ನನ್ನ ತೊದಲನು ತೊಳಲನೂ ನಗುತಾ ಸ್ವೀಕರಿಸುವವಳಾಕೆ… ಆಕೆ ತಾಯಿ ಎನ್ನಲು ಇನ್ನೂ ಪುರಾವೆ ಬೇಕೆ? ನಾ ದೇವರ ನಂಬಲಾರೆ ಎಂದೊಡನೆ ಅಪೂರ್ಣವಾಗಿ ಸ್ತಬ್ಧವಾಗಳು ಆಕೆ… ಆದರೆ ಅಮ್ಮ ಎಂದಾಗ ಪೂರ್ಣವಾಗಿ ಅಪ್ಪುವಳು ಕಡಲಂತೆ ದಡಕೆ.. ಎಡವಿದರೂ ತೊದಲಿದರೂ ತನ್ನ ಮಡಿಲ ನೀಡಿಹಳು…
ಕೊಂಚ ತಂಗಿ ಹೋಗುವೆಯ ತಾಯಿ ಕನಸ ಜೋಳಿಗೆಯಲಿ ತಾಯ ತುತ್ತಿಟ್ಟು ಸ್ವಲ್ಪ ತಂಗು ಇಲ್ಲೇ ನವರಾತ್ರಿ ಕಳೆದರು ನಮ್ಮ ನಡುವೆ ಹೆಣ್ತನದ ರೂವಾರಿಯಾಗಿ.
ಹುಟ್ಟು ಸಾವು ಸಹಜ ನಿಜ, ಆದರೆ ಇದರ ನಡುವೆ ಸಂಬಂಧಗಳ ಕೊಂಡಿ ಬೆಸೆದು ಸ್ವಲ್ಪ ಭಾವನೆಗಳನ್ನು ಬೆರೆಸಿ ಕೊನೆಗೆ ಎಲ್ಲವೂ ನಶ್ವರ ಎಂದು ಬಿಟ್ಟು ಕೊಡುವ ಬದುಕಿನ ಸತ್ಯ ತಿಳಿಯುದು ಇಲ್ಲಿಂದಲೇ.
ನಮ್ಮ ನಡುವಿನ ಹೆಣ್ತನದ ಪೂಜೆ, ತಾಯ್ತನದ ಆರಾಧನೆ, ಹೆಣ್ಣಿನ ಶಕ್ತಿಯನ್ನು ಆಚರಿಸುವ ಈ 9 ದಿನ ನಮಗೆ ಸಾಕಷ್ಟು ವಿಷಯ ಕಲಿಸಿದೆ. ಆದರೆ ಇಷ್ಟ ಪಟ್ಟಿದ್ದನ್ನು ಬಿಟ್ಟು ಕೊಡುವುದನ್ನು ಕಲಿಸುವ ದಸರಾ ಹಬ್ಬದ ಈ ಕೊನೆ ದಿನಗಳು ನಿಜಕ್ಕೂ ಬದುಕು ಕಲಿಸುವ, ಬದುಕು ಬದಲಿಸುವ ದಿನಗಳು.
ಶಾರದೆಯ ಆಶೀರ್ವಾದದೊಂದಿಗೆ ಅನ್ನ ಪ್ರಾಶನ, ಬರಹ ಅಭ್ಯಾಸ ಕಲಿತು ಮನೆಯ ಅಂಗಳದಿ ಆಡಿದ ಕೂಸಿನಂತೆ ಆ ತಾಯಿಯನ್ನು ಆರಾಧಿಸಿ ಕೊನೆಗೆ ಮತ್ತೆ ಮುಂದಿನ ವರ್ಷ ಬಾ ಅಮ್ಮ ಎಂದು ಜಲಸ್ತಂಭನ ಮಾಡುವ ಈ ಸಂಸ್ಕೃತಿ ನಮಗೆ ಜೀವನ ಕಲಿಸುವುದು.
ಮತ್ತೆ ಬರುವುದು ನವರಾತ್ರಿ ಮುಂದಿನ ವರುಷ, ಹೊಸ ಹುರುಪು ಹೊತ್ತು, ಹೊಸ ಕನಸ ಬಿತ್ತಿ ಮತ್ತೆ ಬರುವುದು ನವರಾತ್ರಿ ಮತ್ತೆ ಬರುವಳು ತಾಯಿ ಕೈತುಂಬಾ ಕನಸ ಕೈತುತ್ತು ಹೊತ್ತು.
ತೇಜಸ್ವಿನಿ