Advertisement

ರಾಜ್ಯಾದ್ಯಂತ ವೈಭವದ ದಸರಾಕ್ಕೆ ಚಾಲನೆ

06:00 AM Oct 11, 2018 | Team Udayavani |

ಅರಮನೆ ನಗರಿ ಮೈಸೂರು, ಶೃಂಗೇರಿ, ಕೊಲ್ಲೂರು ಸೇರಿದಂತೆ ರಾಜ್ಯಾದ್ಯಂತ ವೈಭವದ ನವರಾತ್ರಿ ಉತ್ಸವಕ್ಕೆ ಬುಧವಾರ ಚಾಲನೆ ದೊರೆಯಿತು. ಉತ್ಸವದ ಅಂಗವಾಗಿ ರಾಜ್ಯದೆಲ್ಲೆಡೆ ದೇವಿಯ ದೇವಾಲಯಗಳಲ್ಲಿ ಧಾರ್ಮಿಕ ವಿಧಿ-ವಿಧಾನಗಳು, ಪೂಜೆಗಳು ಆರಂಭವಾದವು. ಇದೇ ವೇಳೆ, ಹಲವೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಚಾಲನೆ ನೀಡಲಾಯಿತು.

Advertisement

ಶೃಂಗೇರಿಯಲ್ಲಿ ಶಾರದಾ ಪ್ರತಿಷ್ಠಾಪನೆ
ಶರನ್ನವರಾತ್ರಿ ಉತ್ಸವದ ಮೊದಲ ದಿನವಾದ ಬುಧವಾರ ಶಾರದಾ ದೇಗುಲದಲ್ಲಿ ಶ್ರೀ ಶಾರದಾ ಪ್ರತಿಷ್ಠೆಯೊಂದಿಗೆ ನವರಾತ್ರಿ ಉತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ನವರಾತ್ರಿಯ ಮೊದಲ ದಿನ ಶಾರದಾಂಬೆಗೆ ಹಂಸ ವಾಹನಲಂಕಾರ (ಬ್ರಾಹ್ಮಿ) ಮಾಡಲಾಗಿತ್ತು. ತಾಯಿ ಶಾರದೆ, ಕೈಯಲ್ಲಿ ಕಮಂಡಲ, ಪುಸ್ತಕ, ಪಾಶ, ಅಕ್ಷರಮಾಲೆ ಮತ್ತು ಚಿನ್ಮುದ್ರೆ ಧರಿಸಿ, ಹಂಸ ವಾಹನ ರೂಢಳಾಗಿ ಬ್ರಹ್ಮನ ಪಟ್ಟದ ರಾಣಿಯಾಗಿ ಭಕ್ತರಿಗೆ ದರ್ಶನ ನೀಡಿದಳು. ಬೆಳಗ್ಗೆಯೇ ಶಾರದಾ ಸನ್ನಿ ಧಿಯಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ನಡೆದವು. ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಗುರುಭವನದಿಂದ ಆಗಮಿಸಿ ಶ್ರೀ ಶಾರದೆಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ನೀಡಿದರು. ನಂತರ ಕಿರಿಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ, ತೆಪ್ಪದ ಮೂಲಕ ತುಂಗಾ ನದಿ ದಾಟಿ ಗಂಗಾ ಪೂಜೆ ನೆರವೇರಿಸಿದರು.

ನಂತರ, ಮಠದ ಎಲ್ಲ ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಶ್ರೀ ಶಾರದಾ ಸನ್ನಿಧಿಯಲ್ಲಿ ಶ್ರೀ ಸೂಕ್ತ, ದೇವಿ ಸೂಕ್ತ, ಸಪ್ತಶತಿ ಪಾರಾಯಣ ನಡೆಯಿತು.ನವರಾತ್ರಿ ಅಂಗವಾಗಿ ಮಠದ ಎಲ್ಲ ದೇಗುಲಗಳನ್ನು ಭವ್ಯವಾಗಿ ಅಲಂಕರಿಸಲಾಗಿದೆ. ಶಾರದಾಂಬೆ ದೇಗುಲವನ್ನು ಪುಷ್ಪಾಲಂಕೃತಗೊಳಿಸಲಾಗಿದೆ. ಮಠದ ಎದುರಿನ ರಾಜಬೀದಿಯಲ್ಲಿ ನವರಾತ್ರಿ ಉತ್ಸವದ ಸಂಭ್ರಮ ಕಾಣುತ್ತಿದೆ. ಸಂಜೆ ಮಠದ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಚೆನ್ನೈನ ಕಾರೈಕಾಲ್‌ ಆರ್‌. ಜಯಶಂಕರ್‌ ಮತ್ತು ತಂಡದಿಂದ ಹಾಡುಗಾರಿಕೆ ನಡೆಯಿತು. ಜೊತೆಗೆ, ಭಜನಾ ಕಾರ್ಯಕ್ರಮ  ಕೂಡ ನಡೆದವು.

ಕೊಲ್ಲೂರಲ್ಲೂ ನವರಾತ್ರಿ ಉತ್ಸವಕ್ಕೆ ಚಾಲನೆ
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಗಣಪತಿ ಪೂಜೆ, ಮಹಾಮಂಗಳಾರತಿ, ಕಳಶ ಸ್ಥಾಪನೆಯೊಂದಿಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬುಧವಾರ ಚಾಲನೆ ನೀಡಲಾಯಿತು. ದೇಗುಲದ ಅರ್ಚಕರಾದ ಕೆ.ಎನ್‌.ಗೋವಿಂದ ಅಡಿಗ ಹಾಗೂ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆದವು.

Advertisement

ಮಂತ್ರಾಲಯದಲ್ಲಿ ನವರಾತ್ರೋತ್ಸವಕ್ಕೆ ಚಾಲನೆ
ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬುಧವಾರದಿಂದ ನವರಾತ್ರೋತ್ಸವದ ವಿಶೇಷ ಪೂಜಾ ವಿಧಿವಿಧಾನಗಳಿಗೆ ಚಾಲನೆ ನೀಡಲಾಯಿತು. ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶ್ರೀ ಮನ್‌ ಮೂಲ ರಘುಪತಿ ವೇದವ್ಯಾಸ ದೇವರ ಸನ್ನಿಧಿಯಲ್ಲಿ ಘಟಸ್ಥಾಪನೆ ದೀಪಸ್ತಂಭ ಪೂಜೆ ಹಾಗೂ ವೇದವ್ಯಾಸ ದೇವರ ವಿಶೇಷ ಪೂಜೆ ನೆರವೇರಿಸಿದರು. ನಂತರ, ಶ್ರೀಕ್ಷೇತ್ರ ದೇವತೆ ಮಂಚಾಲಮ್ಮ ದೇವಿಗೆ ವಿಶೇಷ ಅರ್ಚನೆ ಹಾಗೂ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಈ ನಿಮಿತ್ತ ದೇವಿಗೆ ವಿಶೇಷ ಅಲಂಕಾರ ಸೇವೆ ನೆರವೇರಿಸಲಾಯಿತು.

ಹೊರನಾಡಿನಲ್ಲಿ ಶರನ್ನವರಾತ್ರಿ ಆರಂಭ
ಶ್ರೀ ಕ್ಷೇತ್ರ ಹೊರನಾಡು ಆದಿಶಕ್ತಾತ್ಮಿಕ ಶ್ರೀ ಅನ್ನಪೂರ್ಣೆಶ್ವರಿ ದೇವಿ ಸನ್ನಿ ಧಿಯಲ್ಲಿ ಬುಧವಾರ ನವರಾತ್ರಿ ಪೂಜೆ ಆರಂಭಗೊಂಡಿತು.ಶ್ರೀ ಜಗನ್ಮಾತೆಗೆ ಹಂಸಾರೂಢ ಸರಸ್ವತಿ ವಿಶೇಷ ಅಲಂಕಾರ ಪೂಜೆ, ಧಾರ್ಮಿಕ ಪಂಚದುರ್ಗಾ ಹೋಮ ನೆರವೇರಿತು. ನಂತರ, ಸಪ್ತಶತಿ ಪಾರಾಯಣ, ವೇದ ಪಾರಾಯಣ, ಸುಂದರಕಾಂಡ ಪಾರಾಯಣ, ಕುಂಕುಮಾರ್ಚನೆ ನಡೆಯಿತು. ಶ್ರೀ ಕ್ಷೇತ್ರ ಹೊರನಾಡು ಕ್ಷೇತ್ರದ ಧರ್ಮದರ್ಶಿಗಳಾದ ಡಾ|ಭೀಮೇಶ್ವರ ಜೋಷಿಯವರ ಪುತ್ರರಾದ ಗಿರಿಜಾ ಶಂಕರ್‌ ಜೋಷಿ ದಂಪತಿ ಪೂರ್ಣಾಹುತಿ ನೀಡಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು.

ವೈಭವದ “ಮಂಗಳೂರು ದಸರಾ’ ಆರಂಭ
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಶ್ರೀ ಮಂಗಳಾದೇವಿ ದೇವಸ್ಥಾನ ಸಹಿತ ನಗರದ ವಿವಿಧ ದೇವಸ್ಥಾನಗಳಲ್ಲಿ ಶ್ರದ್ಧಾ ಭಕ್ತಿಯ ನವರಾತ್ರಿ ಮಹೋತ್ಸವ ಬುಧವಾರದಿಂದ ಆರಂಭಗೊಂಡಿದೆ.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಆಚರಿಸಲ್ಪಡುವ ವೈಭವದ “ಮಂಗಳೂರು ದಸರಾ’ದ ಅಂಗವಾಗಿ ನವದುರ್ಗೆಯರು ಹಾಗೂ ಶಾರದಾ ಮಾತೆಯನ್ನು ಬುಧವಾರ ಬೆಳಗ್ಗೆ ಪ್ರತಿಷ್ಠಾಪಿಸಲಾಯಿತು. ಬೆಳಗ್ಗೆ 8.30ಕ್ಕೆ ಗುರುಪ್ರಾರ್ಥನೆ, ಪುಣ್ಯಾಹ ಹೋಮ, ನವಕಲಶಾಭಿಷೇಕ, 10.45ಕ್ಕೆ ಕಲಶ ಪ್ರತಿಷ್ಠೆ, 11.50ಕ್ಕೆ ನವದುರ್ಗೆಯರ ಹಾಗೂ ಶಾರದಾ ಪ್ರತಿಷ್ಠೆ ನೆರವೇರಿತು. ಬಳಿಕ ಪುಷ್ಪಾಲಂಕಾರ ಮಹಾಪೂಜೆ ನಡೆದು, ರಾತ್ರಿ ಶ್ರೀ ದೇವಿ ಪುಷ್ಪಾಲಂಕಾರ ಮಹಾಪೂಜೆ ನಡೆಯಿತು. ಸಾವಿರಾರು ಭಕ್ತರು ಭಾಗವಹಿಸಿದ್ದರು.ಇದೇ ವೇಳೆ, ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಬೆಳಗ್ಗೆ 9ಕ್ಕೆ ಗಣಪತಿ ಪ್ರಾರ್ಥನೆ ನಡೆದು, ನವರಾತ್ರಿ ಉತ್ಸವ ಉದ್ಘಾಟನೆಗೊಂಡಿತು.

ಹಂಪಿಯಲ್ಲಿ ವಿಶೇಷ ಅಲಂಕಾರ
ಐತಿಹಾಸಿಕ ಹಂಪಿ ಶ್ರೀ ವಿರೂಪಾಕೇಶ್ವರಸ್ವಾಮಿ ದೇವಸ್ಥಾನ ಆವರಣದಲ್ಲಿರುವ ದೇವತೆಗಳಿಗೆ ಬುಧವಾರ ವಿಶೇಷ ಅಲಂಕಾರ ಮಾಡಿ, ಪೂಜೆ ಸಲ್ಲಿಸಲಾಯಿತು. ವಿರೂಪಾಕ್ಷೇಶ್ವರ ದೇವಸ್ಥಾನ ಪ್ರಾಂಗಣದಲ್ಲಿರುವ ಪಂಪಾಂಬಿಕೆ (ಪಾರ್ವತಿ), ದುರ್ಗಾದೇವಿ, ಶಾರದಾದೇವಿ, ಚಾಮುಂಡೇಶ್ವರಿ, ಮಹಿಷಾಸುರ ಮರ್ದಿನಿ, ಲಕ್ಷ್ಮೀ ಸಪ್ತ ಮಾತೃಕೆಯರು, ಭುವನೇಶ್ವರಿ ದೇವತೆಗಳಿಗೆ ಅಭಿಷೇಕ, ಉಡಿ ತುಂಬುವುದು, ಅಲಂಕಾರ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು. ಹಂಪಿ ವಿದ್ಯಾರಣ್ಯ ಪೀಠದ ಪೀಠಾಧಿಪತಿ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿ ವಿರೂಪಾಕ್ಷೇಶ್ವರನಿಗೆ ರುದ್ರಾಭಿಷೇಕ ನೆರವೇರಿಸಿ, ಪೂಜೆ ಸಲ್ಲಿಸಿದರು. ಬಿಷ್ಟಪ್ಪಯ್ಯ, ರಾಯಗೋಪುರ ಸೇರಿದಂತೆ 9 ಗೋಪುರಗಳ ದ್ವಾರ ಪೂಜೆ ನೆರವೇರಿಸಿದ ಬಳಿಕ ಆವರಣದ ದೇವತೆಗಳಿಗೆ ಕುಂಕಮಾರ್ಚನೆ ಸೇರಿದಂತೆ ವಿವಿಧ ಪೂಜೆ ಸಲ್ಲಿಸಿದರು.

ಚಂದ್ರಗುತ್ತಿ ದಸರಾ ಉತ್ಸವಕ್ಕೆ ಚಾಲನೆ
ಇತಿಹಾಸ ಪ್ರಸಿದ್ಧ ಚಂದ್ರಗುತ್ತಿಯಲ್ಲಿ ನಾಡಹಬ್ಬ ದಸರಾ ಉತ್ಸವಕ್ಕೆ ಚಾಲನೆ ನೀಡಲಾಯಿತು.ಇಲ್ಲಿನ ಶ್ರೀ ರೇಣುಕಾಂಬಾ ದೇಗುಲದಲ್ಲಿ ಘಟಸ್ಥಾಪನೆ, ಕಲಶ, ನವಗ್ರಹ ಸ್ಥಾಪನೆಯೊಂದಿಗೆ ವಿಶೇಷ ಪೂಜೆ ಆರಂಭಗೊಂಡಿತು. ಪೂಜೆಯಲ್ಲಿ ಸುವಾಸಿನಿಯರಿಗೆ ಉಡಿ ತುಂಬುವ, ಹರಕೆ ಸಲ್ಲಿಸುವ ಕಾರ್ಯಗಳು ಜರುಗಿದವು.

Advertisement

Udayavani is now on Telegram. Click here to join our channel and stay updated with the latest news.

Next