“ಚಾರ್ಲಿ ಚಾಪ್ಲಿನ್…’ ಚೇತೋಹಾರಿ ಹಾಸ್ಯಕ್ಕೆ ಮತ್ತೊಂದು ಹೆಸರೇ ಈ ಚಾರ್ಲಿ ಚಾಪ್ಲಿನ್. ಹೌದು, ಇಲ್ಲೇಕೆ ಚಾರ್ಲಿ ಚಾಪ್ಲಿನ್ ಹೆಸರು ಪ್ರಸ್ತಾಪ ಎಂಬ ಪ್ರಶ್ನೆ ಕಾಡಬಹುದು. ಅದಕ್ಕೆ ಉತ್ತರ ಮತ್ತದೇ “ಚಾರ್ಲಿ ಚಾಪ್ಲಿನ್’. ಅಂದರೆ, ಕನ್ನಡದಲ್ಲಿ ಸೆಟ್ಟೇರಲು ತಯಾರಾಗುತ್ತಿರುವ ಹೊಸ ಚಿತ್ರದ ಹೆಸರಿದು. ಅಂದಹಾಗೆ, ಈ ಚಿತ್ರವನ್ನು ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.
ಯಾವ ಕುಮಾರ್ ಅಂದರೆ, “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರ ತೋರಿಸಬೇಕು. ಆ ಚಿತ್ರ ಈಗ ಅರ್ಧ ಶತಕ ದಾಟಿ ಸಂಭ್ರಮದಲ್ಲಿರುವ ಬೆನ್ನಲ್ಲೇ ನಿರ್ದೇಶಕರು, “ಚಾರ್ಲಿ ಚಾಪ್ಲಿನ್’ ಹಿಂದೆ ಬಂದಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯೂ ಅವರದೇ. ಈ ಚಿತ್ರಕ್ಕೆ ನವೀನ್ ಸಜ್ಜು ಹೀರೋ. ಗಾಯಕ ಆಗಿದ್ದ ನವೀನ್ ಸಜ್ಜು ಸಂಗೀತ ನಿರ್ದೇಶಕರಾಗಿಯೂ ಗುರುತಿಸಿಕೊಂಡರು.
“ಬಿಗ್‌ಬಾಸ್’ ಮನೆಗೆ ಕಾಲಿಟ್ಟು ಬಂದ ಬಳಿಕ ಹೀರೋ ಆಗಿಯೂ ಅದೃಷ್ಟ ಒಲಿದು ಬಂದಿದೆ. ಗಾಯಕರಾಗಿ ಸೈ ಎನಿಸಿಕೊಂಡಿದ್ದ ಅವರು ತೆರೆಯ ಮೇಲೆ ಹೇಗೆ ಕಾಣುತ್ತಾರೆ ಎಂಬ ಕುತೂಹಲಕ್ಕೆ ಸಿನಿಮಾ ಬರುವವರೆಗೆ ಕಾಯಲೇಬೇಕು. ಇನ್ನು, ಇಲ್ಲೂ ಸಹ ಹಾಸ್ಯ ನಟ ತಬಲಾನಾಣಿ ಅವರು ಪ್ರಮುಖ ಆಕರ್ಷಣೆ.
“ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದಲ್ಲಿ ಒಂದು ರೀತಿ ಹೀರೋ ಎಂದೇ ಕರೆಸಿಕೊಂಡಿದ್ದ ತಬಲಾನಾಣಿ, ಇಲ್ಲೂ ತಮ್ಮ ಎಂದಿನ ಹಾಸ್ಯ ಮಾತುಗಳ ಮೂಲಕ ಮೋಡಿ ಮಾಡುವ ಲಕ್ಷಣಗಳಿವೆ. ಉಳಿದಂತೆ ಚಿತ್ರದಲ್ಲಿ ಇನ್ನೂ ಎರಡು ಪ್ರಮುಖ ಪಾತ್ರಗಳಿದ್ದು, ಆ ಪಾತ್ರಕ್ಕೆ ಹುಡುಕಾಟ ನಡೆದಿದೆ. ಇಲ್ಲಿ ನಾಯಕಿಗೂ ಪ್ರಮುಖ ಜಾಗ ಕಲ್ಪಿಸಿರುವ ನಿರ್ದೇಶಕರು, ಆಕೆಗೆ ಹುಡುಕಾಟ ನಡೆಸಿದ್ದಾರೆ.
ಎಲ್ಲಾ ಸರಿ, “ಚಾರ್ಲಿ ಚಾಪ್ಲಿನ್’ ಹೆಸರೇ ಯಾಕೆ? ಈ ಪ್ರಶ್ನೆಗೆ ಉತ್ತರಿಸುವ ನಿರ್ದೇಶಕ ಕುಮಾರ್, ಇದೊಂದು ಹಾಸ್ಯಭರಿತ ಕಥೆ. ಆರಂಭದಿಂದ ಅಂತ್ಯದವರೆಗೂ ನಗಿಸುತ್ತಲೇ ಕಥೆ ಸಾಗಲಿದೆ. ನಗು ಅಂದಾಕ್ಷಣ, ನೆನಪಾಗೋದೇ ಚಾರ್ಲಿ ಚಾಪ್ಲಿನ್. ಹಾಗಾಗಿ ಕಥೆಗೆ ಪೂರಕವಾಗಿರುತ್ತೆ ಎಂಬ ಕಾರಣಕ್ಕೆ ಆ ಶೀರ್ಷಿಕೆ ಇಡಲಾಗಿದೆ. ಇದೊಂದು ಜರ್ನಿ ಕಥೆ.
ಬೆಂಗಳೂರಿನಿಂದ ಮಡಿಕೇರಿವರೆಗೆ ನಡೆಯುವ ಜರ್ನಿಯಲ್ಲಿ ಕಾಣುವ ದೃಶ್ಯಗಳು, ಪಾತ್ರಗಳು, ಮಾತುಗಳು ಎಲ್ಲವೂ ನಗು ತರಿಸುತ್ತಲೇ ಸಾಗುತ್ತವೆ . ಬೆಂಗಳೂರು, ಶ್ರವಣಬೆಳಗೊಳ, ಮಡಿಕೇರಿ ಸುತ್ತಮುತ್ತ ಸುಮಾರು 45 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕರು. ಚಿತ್ರಕ್ಕೆ ಶಿವಸೇನ ಛಾಯಾಗ್ರಹಣವಿದೆ.