ಮುಂಬಯಿ : ಭಾನುವಾರ ನಡೆದ ದೊಡ್ಡ ರಾಜಕೀಯ ಬೆಳವಣಿಗೆಯಲ್ಲಿ,ಲೋಕಸಭೆಯ ಸ್ವತಂತ್ರ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ಶಾಸಕ ರವಿ ರಾಣಾ ಅವರನ್ನು ಬಾಂದ್ರಾ ನ್ಯಾಯಾಲಯದ ರಜಾ ಪೀಠವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಹನುಮಾನ್ ಚಾಲೀಸಾ ಪ್ರಕರಣದಲ್ಲಿ ಮುಂಬೈ ಪೊಲೀಸರು ಶನಿವಾರ ಅವರನ್ನು ಬಂಧಿಸಿದ್ದರು. ದಂಪತಿಗಳು ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ರಾತ್ರಿ ಕಳೆದಿದ್ದರು.
ಆರಂಭದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರದೀಪ್ ಘರತ್ ಅವರು ರಾಣಾ ದಂಪತಿಯನ್ನು 7 ದಿನಗಳ ಕಾಲ ಕಸ್ಟಡಿಗೆ ಕೋರಿದರು. ಆರೋಪಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ರಿಜ್ವಾನ್ ಮರ್ಚಂಟ್ ಈ ಮನವಿಯನ್ನು ವಿರೋಧಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಸೆಕ್ಷನ್‌ಗಳನ್ನು ಪ್ರಶ್ನಿಸಿದರು.
ರಿಮಾಂಡ್ ಅರ್ಜಿಯಲ್ಲಿ ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಧೀಶ ಎಎ ಘಾನಿವಾಲೆ ಅವರು ಪೊಲೀಸ್ ಕಸ್ಟಡಿಗೆ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದರು. ನವನೀತ್ ಮತ್ತು ರವಿ ರಾಣಾ ಜಾಮೀನು ಅರ್ಜಿ ಸಲ್ಲಿಸಿದ್ದರೂ, ಏಪ್ರಿಲ್ 29 ರಂದು ನ್ಯಾಯಾಲಯದಿಂದ ವಿಚಾರಣೆ ನಡೆಯಲಿದೆ. ಅಮರಾವತಿ ಸಂಸದ ಮತ್ತು ಬದ್ನೇರಾ ಶಾಸಕರನ್ನು ಕ್ರಮವಾಗಿ ಬೈಕುಲ್ಲಾ ಜೈಲು ಮತ್ತು ಆರ್ಥರ್ ರೋಡ್ ಜೈಲಿಗೆ ಕಳುಹಿಸಲಾಗಿದೆ.
ಇದನ್ನೂ ಓದಿ : ಶಿವಸೇನೆ ಕಾರ್ಯಕರ್ತರು ನನ್ನ ಹತ್ಯೆಗೆ ಯತ್ನಿಸಿದ್ದರು: ಕಿರಿಟ್ ಸೋಮಯ್ಯ
ಶನಿವಾರ ಸಿಎಂ ಉದ್ಧವ್ ಠಾಕ್ರೆ ನಿವಾಸ ಮಾತೋಶ್ರೀ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸಲು ನಿರ್ಧರಿಸಿದ್ದ ರಾಣಾ ದಂಪತಿ ವಿರುದ್ಧ ಐಪಿಸಿಯ ಸೆಕ್ಷನ್ 34, 153A (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಸೆಕ್ಷನ್ 37(1) ಮತ್ತು 135 ಸೌಹಾರ್ದತೆ ಕಾಪಾಡಲು ಪೂರ್ವಾಗ್ರಹ ಪೀಡಿತ ಕೃತ್ಯಗಳನ್ನು ಮಾಡುವ ಅಡಿಯಲ್ಲಿ ಬಾಂಬೆ ಪೊಲೀಸ್ ಕಾಯಿದೆಯನ್ನು ಪ್ರಯೋಗಿಸಲಾಗಿದೆ.