Advertisement

ನಾವುಂದ –ನಾಡ ಗುಡ್ಡೆಯಂಗಡಿ ರಸ್ತೆ ಸ್ಥಿತಿ ಅಧೋಗತಿ…!

10:36 PM Sep 09, 2019 | Sriram |

ಹೆಮ್ಮಾಡಿ: ನಾಡ ಗುಡ್ಡೆಯಂಗಡಿಯಿಂದ ನಾವುಂದ ಸಹಿತ ವಿವಿಧೆಡೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ನಾಡ ಗುಡ್ಡೆಯಂಗಡಿ ಪೇಟೆಯಿಂದ ನಾವುಂದಕ್ಕೆ ಸುಮಾರು 5 ಕಿ.ಮೀ. ದೂರವಿದ್ದು, ಈ ಪೈಕಿ ಸುಮಾರು 3 ಕಿ.ಮೀ. ರಸ್ತೆಗೆ ಹಾಕಲಾದ ಡಾಮರೇ ಮಾಯವಾಗಿದೆ. ಈ ಮಾರ್ಗದಲ್ಲಿ ನಿತ್ಯ ಸಂಚರಿಸುವ ವಾಹನ ಸವಾರರು, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ನಾಡ ಗುಡ್ಡೆಯಂಗಡಿಯಿಂದ ನಾವುಂದ, ಬಡಾಕೆರೆ, ಚಿಕ್ಕಳ್ಳಿ, ಕಡೆR, ಕೊಣಿR ಕಡೆಗೆ ಸಂಚರಿಸುವ ಈ ರಸ್ತೆಗೆ ಡಾಮರೀಕರಣವಾಗಿದ್ದು ಬರೋಬ್ಬರಿ ಸುಮಾರು 30 ವರ್ಷಗಳ ಹಿಂದೆ. ಆ ಬಳಿಕ ಈವರೆಗೂ ಮರು ಡಾಮರೀಕರಣವೇ ಆಗಿಲ್ಲ. ಇನ್ನೂ ತೇಪೆ ಕಾರ್ಯ ಆಗಿ 10 ವರ್ಷಗಳೇ ಕಳೆದಿವೆ. ಅಂದರೆ ಈ ರಸ್ತೆಯ ದುಸ್ಥಿತಿ ಹೇಗಿರಬಹುದು ಅನ್ನುವುದು ತಿಳಿಯುತ್ತದೆ.

Advertisement

ದುರಸ್ತಿ ಬಗ್ಗೆ ನಿರ್ಲಕ್ಷ್ಯ
ಸುಮಾರು 500 – 600ಕ್ಕೂ ಅಧಿಕ ಮನೆಗಳ ಜನರು ಈ ನಾಡ – ನಾವುಂದ – ಬಡಾಕೆರೆ ರಸ್ತೆಯನ್ನೇ ಅವಲಂಬಿಸಿದ್ದಾರೆ. ಬೃಹದಾಕಾರದ ಗುಂಡಿಗಳಿದ್ದರೂ, ರಸ್ತೆ ದುರಸ್ತಿ ಅಥವಾ ಮರು ಡಾಮರೀಕರಣ ಮಾಡಲು ಸ್ಥಳೀಯಾಡಳಿತವಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಈವರೆಗೆ ಮುಂದಾಗಿಲ್ಲ. ಈ ರಸ್ತೆಯ ಬಗೆಗಿನ ಆಳುವ ವರ್ಗದ ನಿರ್ಲಕ್ಷ್ಯ ಗ್ರಾಮಸ್ಥರನ್ನು ಹೈರಾಣಾಗಿಸಿದೆ.

ಬಾಡಿಗೆಗೆ ಬರಲು ಹಿಂದೇಟು
ಈ ರಸ್ತೆಯ ದುಃಸ್ಥಿತಿ ಕಂಡು ನಾಡ ಗುಡ್ಡೆಯಂಗಡಿ ಅಥವಾ ನಾವುಂದ ಕಡೆಯಿಂದ ರಿಕ್ಷಾ, ಕಾರು ಹಾಗೂ ಇನ್ನಿತರ ವಾಹನಗಳ ಚಾಲಕರನ್ನು ಬಾಡಿಗೆಗೆ ಇಲ್ಲಿನ ಜನರು ಕರೆದರೆ, ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ತುರ್ತು ಸಂದರ್ಭ ಅಥವಾ ಅನಾರೋಗ್ಯ ಕಾಣಿಸಿಕೊಂಡಾಗ ತುಂಬಾ ಸಮಸ್ಯೆಯಾಗುತ್ತಿದೆ ಎನ್ನುವುದು ಸ್ಥಳೀಯರೊಬ್ಬರ ಅಳಲು.

ನೂರಾರು ವಿದ್ಯಾರ್ಥಿಗಳು
ಪ್ರತಿನಿತ್ಯ ಇದೇ ರಸ್ತೆಯ ಮೂಲಕ ಶಾಲಾ – ಕಾಲೇಜಿಗೆ ನೂರಾರು ವಿದ್ಯಾರ್ಥಿಗಳು ಹೋಗುತ್ತಾರೆ. ಈ ರಸ್ತೆಯಲ್ಲಿ ಬಸ್‌ ಸಂಚರಿಸುತ್ತಿಲ್ಲ. ಬಸ್‌ ಇರುವಲ್ಲಿವರೆಗೆ ಇದೇ ರಸ್ತೆಯಲ್ಲಿ ಮಕ್ಕಳು ನಡೆದುಕೊಂಡು ಹೋಗುವಾಗ ಹೊಂಡ – ಗುಂಡಿಗಳಲ್ಲಿ ಮಳೆ ನೀರು ನಿಂತು, ವಾಹನ ಸಂಚರಿಸುವಾಗ ಕೆಸರಿನ ಎರಚಾಟದಿಂದ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಪ್ರತಿಭಟನೆಯೂ ನಡೆದಿತ್ತು…
ಈ ರಸ್ತೆಯನ್ನು ಅಭಿವೃದ್ಧಿಪಡಿಸಿ, ವಾಹನ ಸಂಚಾರಕ್ಕೆ ಸುಗಮಗೊಳಿಸಿಕೊಡಿ ಎಂದು ಆಗ್ರಹಿಸಿ 3 ವರ್ಷಗಳ ಹಿಂದೆ ಗ್ರಾಮಸ್ಥರೆಲ್ಲ ಒಟ್ಟಾಗಿ ಬೃಹತ್‌ ಪ್ರತಿಭಟನೆಯನ್ನು ನಡೆಸಿದ್ದರು. ಆಗ ರಸ್ತೆ ದುರಸ್ತಿ ಮಾಡಿಕೊಡುವ ಭರವಸೆ ನೀಡಿದ ಜನಪ್ರತಿನಿಧಿಗಳು ಮತ್ತೆ ಅತ್ತ ಗಮನವೇ ಕೊಟ್ಟಿಲ್ಲ ಎನ್ನುವುದು ಸ್ಥಳೀಯರಾದ ಕೃಷ್ಣ ಪೂಜಾರಿ ಆರೋಪ.

Advertisement

ಮರು ಡಾಮರು ಕಾಮಗಾರಿಗೆ ಪ್ರಯತ್ನ
ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಅಲ್ಲಿನ ಶಾಸಕರು, ಸಂಸದರ ಮೂಲಕ ನಮಗೆ ಮನವಿ ಬಂದರೆ ಖಂಡಿತ ಮರು ಡಾಮರೀಕರಣಕ್ಕೆ ಪ್ರಯತ್ನಿಸಲಾಗುವುದು. ಗ್ರಾಮಸ್ಥರು ಅಲ್ಲಿನ ಜನಪ್ರತಿನಿಧಿಗಳ ಮೂಲಕ ಮನವಿ ಸಲ್ಲಿಸಲಿ. ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ದುರ್ಗಾದಾಸ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಲೋಕೋ ಪಯೋಗಿ ಇಲಾಖೆ ಕುಂದಾಪುರ

ದುರಸ್ತಿ ಬಗ್ಗೆ
ಘೋರ ನಿರ್ಲಕ್ಷ್ಯ
ಹಲವು ವರ್ಷಗಳಿಂದ ಈ ರಸ್ತೆ ಹೀಗೇ ಇದೆ. ಪ್ರತಿ ಬಾರಿ ದುರಸ್ತಿ ಮಾಡಿಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ದುರಸ್ತಿ ಮಾತ್ರ ಇದುವರೆಗೂ ಆಗಿಲ್ಲ. ನೂರಾರು ವಿದ್ಯಾರ್ಥಿಗಳು, ಜನರು ಇದೇ ರಸ್ತೆಯಲ್ಲಿ ನಿತ್ಯ ತೆರಳುತ್ತಾರೆ. ಈ ಬಗ್ಗೆ ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಗಮನಹರಿಸಲಿ.
– ರಾಘವೇಂದ್ರ ಹೆಬ್ಟಾರ್‌ ಚಿಕ್ಕಳ್ಳಿ, ಸ್ಥಳೀಯರು

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next