Advertisement

ಬಸವಸಾಗರ ಜಲಾಶಯ ಭದ್ರತೆ ಪರಿಶೀಲನೆ

01:28 PM Jul 31, 2019 | Naveen |

ನಾಲತವಾಡ: ಸಮೀಪದ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಮಂಗಳವಾರ ಸಂಜೆ ವಿಜಯಪುರ ಜಿಲ್ಲಾ ಎಸ್ಪಿ ಪ್ರಕಾಶ ನಿಕ್ಕಂ ಅವರು ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಜಲಾಶಯಕ್ಕೆ ಒದಗಿಸಿರುವ ಭದ್ರತೆ ಪರಿಶೀಲಿಸಿದರು.

Advertisement

ಈ ವೇಳೆ ಜಲಾಶಯದ ಎಡ ಭಾಗದಲ್ಲಿ ವಿಜಯಪುರ ಜಿಲ್ಲಾ ಪೊಲೀಸರು ಭದ್ರತೆ ಒದಗಿಸಿರುವುದನ್ನು ತಿಳಿದುಕೊಂಡ ಅವರು ಜಲಾಶಯದ ಮುಂಭಾಗದಲ್ಲಿ ಖಾಸಗಿ ಭದ್ರತಾ ಸಿಬ್ಬಂದಿ ಬಂದೋಬಸ್ತ್ ಒದಗಿಸಿರುವ ಬಗ್ಗೆ ವಿಚಾರಿಸಿದರು. ಜಲಾಶಯದ ಮೇಲ್ಭಾಗ, ಜಲಾಶಯದ ಕ್ರಸ್ಟ್‌ಗೇಟ್ ಮುಂದಿನ ಪಾದಚಾರಿ ಮಾರ್ಗದಲ್ಲಿ ಪೊಲೀಸ್‌ ಅಧಿಕಾರಿಗಳೊಂದಿಗೆ ಸಂಚರಿಸಿ ಗೇಟುಗಳ ಮೂಲಕ ನದಿಗೆ ಹರಿಯುತ್ತಿರುವ ನೀರಿನ ರಮಣೀಯ ದೃಶ್ಯ ವೀಕ್ಷಿಸಿದರು. ನಂತರ ಜಲಾಶಯದ ಕೆಳ ಭಾಗಕ್ಕೆ ತೆರಳಿ ಅಲ್ಲಿ ಖಾಸಗಿ ಭದ್ರತಾ ಸಿಬ್ಬಂದಿ ಒದಗಿಸಿರುವ ಭದ್ರತೆ ಮಾಹಿತಿಯನ್ನೂ ಪಡೆದುಕೊಂಡರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಲಾಶಯಕ್ಕೆ ಒದಗಿಸಿರುವ ಭದ್ರತೆ ತೃಪ್ತಿಕರವಾಗಿದೆ. ಖಾಸಗಿಯಾಗಿ 30 ಮಾಜಿ ಸೈನಿಕರ ತಂಡವನ್ನು ಏಜೆನ್ಸಿ ಮೂಲಕ ಭದ್ರತಾ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ವಿಜಯಪುರ, ಯಾದಗಿರಿ ಮತ್ತು ರಾಯಚೂರು ಪೊಲೀಸರೂ ಜಲಾಶಯದ ಮೇಲ್ಭಾಗದಲ್ಲಿ ಭದ್ರತಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಜಲಾಶಯದಲ್ಲಿ ನೀರು ಬಿಟ್ಟಿರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆಗೆ ಬರುವ ಅವಕಾಶ ಇದ್ದು ಅನುಮತಿ ಇದ್ದವರನ್ನು ಮಾತ್ರ ಜಲಾಶಯದ ಒಳ ಆವರಣದಲ್ಲಿ ಬಿಡುವಂತೆ ಕಟ್ಟೆಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.

ಬಸವನಬಾಗೇವಾಡಿ ಡಿವೈಎಸ್ಪಿ ಮಹೇಶ್ವರ ಗೌಡ, ಮುದ್ದೇಬಿಹಾಳ ಸಿಪಿಐ ರವಿಕುಮಾರ ಕಪ್ಪತನವರ್‌, ಹುಣಸಗಿ ಡಿವೈಎಸ್‌ಪಿ, ಸಿಪಿಐ ಮತ್ತಿತರ ಪೊಲೀಸ್‌ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next