ನವೋದಯ ಡೇಸ್…ಇದು ನೈಂತ್ ಬ್ಯಾಚ್ ಸ್ಟೋರಿ…ಈ ವಾರ ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಜಯಕುಮಾರ್ ನಿರ್ದೇಶಕ, ಶ್ರೀನಂದಿ ನಿರ್ಮಾಪಕರು. ಬಹುತೇಕ ಹೊಸಬರೇ ಸೇರಿ ಮಾಡಿರುವ ಚಿತ್ರವಿದು. ಚಿತ್ರದ ಶೀರ್ಷಿಕೆ ನೋಡಿದಾಗ, ಇದೊಂದು ಯೂಥ್‌ಗೆ ಸಂಬಂಧಿಸಿದ ಚಿತ್ರ ಅಂತ ಹೇಳಬಹುದು. ನವೋದಯ ಶಾಲೆ ವಿದ್ಯಾರ್ಥಿಗಳ ಕಥೆ ಇರುವ ಚಿತ್ರವಿದು. ಇಲ್ಲಿ ಅವರು ಕಳೆದ ಆ ದಿನಗಳು, ಅನುಭವಿಸಿದ ಯಾತನೆಗಳು, ಮಾಡಿದ ಕೀಟಲೆಗಳು, ಮರೆಯದ ಘಟನೆಗಳೆಲ್ಲವನ್ನೂ ಇಲ್ಲಿ ತೋರಿಸಲಾಗುತ್ತಿದೆ.
ಅಂದಹಾಗೆ, 1996 ರಿಂದ 2001ರವರೆಗೆ ಇದ್ದ ಒಂಬತ್ತನೇ ಬ್ಯಾಚ್ ವಿದ್ಯಾರ್ಥಿಗಳು ಸೇರಿ ಬರೆದ ಕಥೆ ಈಗ ಚಿತ್ರವಾಗಿದೆ. “ಸುಮಾರು ಏಳು ವರ್ಷಗಳ ಕಾಲ ನವೋದಯ ಶಾಲೆಯಲ್ಲಿ ನಡೆದ ಪಾಠ, ಆಟ, ಮನರಂಜನೆ ಇತ್ಯಾದಿ ವಿಷಯಗಳು ಹೈಲೆಟ್. ಆ ವಯಸ್ಸಿನ ಹುಡುಗರಲ್ಲೂ ಆಕರ್ಷಣೆ, ಕಲ್ಪನೆ ಎಂಬುದು ಸಹಜ. ನವೋದಯ ಶಾಲೆಯಲ್ಲಿ ಕಾನೂನು ಹೆಚ್ಚು. ಅಲ್ಲಿ ಶಿಸ್ತು ಮುಖ್ಯ. ಗ್ರಾಮೀಣ ಭಾಗದ ಹೆಚ್ಚು ವಿದ್ಯಾರ್ಥಿಗಳೇ ನವೋದಯ ಶಾಲೆ ಆಯ್ಕೆ ಮಾಡಿಕೊಳ್ಳುತ್ತಾರೆ. ಅಲ್ಲಿ ನಡೆಯೋ ಸನ್ನಿವೇಶಗಳನ್ನು ಸೂಕ್ಷ್ಮವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ’ ಎಂಬುದು ನಿರ್ದೇಶಕ ಜಯಕುಮಾರ್ ಮಾತು.
ಚಿತ್ರದಲ್ಲಿ ಗೌರೀಶ್ ಅಕ್ಕಿ ಮೇಷ್ಟ್ರು ಪಾತ್ರ ನಿರ್ವಹಿಸಿದ್ದಾರೆ. ಗಣಿತ ಲೆಕ್ಕದಲ್ಲಿ ವೀಕ್ ಆಗಿದ್ದರೂ, ತೆರೆ ಮೇಲೆ ಪಫೆಕ್ಟ್ ಗಣಿತ ಮೇಷ್ಟ್ರು ಆಗಿ ಕಾಣಿಸಿಕೊಂಡಿದ್ದಾರೆ. ಆ ಟೀನೇಜ್ ಹುಡುಗರ ಜೊತೆ ಜರ್ನಿ ಮಾಡುವ ಗೌರೀಶ್ ಅಕ್ಕಿ ಅವರದು, ಒಳ್ಳೆಯದು, ಕೆಟ್ಟದ್ದರ ಬಗ್ಗೆ ಅರಿವು ಮೂಡಿಸುವ ಪಾತ್ರದಲ್ಲಿ ನಟಿಸಿದ್ದಾರೆ.
ಇನ್ನು ಈ ಚಿತ್ರವನ್ನು ತುಮಕೂರಿನ ನವೋದಯ ಶಾಲೆಯಲ್ಲಿ ಚಿತ್ರೀಕರಿಸಲಾಗಿದೆ. ನಿರ್ದೇಶಕ ಜಯಕುಮಾರ್ ಅವರು ಎಂಟು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಕೆಲಸ ಮಾಡಿದ ಅನುಭವದ ಮೇಲೆ ಈ ಚಿತ್ರ ಮಾಡಿದ್ದಾರೆ. ದೀಪಕ್ ಗಂಗಾಧರ್ ಈ ಚಿತ್ರಕ್ಕೆ ಸಹ ನಿರ್ಮಾಣದ ಜೊತೆಗೆ ಸಂಭಾಷಣೆ ಬರೆದಿದ್ದಾರೆ. ಛಾಯಾಗ್ರಾಹಕ ಹರಿ ಕುಪ್ಪಳ್ಳಿ ಅವರಿಗೆ ನವೋದಯ ಶಾಲೆಯಲ್ಲಿ ಕೆಲಸ ಮಾಡಿದ ಬಳಿಕ ತಮ್ಮ ಮಕ್ಕಳನ್ನೂ ನವೋದಯ ಶಾಲೆಗೆ ಸೇರಿಸಬೇಕು ಎಂಬಂತಹ ಆಲೋಚನೆಯೂ ಬಂತಂತೆ.
ಚಂದ್ರಕಾಂತ್ ಚಿತ್ರಕ್ಕೆ ಹಿನ್ನೆಲೆ ಸಂಗೀತ ಕೊಟ್ಟರೆ, ಹರ್ಷವರ್ಧನ್ ರಾಜ್ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಹೇಮಂತ್, ಚಂದ್ರಿಕಾ, ಕಾರ್ತಿಕ್, ಚಂದನ್, “ಗೋಲಿಸೋಡ’ ಸಾಗರ್ ಇತರರಿಗೆ ಇದು ಮೊದಲ ಅನುಭವ. ಈ ವಾರ ಸುಮಾರು 50 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡಲು ನಿರ್ಮಾಪಕರು ತಯಾರಿ ನಡೆಸಿದ್ದಾರೆ.