ಹೊಸದಿಲ್ಲಿ: ನಾಲ್ವರು ರೈತರು ಸೇರಿದಂತೆ 8 ಮಂದಿಯ ಸಾವಿಗೆ ಕಾರಣವಾದ ಉತ್ತರಪ್ರದೇಶದ ಲಖೀಂಪುರಕ್ಕೆ ತೆರಳಲು ಮುಂದಾದ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ
ನವಜೋತ್ ಸಿಂಗ್ ಸಿಧು ಮತ್ತು ಪಂಜಾಬ್ ಸಚಿವರ ತಂಡವನ್ನು ಗುರುವಾರ ಹರಿಯಾಣ ಮತ್ತು ಉತ್ತರ ಪ್ರದೇಶ ಗಡಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಯಾಗಿರುವ ಕೇಂದ್ರ ಸಚಿವರ ಪುತ್ರನ ವಿರುದ್ಧ ಕ್ರಮ ಕೈಗೊಳ್ಳದೇ ಹೋದರೆ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಸಿಧು ಹೇಳಿದ್ದಾರೆ.
ನಾವು ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶಿಷ್ ಮಿಶ್ರಾ ವಿರುದ್ಧ ಕ್ರಮ ಕೈಗೊಳ್ಳದೇ ಹೋದರೆ ಗಡಿಯಲ್ಲೇ ಹೋರಾಟ ಆರಂಭಿಸುವುದಾಗಿ ಎಚ್ಚರಿಸಿದ್ದಾರೆ.
ಸಿಧು ಅವರು ಪಂಜಾಬ್ ಉಪ ಮುಖ್ಯಮಂತ್ರಿ ಸುಖಜಿಂದರ್ ರಾಂಧವ ಮತ್ತು ಕ್ಯಾಬಿನೆಟ್ ಮಂತ್ರಿಗಳಾದ ಪರ್ಗತ್ ಸಿಂಗ್ ಮತ್ತು ವಿಜಯ್ ಇಂದರ್ ಸಿಂಗ್ಲಾ, ಮಾಜಿ ಸಚಿವರಾದ ಬಲಬೀರ್ ಸಿಂಗ್ ಸಿಧು, ಗುರುಪ್ರೀತ್ ಕಾಂಗಾರ್ ಮತ್ತು ಸುಂದರ್ ಶ್ಯಾಮ್ ಅರೋರಾ ಅವರೊಂದಿಗೆ ಲಖೀಂಪುರಕ್ಕೆ ತೆರಳಲು ಮುಂದಾಗಿದ್ದರು.
ಲಖೀಂಪುರ ಖೇರಿಗೆ ರಾಜಕೀಯ ವ್ಯಕ್ತಿಗಳ ಪ್ರವೇಶಕ್ಕೆ ಅವಕಾಶ ಸಿಕ್ಕಿದ ಬಳಿಕ ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ, ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದರು.
ಘರ್ಷಣೆ ಪ್ರಕರಣ ಈಗ ಸುಪ್ರೀಂಕೋರ್ಟ್ ಅಂಗಳ ಪ್ರವೇಶಿಸಿದ್ದು, ಉತ್ತರಪ್ರದೇಶ ಸರಕಾರವು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದೆ. ಸಿಜೆಐ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.