ಹಾವೇರಿ: ವೈದ್ಯ ವಿದ್ಯಾರ್ಥಿ ನವೀನ್ ಮೃತದೇಹವನ್ನು ಸ್ವದೇಶಕ್ಕೆ ತರಲು ನಾವು ಎಲ್ಲ ರೀತಿಯ ಪ್ರಯತ್ನ ನಡೆಸಿದ್ದೇವೆ. ಆದರೆ, ನಮಗೆ ಅದು ಸಾಧ್ಯವಾಗುತ್ತಿಲ್ಲ ಎಂದು ಉಕ್ರೇನ್‌ನ ರಾಯಭಾರ ಕಚೇರಿ ಅಧಿಕಾರಿ ಅಸಹಾಯಕತೆ ವ್ಯಕ್ತಪಡಿಸಿರುವುದು ಕುಟುಂಬಸ್ಥರಲ್ಲಿ ಮತ್ತಷ್ಟು ಆತಂಕ ಉಂಟು ಮಾಡಿದೆ.
ಉಕ್ರೇನ್ ಹಾಗೂ ರಷ್ಯಾ ನಡುವೆ ನಡೆಯುತ್ತಿರುವ ಯುದ್ಧದ ದಾಳಿಗೆ ಅಸುನೀಗಿರುವ ವೈದ್ಯ ವಿದ್ಯಾರ್ಥಿ ನವೀನ್ ಗ್ಯಾನಗೌಡ್ರ(22) ಮೃತದೇಹವನ್ನು ಸ್ವದೇಶಕ್ಕೆ ತರಲು ನಮ್ಮಿಂದ ಕಷ್ಟವಾಗುತ್ತಿದೆ ಎಂದು ಉಕ್ರೇನ್ ರಾಯಭಾರ ಕಚೇರಿಯ ಅಧಿ ಕಾರಿಗಳು ನವೀನ್ ಸಹೋದರ ಹರ್ಷ ಅವರಿಗೆ ಕರೆ ಮಾಡಿ ಹೇಳಿರುವುದು ನವೀನ ಮೃತದೇಹ ತಾಯ್ನಾಡಿಗೆ ತರುವ ಬಗ್ಗೆ ಅನಿಶ್ಚಿತತೆ ಕಾಡುವಂತೆ ಮಾಡಿದೆ.
ನವೀನ್ ಸಹೋದರ ಹರ್ಷ ಅವರು ರಾಯಭಾರ ಕಚೇರಿಯ ಜಂಟಿ ಆಯುಕ್ತ ನಿಮೇಶ್ ಭಾರೋಟ್ ಅವರನ್ನು ಸಂಪರ್ಕಿಸಿದಾಗ, ಉಕ್ರೇನ್‌ನಲ್ಲಿನ ಸದ್ಯದ ಪರಿಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಲ್ಲಿನ ಪರಿಸ್ಥಿತಿ ಮಂಗಳವಾರಕ್ಕಿಂತಲೂ ಬುಧವಾರ ಇನ್ನೂ ಭೀಕರವಾಗಿದೆ. ನವೀನ್ ಮೃತದೇಹವನ್ನು ಈಗ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. ಅಲ್ಲಿ ಬಹಳ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನಮಗೆ ಏನು ಮಾಡಬೇಕೆಂಬುದೇ ತಿಳಿಯುತ್ತಿಲ್ಲ ಎಂಬ ರಾಯಭಾರ ಕಚೇರಿ ಅಧಿ ಕಾರಿಯ ಹೇಳಿಕೆ ನವೀನ್ ಕುಟುಂಬಸ್ಥರಲ್ಲಿನ ದುಃಖವನ್ನು ಮತ್ತಷ್ಟು ಹೆಚ್ಚಿಸಿದೆ.