ಬಂಟ್ವಾಳ: ಒಂದೆಡೆ ನೇತ್ರಾವತಿ ನದಿ, ಮತ್ತೂಂದೆಡೆ ಕೊಡ್ಯಮಲೆ ಅರಣ್ಯ ಪ್ರದೇಶದಿಂದ ಆವರಿಸಿರುವ ಗ್ರಾಮವೇ ನಾವೂರು. ನಾಲ್ಕೈತ್ತಾಯನ ಊರು ನಾವೂರು ಎಂಬುದು ಇದರ ಹಿನ್ನೆಲೆ. ಅಭಿವೃದ್ಧಿಯಲ್ಲೀಗ ತೀರಾ ದೊಡ್ಡ ಮಟ್ಟದ ಸಾಧನೆ ಮಾಡಬೇಕಿದೆ. ಹಾಗೆಂದು ತೀರಾ ಅಭಿವೃದ್ಧಿಯ ಬೆಳಕಿಗೆ ಬೀಳದ ಗ್ರಾಮವೇ ಎಂದರೆ ಅಲ್ಲ ಎನ್ನಬಹುದು.
ಕೃಷಿಕರೇ ತುಂಬಿರುವ ಗ್ರಾಮ. ಹಾಗಾಗಿ ಹೇಳಿಕೊಳ್ಳುವಂತಹ ಆರ್ಥಿಕ ಚಟುವಟಿಕೆಯ ಸಂಸ್ಥೆಗಳು ಕಡಿಮೆ. ಜನರ ತೆರಿಗೆಯ ಮೊತ್ತವೇ ಪ್ರಮುಖ ಆದಾಯ. ಅದರಲ್ಲಿ ಗ್ರಾಮ ಪಂಚಾಯತ್ ನಿರ್ವಹಣೆಯೇ ದೊಡ್ಡ ಸವಾಲು. ಉಳಿದ ಮೊತ್ತದಲ್ಲಿ ಅಭಿವೃದ್ಧಿ ಕಾರ್ಯ ಕಷ್ಟ ಎನ್ನುವುದು ಸ್ಥಳೀಯಾಡಳಿತದ ಅಭಿಪ್ರಾಯ.
ನಾವೂರು ಗ್ರಾಮಕ್ಕೆ ಪ್ರಮುಖ ಜಂಕ್ಷನ್ ಇಲ್ಲದೇ ಇದ್ದರೂ, ಬಿ.ಸಿ.ರೋಡ್ – ಪುಂಜಾಲಕಟ್ಟೆ ಹೆದ್ದಾರಿಯ ಮಣಿಹಳ್ಳವೇ ಪ್ರಮುಖ ಜಂಕ್ಷನ್. ಉಳಿದಂತೆ ಹಲವು ಭಾಗಗಳಲ್ಲಿ ಸಣ್ಣ ಪುಟ್ಟ ಜಂಕ್ಷನ್‌ಗಳಿವೆ. ಗ್ರಾ.ಪಂ. ಕಚೇರಿಯು ಮೈಂದಾಳ ಎಂಬ ಪ್ರದೇಶದಲ್ಲಿದ್ದು, ಗ್ರಂಥಾಲಯ, ಗ್ರಾಮಕರಣಿಕರ ಕಚೇರಿ, ಅಂಚೆ ಕಚೇರಿ ಅಲ್ಲೇ ಇವೆ. ಹಾಗಾಗಿ ಇದೇ ಪ್ರಮುಖ ಜಂಕ್ಷನ್ ಎಂಬಂತಾಗಿದೆ.
ಏನೇನು ಆಗಬೇಕು? ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿವೆ. ಆದರೆ ವಿದ್ಯಾರ್ಥಿಗಳ ಸಂಖ್ಯೆ ನಿರೀಕ್ಷೆಯಷ್ಟಿಲ್ಲ. ಬಂಟ್ವಾಳ ನಗರ ಹತ್ತಿರವಿರುವ ಕಾರಣ ಗ್ರಾಮದ ವಿದ್ಯಾರ್ಥಿಗಳೆಲ್ಲರೂ ಅಲ್ಲಿಯ ಶಾಲೆಗಳಿಗೆ ತೆರಳುತ್ತಾರೆ. ಹೀಗಾಗಿ ಗ್ರಾಮಕ್ಕೆ ಸರಕಾರಿ ಆಂಗ್ಲ ಮಾಧ್ಯಮ ಶಾಲೆ ಬೇಕೆಂಬ ಬೇಡಿಕೆ ಇದೆ.
ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, ತಾಲೂಕು ಆಸ್ಪತ್ರೆ ಕೂಡ ಹತ್ತಿರವಿದೆ. ಹೆಚ್ಚಿನ ಸಮಸ್ಯೆಗಳಿಲ್ಲವಂತೆ. ಗ್ರಾ.ಪಂ. ಕಚೇರಿ ಆವರಣವು ತೀರಾ ಇಕ್ಕಟ್ಟಿನಿಂದ ಕೂಡಿದೆ. ಸಣ್ಣ ವಾಹನವನ್ನೂ ನಿಲ್ಲಿಸುವುದಕ್ಕೂ ಸರಿಯಾದ ಸ್ಥಳವಿಲ್ಲ. ಹೀಗಾಗಿ ಗ್ರಾ.ಪಂ. ಕಚೇರಿಯನ್ನು ಪ್ರಮುಖ ಜಂಕ್ಷನ್ ಆಗಿರುವ ಹೆದ್ದಾರಿ ಬದಿಯ ಮಣಿಹಳ್ಳಕ್ಕೆ ಸ್ಥಳಾಂತರಿಸುವ ಆಲೋಚನೆಯೂ ಇದೆ. ಅದಕ್ಕಾಗಿ ಸರಕಾರಿ ಸ್ಥಳವನ್ನು ಗುರುತಿಸುವ ಪ್ರಯತ್ನ ನಡೆದಿದೆ. ಸಮರ್ಪಕವಾದ ಸ್ಮಶಾನ ಕೂಡ ಇಲ್ಲವಾಗಿದ್ದು, ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೂ ಜಾಗ ಅಂತಿಮಗೊಂಡಿಲ್ಲ. ಒಂದಷ್ಟು ರಸ್ತೆಗಳು ಅಭಿವೃದ್ಧಿಯಾಗಿದ್ದರೂ, ಒಳರಸ್ತೆಗಳು ಅಭಿವೃದ್ಧಿಗಾಗಿ ಕಾಯುತ್ತಿವೆ.
ಹೆದ್ದಾರಿ ಅಭಿವೃದ್ಧಿಯ ಸಂದರ್ಭ ಸಾಕಷ್ಟು ಗ್ರಾಮಸ್ಥರ ಜಾಗಗಳು ಹೆದ್ದಾರಿಗೆ ಹೋಗಿದ್ದು, ಅದರ ಪರಿಹಾರ ವಿತರಣೆಯಲ್ಲೂ ಅನ್ಯಾಯವಾಗಿದೆ ಎಂಬುದು ಗ್ರಾಮಸ್ಥರ ದೂರು. ಹೆದ್ದಾರಿಗೆ ಜಾಗ ಅಗೆಯುವ ಸಂದರ್ಭದಲ್ಲಿ ಗುಡ್ಡಗಳನ್ನು ಅಪಾಯಕಾರಿ ರೀತಿಯಲ್ಲಿ ಅಗೆಯಲಾಗಿದೆ ಎಂಬ ಆರೋಪವೂ ಇದೆ.
ಬರೀ ತೆರಿಗೆ ಹಣದ ಆದಾಯ: ಗ್ರಾಮದ ಪ್ರಮುಖ ಸ್ಥಳವಾದ ಗ್ರಾ.ಪಂ.ಕಚೇರಿ ಆವರಣದಲ್ಲಿ ವಾಹನ ಪಾರ್ಕಿಂಗ್ ಸೇರಿದಂತೆ ಸಮರ್ಪಕವಾದ ವ್ಯವಸ್ಥೆಯಿಲ್ಲ. ಜತೆಗೆ ಆದಾಯದ ವಿಚಾರದಲ್ಲೂ ತೀರಾ ಹಿಂದೆ ಇದ್ದು, ಕೇವಲ ಜನರ ತೆರಿಗೆಯ ಹಣಗಳೇ ಪಂಚಾಯತ್‌ಗೆ ಆದಾಯ. ಆದರೆ ಈ ಅನುದಾನದಿಂದ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವುದು ಕಷ್ಟ. –
ಬಿ.ಉಮೇಶ್ ಕುಲಾಲ್, ಅಧ್ಯಕ್ಷರು, ನಾವೂರು ಗ್ರಾ.ಪಂ.
ನಾಲ್ಕೈತ್ತಾಯ ಕ್ಷೇತ್ರ-ಗ್ರಾಮದ ಹೆಸರಿಗೆ ಶಕ್ತಿ
ನಾವೂರು ಗ್ರಾಮಕ್ಕೆ ಶ್ರೀ ನಾವೂರೇಶ್ವರ ಸುಬ್ರಾಯ ವಿಷ್ಣುಮೂರ್ತಿ ದೇವಸ್ಥಾನ ಗ್ರಾಮ ದೇವರು. ಕಾರಿಂಜ ಕ್ಷೇತ್ರವು ಸೀಮೆಯ ದೇವಸ್ಥಾನವಂತೆ. ಗ್ರಾಮದಲ್ಲಿ ಕಾರಣೀಕ ಶಕ್ತಿ ನಾಲ್ಕೈತ್ತಾಯ ಕ್ಷೇತ್ರವಿದ್ದು, ಅದೇ ಗ್ರಾಮದ ಹೆಸರಿಗೆ ಪ್ರಧಾನ ಶಕ್ತಿ ಎಂಬ ಮಾತುಗಳೂ ಇವೆ. ಇನ್ನಷ್ಟು ದೇವಸ್ಥಾನಗಳಿದ್ದು, ಕೆಲವು ಅಭಿವೃದ್ಧಿಯಾಗಬೇಕಿವೆ.
ಕಿರಣ್ ಸರಪಾಡಿ