ಕಾರ್ಕಳ: ತುಳುನಾಡಿನಲ್ಲಿ ಚೌತಿ ಅಥವಾ ನವರಾತ್ರಿ ಸಂದರ್ಭ ಮನೆ ತುಂಬಿಸುವ (ತೆನೆ ಪೂಜೆ) ಸಂಪ್ರದಾಯವಿದೆ.
ತೆನೆ ಪೂಜೆ ಒಂದು ರೀತಿ ಪ್ರಕೃತಿ ಆರಾಧನೆ. ದೇಗುಲದಿಂದ ಕದಿರನ್ನು ಭಕ್ತರು ಅವರವರ ಮನೆಗೆ ಕೊಂಡುಹೋಗಿ ದೇವರ ಮಂಟಪ, ಛಾವಣಿ, ಅಡುಗೆ ಕೋಣೆ, ಅಕ್ಕಿ ತುಂಬಿಸಿಡುವ ಪಾತ್ರೆಗೆ ಕಟ್ಟುವ ಸಂಪ್ರದಾಯ ಕರಾವಳಿಯೆಲ್ಲೆಡೆ ನಡೆಯುತ್ತದೆ. ಗದ್ದೆ ಹೊಂದಿರುವವರು ತೆನೆಯನ್ನು ಮನೆಗೆ ತಂದು ಪೂಜೆ ಮಾಡಿ, ಪುದ್ವಾರ್ ಊಟ ಮಾಡುತ್ತಾರೆ.ವಾಹನ, ಅಂಗಡಿ, ಕಚೇರಿಗಳಿಗೆ, ಬಾವಿ ದಂಡೆ ಮರ, ತೆಂಗು, ಹಲಸು ಮರಗಳಿಗೂ ಕದಿರನ್ನು ಕಟ್ಟಿ ತೆನೆ ಹಬ್ಬ ಆಚರಿಸಲಾಗುತ್ತದೆ.
ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನ ಸಾಲಿಗ್ರಾಮವನ್ನು ಪಲ್ಲಕ್ಕಿಯಲ್ಲಿಟ್ಟು ಸಾಮೂಹಿಕ ಪ್ರಾರ್ಥನೆಗೈದು, ತೆನೆ ತುಂಬಿದ ಗದ್ದೆಗೆ ತಂದು, ತೆನೆಗೆ ಹಾಲೆರೆದು ಅರ್ಚಕರು ಪೂಜೆ ಮಾಡಿದ ಬಳಿಕ ತೆನೆ ಕೊಯ್ಯಲಾಗುತ್ತದೆ. ಅನಂತರ ತೆನೆಯನ್ನು ಪಲ್ಲಕ್ಕಿಯಲ್ಲಿ ವಾಪಸ್ ದೇವಸ್ಥಾನಕ್ಕೆ ತಂದು ಪೂಜೆ ಮಾಡಲಾಗುವುದು. ದೇವಸ್ಥಾನದಲ್ಲಿ ವೈದಿಕ ಕಾರ್ಯ ಮುಗಿದ ಬಳಿಕ ಕದಿರನ್ನು ಭಕ್ತರಿಗೆ ವಿತರಿಸಲಾಗುತ್ತದೆ ಎಂದು ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿ ಮೊಕ್ತೇಸರ ಕಟ್ಟೆಮಾರು ರತ್ನಾಕರ ಆಚಾರ್ಯ ತಿಳಿದರು.
ಪಡುತಿರುಪತಿ ಶ್ರೀ ವೆಂಕಟರಮಣ ದೇಗುಲ, ಪದ್ಮಾವತಿ ದೇಗುಲ
ಅನಂತಶಯನ ಶ್ರೀ ಪದ್ಮಾವತಿ ದೇವಸ್ಥಾನದ ದೇವರಗದ್ದೆಯಿಂದ ಕಟಾವು ಮಾಡಿದ ಕದಿರು ರಾಶಿಯನ್ನು ಪಲ್ಲಕ್ಕಿಯಲ್ಲಿ ತುಂಬಿಸಿ, ಪದ್ಮಾವತಿ ದೇವಸ್ಥಾನ ಹಾಗೂ ವೆಂಕಟರಮಣ ದೇವಸ್ಥಾನಕ್ಕೆ ತರಲಾಗುತ್ತದೆ. ವೈದಿಕ ಕಾರ್ಯವಾದ ಬಳಿಕ ಭಕ್ತರಿಗೆ ಕದಿರನ್ನು ವಿತರಿಸಲಾಗುತ್ತದೆ.
ಕೆಮ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಅಡಪಾಡಿ ಪಳ್ಳಿ ಉಮಾಮಹೇಶ್ವರಿ ದೇವಸ್ಥಾನ, ಈದು ವನದುರ್ಗಾ ದೇವಸ್ಥಾನ, ಹೆಬ್ರಿ ಅನಂತಪದ್ಮನಾಭ ದೇವಸ್ಥಾನ, ಪೆರ್ಡೂರು ಅನಂತಪದ್ಮನಾಭ ದೇವಸ್ಥಾನ, ಹೆಬ್ರಿ ತಾಣ ದುರ್ಗಾಪರಮೇಶ್ವರಿ ದೇವಸ್ಥನ ಮೊದಲಾದೆಡೆ ಕದಿರು ಆಚರಣೆ ನಡೆಯಲಿದೆ.