Advertisement

ನವೋದಯ ಕಲಾರಂಗ ಮುಂಬಯಿ ವಾರ್ಷಿಕೋತ್ಸವ, ಸಾಧಕರಿಗೆ ಸಮ್ಮಾನ

04:07 PM Feb 09, 2018 | Team Udayavani |

ಮುಂಬಯಿ: ಜಾತಿ, ಮತ ಭೇದವನ್ನು ಮರೆತು ಕಲಾಸೇವೆಯನ್ನು ಮಾಡುತ್ತಿರುವ ನವೋದಯ ಕಲಾರಂಗ ಕಳೆದ ಮೂವತ್ತು ವರ್ಷಗಳಿಂದ ಕಲಾವಿದರಿಗೆ ಪ್ರೋತ್ಸಾಹವನ್ನು ನೀಡುವುದರ ಜತೆಗೆ ಮುಂಬಯಿ ಮಹಾನಗರದಲ್ಲಿ ಹಲವು ಅತ್ಯುತ್ತಮ ನಾಟಕಗಳನ್ನು ಪ್ರದರ್ಶಿಸಿ ಜನಮೆಚ್ಚುಗೆಯನ್ನು ಪಡೆದ ಒಂದು ಕಲಾಸಂಸ್ಥೆಯಾಗಿದೆ. ಈ ಸಂಸ್ಥೆಯು ಕಲೆಯೊಂದಿಗೆ ಸಾಮಾಜಿಕ ಕಾಳಜಿ ಇರುವ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಅಭಿನಂದನೀಯವಾಗಿದೆ ಎಂದು ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ನ್ಯಾಯವಾದಿ ಸುಭಾಷ್‌  ಬಿ. ಶೆಟ್ಟಿ ಅವರು ನುಡಿದರು.

Advertisement

ಫೆ. 4 ರಂದು ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ ಜರಗಿದ ನವೋದಯ ಕಲಾರಂಗ ಮುಂಬಯಿ ಇದರ 30 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ನವೋದಯ ಕಲಾರಂಗದಿಂದ ಇನ್ನಷ್ಟು ಕಲಾ ಸೇವೆಯು ನಿರಂತರವಾಗಿ ನಡೆಯುತ್ತಿರಲಿ. ಹೊಸ ಹೊಸ ಕಲಾವಿದರನ್ನು ಬೆಳಕಿಗೆ ತರುವಲ್ಲಿ ಸಂಸ್ಥೆಯು ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಪುರೋಹಿತ ಪ್ರವೀಣ್‌ ಜೆ. ಭಟ್‌ ಅವರು, ಕಲಾವಿದರನ್ನು ಪ್ರೋತ್ಸಾಹಿಸಿ, ತುಳುನಾಡಿನ ಸಂಸ್ಕೃತಿಯೊಂದಿಗೆ ಕಲೆಯನ್ನು ಮುಂಬಯಿಯಲ್ಲಿ ಪಸರಿಸುವ ಕಾರ್ಯದಲ್ಲಿ ತೊಡಗಿರುವ ಈ ಕಲಾಸಂಸ್ಥೆಗೆ ಕಲಾಮಾತೆಯ ಆಶೀರ್ವಾದ ಸದಾಯಿರುತ್ತದೆ. ಕಳೆದ ಹಲವು ವರ್ಷಗಳಿಂದ ಸದಾ ಕಲಾಸೇವೆಯಲ್ಲಿ ನಿರತವಾಗಿರುವ ನವೋದಯ ಕಲಾಸಂಸ್ಥೆಯು ಇನ್ನಷ್ಟು ಅರ್ಥಪೂರ್ಣಕಾರ್ಯಕ್ರಮಗಳನ್ನು ಆಯೋಜಿಸಿ ಉತ್ತರೋತ್ತರ ಅಭಿವೃದ್ಧಿಯನ್ನು ಕಾಣುವಂತಾಗಲಿ ಎಂದರು.

ಅತಿಥಿಯಾಗಿ ಪಾಲ್ಗೊಂಡ ಬಂಟರ ಸಂಘ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ ಮಾತನಾಡಿ, ಶಿಕ್ಷಣ ಮತ್ತು ಕಲೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಾವು ವಿದ್ಯೆಯಿಂದ ಜೀವನ ಯಶಸ್ವಿಗೊಳಿಸುತ್ತೇವೆ. ಅದರೊಂದಿಗೆ ಕಲೆಯ ಅಭಿರುಚಿ ಇದ್ದರೆ ಜೀವನ ಪರಿಪೂರ್ಣವಾಗುತ್ತದೆ. ಈ ಸಂಸ್ಥೆಯನ್ನು ಬೆಳೆಸುವಲ್ಲಿ ಅನೇಕರು ಬೆವರು ಸುರಿಸಿದ್ದಾರೆ. ಅವರ ಕನಸನ್ನು ನನಸು ಮಾಡಬೇಕಾಗಿದೆ ಎಂದರು.

ಉದ್ಯಮಿ ಹರೀಶ್‌ ಜಿ. ಅಮೀನ್‌ ಅವರು ಮಾತನಾಡಿ, ಇಂದು ಸಮ್ಮಾನ ಸ್ವೀಕರಿಸುತ್ತಿರುವ ರಾಜಶೇಖರ್‌ ಕೋಟ್ಯಾನ್‌ ಅವರು ಉತ್ತಮ ಕಲಾವಿದರಾಗಿದ್ದು, ನನ್ನ ಆತ್ಮೀಯರು ಆಗಿದ್ದಾರೆ. ನವೋದಯ ಕಲಾಸಂಸ್ಥೆಯು ಇಂತಹ ಕಲಾವಿದರನ್ನು ಗುರುತಿಸಿ ಗೌರವಿಸುತ್ತಿರುವುದು ಅಭಿಮಾನದ ವಿಷಯವಾಗಿದೆ ಎಂದರು.

Advertisement

ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಅತಿಥಿಗಳಾಗಿ ಪಾಲ್ಗೊಂಡ ಬಿಲ್ಲವರ ಅಸೋಸಿಯೇಶನ್‌ ಕಲ್ವಾ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ನಾರಾಯಣ ಎಲ್‌. ಸುವರ್ಣ, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಉಪಾಧ್ಯಕ್ಷ ಅರವಿಂದ ಶೆಟ್ಟಿ ಕೊಜಕೊಳ್ಳಿ, ಬಿಲ್ಲವರ ಅಸೋಸಿಯೇಶನ್‌ ಕಲ್ವಾ ಸ್ಥಳೀಯ ಸಮಿತಿಯ ಉಪ ಕಾರ್ಯಾಧ್ಯಕ್ಷ ಹರೀಶ್‌ ಪಿ. ಸಾಲ್ಯಾನ್‌ ಬಜೆಗೋಳಿ, ಬಿಲ್ಲವರ ಅಸೋಸಿಯೇಶನ್‌ ಅಂಧೇರಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ರವೀಂದ್ರ ಎಸ್‌. ಕೋಟ್ಯಾನ್‌, ಬಿಲ್ಲವರ ಅಸೋಸಿಯೇಶನ ಮಲಾಡ್‌ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್‌ ಪೂಜಾರಿ ಹಾಗೂ ನ್ಯಾಯವಾದಿ ಸೌಮ್ಯಾ ಸಿ. ಪೂಜಾರಿ ಅವರು ಮಾತನಾಡಿ ಶುಭಹಾರೈಸಿದರು.

ಸಮಾರಂಭದಲ್ಲಿ ಸಂಸ್ಥೆಯ ಸಾಧಕ ಪುರಸ್ಕಾರವನ್ನು ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ, ಚಲನಚಿತ್ರ ನಿರ್ದೇಶಕ, ನಟ, ನಿರ್ಮಾಪಕ  ಡಾ| ರಾಜಶೇಖರ್‌ ಕೋಟ್ಯಾನ್‌ ಅವರಿಗೆ ಗಣ್ಯರ ಸಮ್ಮುಖದಲ್ಲಿ ಪ್ರದಾನಿಸಿ ಗೌರವಿಸಲಾಯಿತು.  ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಕನ್ನಡ ವೆಲ್ಫೆàರ್‌ ಸೊಸೈಟಿ ಘಾಟ್‌ಕೋಪರ್‌ ಅಧ್ಯಕ್ಷ, ರಂಗಕಲಾವಿದ ನವೀನ್‌ ಶೆಟ್ಟಿ ಇನ್ನಬಾಳಿಕೆ, ಬಿಲ್ಲವರ ಅಸೋಸಿಯೇಶನ್‌ ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ಅಶೋಕ್‌ ಸಸಿಹಿತ್ಲು ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಿ ಗೌರವಿಸಲಾಯಿತು.  ಸಮ್ಮಾನಿತರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು.

ಸಂಸ್ಥೆಯ ಅಧ್ಯಕ್ಷ ಎಸ್‌. ಟಿ. ವಿಜಯಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.  ಗೌರವ ಪ್ರಧಾನ ಕಾರ್ಯದರ್ಶಿ ಪ್ರತಿಮಾ ಬಂಗೇರ,  ಗೌರವ ಕೋಶಾಧಿಕಾರಿ ಚಂದ್ರಕಾಂತ್‌ ಸಸಿಹಿತ್ಲು ಹಾಗೂ ಇತರ ಪದಾಧಿಕಾರಿಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯ-ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ರಂಗಕಲಾವಿದ ಜಿ. ಕೆ. ಕೆಂಚನಕೆರೆ ಅವರು ಕಾರ್ಯಕ್ರಮ ನಿರ್ವಹಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಸ್ಥೆಯ ಸದಸ್ಯ ಬಾಂಧವರಿಂದ ನೃತ್ಯ ವೈವಿಧ್ಯ, ಕು| ದೀಕ್ಷಾ ದೇವಾಡಿಗ ಬಳಗದವರಿಂದ ನೃತ್ಯ  ಹಾಗೂ ರವಿ ಆಚಾರ್ಯ ರಚಿಸಿ, ಚಂದ್ರಕಾಂತ್‌ ಸಾಲ್ಯಾನ್‌  ನಿರ್ದೇ ಶನದಲ್ಲಿ ಪಗಡೆದ ಪಂತ ತುಳು ಪೌರಾಣಿಕ ನಾಟಕವು ಸಂಸ್ಥೆಯ ಕಲಾವಿದರುಗಳಿಂದ ಪ್ರದರ್ಶನ ಗೊಂಡು ಕಲಾಪ್ರೇಮಿಗಳ ಮನ ರಂಜಿಸಿತು.  ಕಲಾ ಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪ ಸ್ಥಿತರಿದ್ದರು.        

 ಚಿತ್ರ-ವರದಿ:ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next