Advertisement

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

05:57 PM Oct 05, 2024 | Team Udayavani |

ಬೇಕು ಲೋಕಕ್ಕೆ ಸತಿ – ಮಹಾದೇವನಂತಹ ಪ್ರೀತಿ. ಚಿತೆಯಾಗಿ ಹೊತ್ತಿ ಉರಿದರೂ ಮುಗಿದು ಹೋಗದ ಕಥೆಯ ರೀತಿ…

Advertisement

ಅಂದು ಜಗವನ್ನೇ ಹೊತ್ತ ತೋಳು, ತನ್ನ ಪ್ರೀತಿ ಶವವ ಹೊತ್ತು ತಿರುಗಲು, ಶಿವನ ಆರ್ಭಟಕೆ ಜಗವೇ ನಲುಗಿ ಬರಡಾಯಿತು, ಚಿತೆಯಲ್ಲಿ ಆಕೆ ಹೊತ್ತಿ ಉರಿಯಲು…

ಮಹಲುಗಳ ಕಟ್ಟುವ ಪ್ರೀತಿಗಿಂತ ಅಂದು ಪರಶಿವನೇ ಪ್ರಾಣ ಭಿಕ್ಷೆ ಬೇಡಿದ ಪ್ರೀತಿ ಬಹುಪಾಲು ದೊಡ್ಡದು. ಮಸಣದ ಒಡೆಯ ಮಡಿಲಲ್ಲಿ ಮರಣವ ಹೊತ್ತು ತಿರುಗಿದರೂ ಮತ್ತೆ ಮರಳಲಿಲ್ಲ ಶಿವನ ಸತಿ, ಆತ ಅತ್ತು ವಿಧಿಯ ಮನವೇ ಕರಗಿದರೂ…

ಪುರಾಣದ ಪ್ರೀತಿ ಕಥೆಗಳೇ ಹಾಗೆ, ಅವುಗಳಿಗೆ ಕೊನೆ ಇಲ್ಲ. ರಾಧಾ ಕೃಷ್ಣರ ಪ್ರೀತಿಯಂತೆ, ಶಿವ ಸತಿಯ ಒಲವಿನಂತೆ, ಕಾತರ, ನಂಬಿಕೆ ಎಲ್ಲಕ್ಕಿಂತ ಮಿಗಿಲಾಗಿ ತ್ಯಾಗದ ಪ್ರೀತಿ ಅದು.

Advertisement

ಕುರುಡು ಗಂಡನಿಗಾಗಿ ಕಣ್ಣಿಗೆ ಬಟ್ಟೆ ಕಟ್ಟಿ ಬದುಕಿದ ಗಾಂಧಾರಿಯ ಪ್ರೀತಿ, ಪತಿಯ ಹೆಜ್ಜೆ ಗುರುತಿನ ಮೇಲೆ ಹೆಜ್ಜೆಯಾಗಿ ಕಾಡಿಗೆ ನಡೆದ ಸೀತೆಯ ಪ್ರೀತಿ, ಪಂಚ ಪಾಂಡವರನ್ನು ಸಮನಾಗಿ ಪ್ರೀತಿಸಿದ ಪಾಂಚಾಲಿಯ ಪ್ರೀತಿ, ಪತಿಗಾಗಿ ಪ್ರತಿದಿನವೂ ಕಾದ ಊರ್ಮಿಳೆಯ ಪ್ರೀತಿ, ಕೃಷ್ಣ ವರ್ಣದ ಕಂದನ ಸಾಕಿ ಸಲಹಿದ ಯಶೋಧೆಯ ಪ್ರೀತಿ, ಪ್ರತಿ ದಿನ ಕಾದು ಕೊನೆಗೆ ಪ್ರೀತಿ ಎಂಜಲನು ಉಣಬಡಿಸಿದ ಶಬರಿಯ ನಿಷ್ಕಲ್ಮಶ ಪ್ರೀತಿ, ಮಹಿಷನನ್ನು ಪ್ರೀತಿಸಿದ ಮಾಲಿನಿಯ ಪ್ರೀತಿ.

ಇಂದು 9-5 ಉದ್ಯೋಗದ ನಡುವೆ, ಕಂಬಳದ ಕೆಸರಿನ ಹಾಗಿರುವ ಬದುಕಲ್ಲಿ ನಾ ಮುಂದು ತಾ ಮುಂದು ಎಂದು ಓಡುತ್ತಾ ಇರುವ ನಾವು, ಬದುಕು ಕೊಡುವ ಚಾಟಿ ಏಟಿಗೆ ಒಬ್ಬರಿಗೊಬ್ಬರು ಕೆಸರು ಎರಚುತ್ತ ಓಡುತ್ತಾ ಇರುವಾಗ, ಈ ಸ್ಪರ್ಧೆಯ ಬದುಕಲ್ಲಿ ಓಡ್ತಾ ಓಡ್ತಾ ಪ್ರೀತಿಯ ಉಸಿರಿನ ಕಾವು, ಅಪ್ಪುಗೆಯ ಬಿಸಿ, ಸೆರಗಿನ ನೆರಳು, ಕೈ ತುತ್ತಿನ ಅಮೃತ, ಎಲ್ಲವನ್ನೂ ಮರೆತು ಬಿಟ್ವ!

ಅಮ್ಮ ಪದವನ್ನು ಮರೆತು ಅದ್ಯಾವುದೋ ಈಜಿಪ್ಟ್ ನ ಗೋರಿಗಳ ಹೆಸರು ಮಮ್ಮಿ ಮಮ್ಮಿ ಅನ್ನುವ ನಾವು, ಬಂಧ, ಬಾಂಧವ್ಯವನ್ನು ಆಧುನೀಕರಣ ಮಾಡಿದ ಹಾಗೆ ಆಯಿತು ಅಲ್ವಾ?

ಎರಡು ಸೆಲ್ಫಿ, ಜೊತೆಗೆ ವ್ಯಾಲೆಂಟೈನ್ಸ್ ಡೇ, ವುಮೆನ್ಸ್ ಡೇ, ಮದರ್ಸ್ ಡೇ ಗೆ ಸೀಮಿತ ಆಯಿತಾ ನಮ್ಮ ಹೆಣ್ಣಿನ ಮೇಲಿನ ಗೌರವ, ಪ್ರೀತಿ, ನಂಬಿಕೆ?

ಹಾಗಾದರೆ ಮತ್ತೆ ಸಿಗುವುದೇ? ಅಮ್ಮನ ಸೆರಗಿನ ಹಿಂದಿನ ಪ್ರೀತಿ? ಕೊನೆಯಾಗದ ರಾಧಾ ಕೃಷ್ಣರ ಪ್ರೀತಿ, ಪ್ರಪಂಚ ತಿರುಗಿ ನೋಡುವ ಪರಶಿವನ ಪ್ರೀತಿ, ಕಾತರದ ಊರ್ಮಿಳೆಯ ಪ್ರೀತಿ, ನಂಬಿಕೆಯ ಸೀತೆಯ ಪ್ರೀತಿ!

ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

*ತೇಜಸ್ವಿನಿ

Advertisement

Udayavani is now on Telegram. Click here to join our channel and stay updated with the latest news.

Next