Advertisement
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ ಶಿವಕುಮಾರ್, ‘ಈ ಘಟನೆಗೂ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೂ ಯಾವುದೇ ಸಂಬಂಧವಿಲ್ಲ. ಆರೋಪಿ ನವೀನ್, ಶ್ರೀನಿವಾಸ ಅವರ ಸಂಬಂಧಿಯಾಗಿದ್ದರೂ ಆತ ಮೊದಲಿನಿಂದಲೂ ಬಿಜೆಪಿಯ ಕಟ್ಟಾ ಬೆಂಬಲಿಗ. ಅವನಿಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ’ ಎಂದರು.
Related Articles
Advertisement
ಈತನ ಹೇಳಿಕೆ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಅದನ್ನು ತೆಗೆದುಕೊಂಡಿಲ್ಲ. ಇತ್ತೀಚೆಗೆ ನಮ್ಮ ಕಾರ್ಯಕರ್ತ ಕೇಂದ್ರ ಗೃಹ ಸಚಿವರ ವಿರುದ್ಧ ಕಾಮೆಂಟ್ ಮಾಡಿದ್ದಕ್ಕೆ ಸುಮೋಟೋ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ರಾತ್ರೋರಾತ್ರಿ ಆತನನ್ನು ಬಂಧಿಸಿದ್ದರು. ನಾನು ಆತನ ಹೇಳಿಕೆಯನ್ನೂ ವಿರೋಧಿಸಿದ್ದೇನೆ. ಈಗ ದೂರು ಕೊಟ್ಟರೂ ಅದನ್ನು ತೆಗೆದುಕೊಂಡಿಲ್ಲ. ಪೊಲೀಸರು ಈ ವಿಚಾರದಲ್ಲಿ ಸರಿಯಾದ ಕ್ರಮ ಕೈಗೊಳ್ಳದಿರುವುದೇ ಈ ಎಲ್ಲ ಅನಾಹುತಕ್ಕೆ ಕಾರಣ.
ನಮ್ಮ ಶಾಸಕರ ಮನೆ ಮೇಲೆ ದಾಳಿ ನಡೆಯುತ್ತಿದ್ದರೂ ಅವರ ರಕ್ಷಣೆಗೆ ಪೊಲೀಸರು ಮುಂದಾಗಲಿಲ್ಲ. ನವೀನ್ ಬಿಜೆಪಿಯ ಬೆಂಬಲಿಗ ಎಂಬ ಕಾರಣಕ್ಕೆ ಆತನ ವಿರುದ್ಧ ಬಹಳ ಹೊತ್ತಿನವರೆಗೂ ಪ್ರಕರಣ ದಾಖಲಿಸಿಕೊಳ್ಳಲಿಲ್ಲ. ಮೇಲಾಗಿ ಪೊಲೀಸರು ಮೂರು ಗಂಟೆ ಅಮೂಲ್ಯ ಸಮಯವನ್ನು ಹಾಳು ಮಾಡಿದ್ದರಿಂದಾಗಿ ಇಷ್ಟೆಲ್ಲ ಅನಾಹುತವಾಗಿದೆ. ಇದು ಸಂಪೂರ್ಣ ಪೊಲೀಸ್ ವೈಫಲ್ಯ. ಸರಕಾರದ ವೈಫಲ್ಯ.
ಈ ಸರ್ಕಾರಕ್ಕೆ ನಮ್ಮ ಶಾಸಕರಿಗೆ ಹಾಗೂ ಸುತ್ತಮುತ್ತಲಿನ ಜನರಿಗೆ ರಕ್ಷಣೆ ನೀಡಲು ಆಗಲಿಲ್ಲ, ಪೊಲೀಸ್ ಠಾಣೆಗೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದ ಮೇಲೆ ಈ ಸರಕಾರ ಯಾಕಿರಬೇಕು? ಈ ಪ್ರಕರಣಕ್ಕೆ ಯಾರು ಹೊಣೆ? ಕಾನೂನನ್ನು ಕೈಗೆತ್ತಿಕೊಂಡವರ ವಿರುದ್ಧ ಕಠಿಣ ಕ್ರಮ ಜರುಗಿಸಿ. ನಾವು ಆಕ್ಷೇಪ ಮಾಡುವುದಿಲ್ಲ.
ರಾಜ್ಯದಲ್ಲಿ ಶಾಂತಿ ಕಾಪಾಡಬೇಕು, ಯಾರೂ ಕೂಡ ಪ್ರಚೋದನೆಗೆ ಒಳಗಾಗಬಾರದು. ಇದು ಸೂಕ್ಷ್ಮ ವಿಚಾರವಾಗಿದ್ದು, ರಾಜ್ಯದ ಘನತೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಹೀಗಾಗಿ ಪಕ್ಷ, ಜಾತಿ, ಧರ್ಮಬೇಧ ಮರೆತು ಶಾಂತಿ ಕಾಪಾಡಬೇಕು. ಶಾಂತಿ ಸ್ಥಾಪನೆಗಾಗಿ ನಾವು ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ.
ಈ ವಿಚಾರದಲ್ಲಿ ಮುಖ್ಯಮಂತ್ರಿಗಳ ದಿಟ್ಟ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಆದರೆ ಅವರ ಸಂಪುಟದ ಮಂತ್ರಿಗಳು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಜನರನ್ನು ರೊಚ್ಚಿಗೇಳುವಂತೆ ಪ್ರೇರೇಪಿಸುತ್ತದೆ. ಅವರ ಹೇಳಿಕೆಗಳನ್ನು ಮುಖ್ಯಮಂತ್ರಿಗಳು ಗಮನಿಸಬೇಕು. ಕಾಂಗ್ರೆಸ್ ನಾಯಕರು ಎಲ್ಲಿದ್ದಾರೆ ಎಂದು ಬಿಜೆಪಿ ಮುಖಂಡರು ಕೇಳುತ್ತಿದ್ದಾರೆ. ಸರ್ಕಾರದಲ್ಲಿ ನಾವಿಲ್ಲ. ಆದರೆ ನಾವು ಶಾಂತಿ ಕಾಪಾಡಲು ಎಲ್ಲ ಸಹಕಾರ ನೀಡುತ್ತೇವೆ. ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ. ಆದರೆ ಅಮಾಯಕರಿಗೆ ತೊಂದರೆ ಕೊಡಬೇಡಿ .’
ನಾನು ಈಶ್ವರಪ್ಪಣ್ಣ, ಅಶೋಕಣ್ಣ, ಸಿ.ಟಿ. ರವಿಯಣ್ಣ, ಶೋಭಕ್ಕ ನೀಡಿರುವ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಯಾರು ಬೆಂಕಿಗೆ ತುಪ್ಪ, ಸೀಮೆಎಣ್ಣೆ, ಪೆಟ್ರೋಲ್ ಸುರಿಯಿತ್ತಿದ್ದಾರೆ ಎಂಬುದನ್ನು ಜನ ಗಮನಿಸುತ್ತಿದ್ದಾರೆ. ಇದು ಶಾಂತಿ ಕಾಪಾಡಬೇಕಾದ ಸಮಯ. ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ರಾಜಕೀಯ ಮಾಡೋದಿಕ್ಕೆ ಬೇರೆ ಸಂದರ್ಭ, ವಿಚಾರಗಳಿವೆ.
ನಮ್ಮ ಸರಕಾರ ಅಧಿಕಾರದಲ್ಲಿ ಇದ್ದಾಗ ಬರೀ ಎಸ್ಡಿಪಿಐ, ಪಿಎಫ್ಐ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನಷ್ಟೆ ವಾಪಸ್ಸು ಪಡೆದಿಲ್ಲ. ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳ ವಿರುದ್ಧವೂ ದಾಖಲಿಸಿದ್ದ ಬರೀ ರಾಜಕೀಯ ಪ್ರೇರಿತ ಮೊಕದ್ದಮೆಗಳನ್ನು ವಾಪಸ್ಸು ಪಡೆದಿದೆ. ಈಗ ಯಾರಾದರೂ ತಪ್ಪು ಮಾಡಿದ್ದರೆ ಸರಕಾರ ಕಾನೂನು ಕ್ರಮ ಕೈಗೊಳ್ಳಲಿ. ನಾವೇನೂ ಬೇಡ ಅಂದಿಲ್ಲ. ತಪ್ಪು ಮಾಡಿದ ಯಾರನ್ನೂ ಕಾಂಗ್ರೆಸ್ ರಕ್ಷಿಸುವುದಿಲ್ಲ, ಬೆಂಬಲಿಸುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣಭೈರೇ ಗೌಡ, ಜಮೀರ್ ಅಹಮದ್, ವಿಧಾನ ಪರಿಷತ್ ಸದಸ್ಯರಾದ ಬಿ.ಕೆ ಹರಿಪ್ರಸಾದ್, ನಾಸೀರ್ ಅಹಮದ್, ಎಂ. ನಾರಾಯಣಸ್ವಾಮಿ, ಶಾಸಕರಾದ ರಿಜ್ವಾನ್ ಅರ್ಷದ್, ಎನ್.ಎ ಹ್ಯಾರಿಸ್, ಸೌಮ್ಯರೆಡ್ಡಿ ಮತ್ತಿತರ ನಾಯಕರು ಇದ್ದರು.