಗಳಿಗೆ ಗುಂಪಾಗಿ ಹೋಗುವುದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಕಾರಣ ಪಡಿತರ ವಿತರಕರು ಆಯಾ ಗ್ರಾಮಗಳಿಗೇ ಹೋಗಿ ಪಡಿತರ ವಿತರಿಸುವ ವ್ಯವಸ್ಥೆ ಮಾಡಬೇಕೆಂದರು.
ಉಪವಿಭಾಗಾಕಾರಿ ಮಹಮ್ಮದ ಜುಬೇದ್ ಪ್ರಾಸ್ತಾವಿಕ ಮಾತನಾಡಿದರು.ಜಿಪಂ ಸಿಇಒ ಡಾ|ಬಿ.ಸಿ.ಸತೀಶ, ತಾಪಂ ಅಧ್ಯಕ್ಷೆ ಅನ್ನಪೂರ್ಣ ಶಿರಹಟ್ಟಿಮಠ, ಇಒ ಪವಿತ್ರಾ ಪಾಟೀಲ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.