ಹೊಸದಿಲ್ಲಿ:ಅಮೆರಿಕ ಮತ್ತು ಇರಾನ್ ಮಧ್ಯೆ ಉಂಟಾಗಿರುವ ಬಿಕ್ಕಟ್ಟಿನಿಂದ ಪರ್ಷಿಯನ್ ಗಲ್ಫ್ ತೈಲ ಸಾಗಣೆ ಮಾರ್ಗದಲ್ಲಿ ಆತಂಕ ಉಂಟಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ಭಾರತದ ತೈಲ ಹಡಗುಗಳಿಗೆ ನೌಕಾಪಡೆ ರಕ್ಷಣೆ ಒದಗಿಸಲಿದೆ. ಗುರುವಾರ ಅಮೆರಿಕದ ಡ್ರೋನ್ ಅನ್ನು ಇರಾನ್ ಹೊರ್ಮುಜ್ ಮಾರ್ಗದಲ್ಲಿ ಹೊಡೆದುರುಳಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, ಇರಾನ್ ತಪ್ಪು ಮಾಡಿದೆ ಎಂದು ಪ್ರತಿಕ್ರಿಯಿಸಿದ್ದರು. ಅಲ್ಲದೆ, ಪ್ರತೀಕಾರಕ್ಕಾಗಿ ಇರಾನ್ ಮೇಲೆ ದಾಳಿ ನಡೆಸುವಂತೆ ಆದೇಶಿಸಿದ್ದರಾದರೂ ಅನಂತರ ಹಿಂತೆಗೆದುಕೊಂಡಿದ್ದರು.
ಮೂಲಗಳ ಪ್ರಕಾರ, ಭಾರತದ ತೈಲ ಹಡಗುಗಳಲ್ಲಿ ಒಬ್ಬ ನೌಕಾ ಅಧಿಕಾರಿ ಹಾಗೂ ಇಬ್ಬರು ಯೋಧರನ್ನು ನೇಮಿಸಲು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲ, ಈ ತಂಡವು ಹೆಲಿಕಾಪ್ಟರ್ ಮೂಲಕ ಈ ಹಡಗುಗಳಿಗೆ ರಕ್ಷಣೆ ಒದಗಿ ಸಲಿದ್ದಾರೆ. ಪ್ರತಿ ದಿನ ಸುಮಾರು ಐದರಿಂದ ಎಂಟು ಹಡಗುಗಳು ಈ ಭಾಗದ ಮೂಲಕ ಸಾಗುತ್ತವೆ. ಭಾರತಕ್ಕೆ ಅಗತ್ಯವಿರುವ ಶೇ. 64ರಷ್ಟು ತೈಲ ಈ ಮಾರ್ಗದ ಮೂಲಕ ಆಗಮಿಸುತ್ತದೆ.
ತೈಲ ದರ ಶೇ.6ರಷ್ಟು ಏರಿಕೆ: ಅಮೆರಿಕ ಮತ್ತು ಇರಾನ್ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದಂತೆಯೇ ತೈಲ ಬೆಲೆಯೂ ಏರಿಕೆ ಕಾಣುತ್ತಿದೆ. ಈ ವಾರ ತೈಲ ಬೆಲೆ ಶೇ.6ರಷ್ಟು ಏರಿಕೆಯಾಗಿ, ಬ್ಯಾರೆಲ್ಗೆ 65 ಡಾಲರ್‌ಗೆ ತಲುಪುವ ನಿರೀಕ್ಷೆಯಿದೆ. ಇದು ಭಾರತದ ತೈಲ ವಹಿವಾಟಿನ ಮೇಲೂ ಪರಿಣಾಮ ಬೀರಲಿದೆ. ಯುರೋಪ್‌ನ ಬ್ರೆಂಟ್ ಕಚ್ಚಾ ತೈಲ ಈ ವಾರದಲ್ಲಿ ಶೇ. 5 ರಷ್ಟು ಏರಿಕೆಯಾಗಿತ್ತು. ಅಲ್ಲದೆ, ಅಮೆರಿಕದ ಫೆಡರಲ್ ಏಜೆನ್ಸಿ ಕೂಡ ಬಡ್ಡಿ ದರವನ್ನು ಶೀಘ್ರದಲ್ಲೇ ಕಡಿತಗೊಳಿಸುತ್ತೇವೆ ಎಂದು ಮುನ್ಸೂಚನೆ ನೀಡಿರುವುದೂ ತೈಲ ಬೆಲೆ ಏರಿಕೆಗೆ ಕಾರಣವಾಗಿದೆ. ವಿಶ್ವದ ತೈಲ ವಹಿವಾಟಿನಲ್ಲಿ ಇರಾನ್ ಪ್ರಮುಖ ಪಾಲನ್ನು ಹೊಂದಿದೆ. ಅಲ್ಲದೆ, ಈಗ ಎದ್ದಿರುವ ಸಂಘರ್ಷವು ತೈಲ ಸಾಗಣೆ ಮಾರ್ಗದಲ್ಲೇ ನಡೆಯುತ್ತಿರುವುದರಿಂದ ಜಾಗತಿಕ ತೈಲ ಸಾಗಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ.