ಹೊಸದಿಲ್ಲಿ: ಯುವ ವೇಗಿ ನವದೀಪ್ ಸೈನಿ ಅವ ರನ್ನು ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತದ ಟೆಸ್ಟ್ ತಂಡದೊಂದಿಗೆ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ಭವಿಷ್ಯದಲ್ಲಿ ಅವರು ಕೆಂಪು ಚೆಂಡಿನಲ್ಲೂ ಗಮನಾರ್ಹ ಸಾಧನೆ ತೋರಬೇಕೆಂಬುದು ತಂಡದ ಆಡಳಿತ ಮಂಡಳಿಯ ಉದ್ದೇಶ.
ವೆಸ್ಟ್ ಇಂಡೀಸ್ ವಿರುದ್ಧ ಫ್ಲೋರಿಡಾದಲ್ಲಿ ಟಿ20 ಕ್ರಿಕೆಟಿಗೆ ಪದಾರ್ಪಣೆ ಮಾಡಿದ ನವದೀಪ್ ಸೈನಿ, ಅಮೋಘ ಪ್ರದರ್ಶನ ನೀಡಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಅವರ ಬೌಲಿಂಗ್ ಕೌಶಲ ಎಲ್ಲರ ಗಮನ ಸೆಳೆದಿತ್ತು. ಭಾರತದಲ್ಲೇ ಅತೀ ವೇಗದಲ್ಲಿ ಬೌಲಿಂಗ್ ನಡೆಸುವ ಛಾತಿ ಈ ದಿಲ್ಲಿ ಬೌಲರ್‌ನದ್ದಾಗಿದೆ.
ಸೈನಿ ಕಳೆದ ಐಸಿಸಿ ವಿಶ್ವಕಪ್ ವೇಳೆಯೂ ನೆಟ್ ಬೌಲರ್ ಆಗಿದ್ದರು. ಬಳಿಕ ಇದೇ ಕೂಟದಲ್ಲಿ ಭುವನೇಶ್ವರ್ ಕುಮಾರ್ ಗಾಯಾಳಾದಾಗ ಸೈನಿ ಅವರನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ತಂಡದಲ್ಲಿ ಇರಿಸಿಕೊಳ್ಳಲಾಗಿತ್ತು.
ಪ್ರಸಕ್ತ ಋತುವಿನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ವಿರುದ್ಧ ಭಾರತ ತವರಿನಲ್ಲಿ 5 ಟೆಸ್ಟ್ ಆಡಲಿದೆ. ಈ ಸಂದರ್ಭದಲ್ಲಿ ತಂಡದ ವೇಗದ ಬೌಲಿಂಗ್ ವಿಭಾಗವನ್ನು ಗಟ್ಟಿಗೊಳಿಸುವುದು ಭಾರತದ ಯೋಜನೆಯಾಗಿದೆ. ಇದರಿಂದ ಬುಮ್ರಾ, ಶಮಿ ಮೇಲಿನ ಒತ್ತಡವೂ ಕಡಿಮೆ ಆದಂತಾಗುತ್ತದೆ.
ಟೆಸ್ಟ್ ಬೆಳವಣಿಗೆಗೆ ಸಹಕಾರಿ
“ತಂಡದ ಆಡಳಿತ ಮಂಡಳಿಯ ಕೋರಿಕೆಯಂತೆ ನವದೀಪ್ ಸೈನಿ ಅವರನ್ನು ತಂಡದಲ್ಲೇ ಉಳಿಯುವಂತೆ ಸೂಚಿಸಲಾಗಿದೆ. ಅವರು ನೆಟ್ ಬೌಲರ್ ಆಗಿರಲಿದ್ದಾರೆ. ಇದರಿಂದ ಭವಿಷ್ಯದಲ್ಲಿ ಅವರ ಟೆಸ್ಟ್ ಬೆಳವಣಿಗೆಗೂ ಸಹಾಯವಾಗಲಿದೆ’ ಎಂಬುದಾಗಿ ಬಿಸಿಸಿಐ ತಿಳಿಸಿದೆ.