Advertisement

ನವೀನ್‌ ಪಾರ್ಥಿವ ಶರೀರವನ್ನು ಚಳಗೇರಿಯ ನಿವಾಸಕ್ಕೆ…

10:13 AM Mar 21, 2022 | Team Udayavani |

ಹಾವೇರಿ: ಉಕ್ರೇನ್‌ನಲ್ಲಿ ರಷ್ಯಾದ ದಾಳಿಗೆ ಮೃತಪಟ್ಟ ಮೆಡಿಕಲ್ ವಿದ್ಯಾರ್ಥಿ ನವೀನ್ ಗ್ಯಾನಗೌಡ‌ ಪಾರ್ಥಿವ ಶರೀರ ಸೋಮವಾರ ಸ್ವಗ್ರಾಮ ರಾಣಿಬೆನ್ನೂರು ತಾಲೂಕು ಚಳಗೇರಿಗೆ ಆಗಮಿಸಿದ್ದು, ಕುಟುಂಬಸ್ಥರರಿಂದ ಪೂಜೆ ಸಲ್ಲಿಸಿದ ಬಳಿಕ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ನವೀನ್‌ ಪಾರ್ಥಿವ ಶರೀರವನ್ನು ಚಳಗೇರಿಯ ನಿವಾಸಕ್ಕೆ ತಂದು ವೀರಶೈವ ಲಿಂಗಾಯದ ಸಂಪ್ರದಾಯದಂತೆ ಪೂಜೆ ನೆರವೇರಿಸಲಾಗುತ್ತಿದ್ದು ಬಳಿಕ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುತ್ತಿದೆ. ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

Advertisement

ಸಿಎಂ ಬೊಮ್ಮಾಯಿಂದ ಅಂತಿಮ ದರ್ಶನ..
ಸಿಎಂ ಬಸವರಾಜ ಬೊಮ್ಮಾಯಿ ಅವರು ಬೆಳಗ್ಗೆ 11 ಗಂಟೆಗೆ ಸುಮಾರಿಗೆ ಚಳಗೇರಿಗೆ ಆಗಮಿಸಿ ಅಂತಿಮ ದರ್ಶನ ಪಡೆಯಲಿದ್ದಾರೆ. ಸಿರಿಗೆರೆ ಡಾ. ಶಿವಮೂರ್ತಿ ಶ್ರೀ, ಸಚಿವ ಶಿವರಾಮ ಹೆಬ್ಬಾರ, ಸಂಸದ ಶಿವಕುಮಾರ ಉದಾಸಿ, ಸ್ಥಳೀಯ ಶಾಸಕ ಅರುಣಕುಮಾರ ಪೂಜಾರ ಸೇರಿದಂತೆ ಜನಪ್ರತಿನಿಧಿಗಳು, ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ. ಉಕ್ರೇನ್‌ನಿಂದ ಹಿಂದಿರುಗಿರುವ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ನವೀನ್ ಸ್ನೇಹಿತರು ಆಗಮಿಸುತ್ತಿದ್ದಾರೆ. ಸುಮಾರು 3 ಗಂಟೆಗಳ ಕಾಲ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ.
ಗಣ್ಯರು ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸುಮಾರು 200 ಪೊಲೀಸರನ್ನು ನಿಯೋಜಿಸಲಾಗುತ್ತಿದೆ.

ಕುಟುಂಬಸ್ಥರ ಆಕ್ರಂದನ…
ನವೀನ್ ಮೃತಪಟ್ಟು 21 ದಿನಗಳ ಬಳಿಕ ಪಾರ್ಥೀವ ಶರೀರ ಮನೆಗೆ ಆಗಮಿಸಿದ್ದು, ನವೀನ ಮೃತದೇಹ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಗ್ರಾಮದಲ್ಲಿ ಶೋಕದ ವಾತಾವಣ ನಿರ್ಮಾಣಗೊಂಡಿದ್ದು, ಗ್ರಾಮಸ್ಥರೆಲ್ಲರು ಮೃತ ನವೀನ ಅಂತಿಮ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ.

ದೇಹದಾನಕ್ಕೆ ನಿರ್ಧಾರ..
ಅಂತಿಮ ದರ್ಶನದ ಬಳಿಕ ಚಳಗೇರಿ ಗ್ರಾಮದಲ್ಲಿ ನವೀನ್ ಮೆರವಣಿಗೆ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಇಡಿ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಗೌರವ ಸಲ್ಲಿಸಲಾಗುತ್ತದೆ. ನವೀನ್ ದೇಹದಾನಕ್ಕೆ ಪೋಷಕರು ನಿರ್ಧರಿಸಿರುವಂತೆ ಮೆರವಣಿಗೆ ಬಳಿಕ ದಾವಣಗೆರೆಯ ಎಸ್.ಎಸ್. ಮೆಡಿಕಲ್ ಕಾಲೇಜಿಗೆ ನವೀನ್ ದೇಹವನ್ನು ಹಸ್ತಾಂತರ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next