Advertisement
ಶಕ್ತಿ ಸ್ವರೂಪಿಣಿಯನ್ನು “ಜಗದವ್ವೆ’ ಎಂದೇ ಒಪ್ಪಿ, ಅವಳೇ ನಮ್ಮ “ಅವ್ವೆ’-“ಅಮ್ಮ’ನೆಂದು ಪರಿಭಾವಿಸಿ ಜಗಜ್ಜನನಿಯ ಆರಾಧನೆಗೆ ಆರಂಭಸಿದ ಚಿಂತನೆ ಮಾತ್ರ ಅಮೋಘವಾದುದು. “ಅಮ್ಮ’ ಈ ಎರಡಕ್ಷರದ ಶಬ್ಧಕ್ಕಿರುವ ಅಮೇಯವಾದ ಅಮಿತ ಭಾವನೆಗಳನ್ನು ಉದ್ಧೀಪಿಸಬಲ್ಲ ಅಮೂಲ್ಯ, ಅಮಲ ಸಂಬಂಧವನ್ನು ಜಾಗೃತಗೊಳಿಸಬಲ್ಲ ಅನನ್ಯತೆ ಅನ್ಯ ಸಂಬಂಧ ವಾಚಕಗಳಿಗಿಲ್ಲ. ಇದು ಅಪ್ಪಟ ಸತ್ಯ. ನಿಷ್ಕಳಂಕ ಅನುಬಂಧ, ವಾತ್ಸಲ್ಯ-ಕರುಣೆಯ ನಿಧಿ, ಅಮೂರ್ತಭಾವ ಬಂಧನ. ಸಂಭವಿಸಿದ ಸ್ನೇಹ, ನಂಟು ಅಥವಾ ಬಾಂಧವ್ಯ. ಆದುದರಿಂದ ಅಮ್ಮಾ …! ಎಂಬುದು ಶ್ರೇಷ್ಠ, ಜ್ಯೇಷ್ಠ, ಸರ್ವಮಾನ್ಯ, ಪ್ರೀತಿಯ ಉಗಮಸ್ಥಾನ.
Related Articles
Advertisement
ತಾನು ಯಾವುದರಿಂದ ಉಪಕೃತನಾದೆ, ತನಗೆ ಯಾವುದು? ಆಧಾರ-ಜೀವನಾಧಾರ, ಯಾವುದು? ರಕ್ಷಣೆ ನೀಡುತ್ತದೆ, ಇವುಗಳೆಲ್ಲ ಗೌರವ-ಪೂಜಾರ್ಹವಾದಾಗ ಅಮ್ಮ ಪ್ರಥಮ ಆದ್ಯತೆ ಪಡೆದಳು. ಈ ಅಮ್ಮನೇ ಮಾತೃರೂಪದ ಆದಿಮಾಯೆ, ಮೂಲದ ತಾಯಿ, ಎಲ್ಲರ ಅಮ್ಮ. ಅವಳೇ ಕೈಹಿಡಿದು ಮುನ್ನಡೆಸುವ, ಅಪ್ಪಿ ಮುದ್ದಾಡಿಸಿ ಲಲ್ಲಗರೆಯುವ, ಉದ್ಧರಿಸುವ ಜಗದಂಬಿಕೆ.
ಈ ಅಮ್ಮ ದಾಷ್ಟ್ಯ, ಜಡತ್ವ, ದುರಹಂಕಾರಗಳನ್ನು ಮರ್ದಿಸುತ್ತಾಳೆ. ಈ ಮೂರು ವೈರಿಗಳು ಮನುಷ್ಯನನ್ನು ದುಷ್ಟನನ್ನಾಗಿ ರೂಪಿಸುತ್ತದೆ.ಇದೇ ರಾಕ್ಷಸ ಅಥವಾ ರಾಕ್ಷಸೀ ಪ್ರವೃತ್ತಿ. ತನ್ನ ಮಗು ಇವುಗಳ ಸ್ಪರ್ಶವಿಲ್ಲದೆ ಬದುಕುವಂತೆ ಮಾಡುವವಳೇ ಮಹಿಷಾಂತಕಿ. ಇಲ್ಲಿ ಮಹಿಷ ಜಡತ್ವ, ದಾಷ್ಟ್ಯ, ದುರಹಂಕಾರಗಳ ಅಭಿವ್ಯಕ್ತಿ, ಇವುಗಳ ಅಂತ್ಯಕ್ಕೆ ಬರುತ್ತಾಳೆ ಮಹಿಷಾಸುರಮರ್ದಿನಿ.
ಪಿತೃಪಕ್ಷ ಮುಗಿದೊಡನೆ ಬರುವುದು ಮಾತೃಪಕ್ಷ. ಪಿತೃ ಪ್ರೀತ್ಯರ್ಥವಾಗಿ ವಿಸ್ತೃತ ಶ್ರಾದ್ಧ ವಿಧಾನವಾದ ಮಹಾಲಯ ಶ್ರಾದ್ಧ ನಿರ್ವಹಿಸಿ ಅಥವಾ ಗತಿಸಿದ ಪಿತೃ-ಮಾತೃ ಶಾಖೆಗೆ ತಿಲ ತರ್ಪಣ, ವಾಯಸಬಲಿ ಸಮರ್ಪಿಸಿ ಧನ್ಯರಾದವರಿಗೆ ಒಡನೆ ಮಾತೃಪಕ್ಷ (ಹತ್ತು ದಿನವಲ್ಲ ಒಂದು ಪಕ್ಷವೆಂದು ಹೇಳಲಾಗುತ್ತದೆ). ಒದಗಿ ಬರುತ್ತದೆ. ಇದು ನವರಾತ್ರಿ ಎಂದು ಪ್ರಸಿದ್ಧ.
|ರಜೋಗುಣ-ಮಹಾಲಕ್ಷ್ಮೀ|
ಶ್ರೀ ದುರ್ಗಾಸಪ್ತಶತೀ ಹೇಳುವಂತೆ…ಮಹಿಷ ವಧಾನಂತರದಲ್ಲಿ, ಇಂದ್ರಾದಿದೇವತೆಗಳು ದೇವಿಯನ್ನು ಸ್ತುತಿಸುತ್ತಾರೆ. ಪ್ರಸನ್ನಳಾದ ದೇವಿಯು ದೇವತೆಗಳೆಲ್ಲ ಸ್ಮರಿಸಿಕೊಂಡಾಗಲೆಲ್ಲ ಆವಿರ್ಭವಿಸಿ ಕಷ್ಟಗಳನ್ನು ಪರಿಹರಿಸುತ್ತೇನೆ ಎಂದು ಅಭಯವನ್ನು ನೀಡುತ್ತಾಳೆ. ಭಕ್ತರಿಗೆ ವೈಭವವನ್ನು ಅನುಗ್ರಹಿಸುವುದಾಗಿ ಮಾತು ಕೊಟ್ಟು ಅದೃಶ್ಯಳಾಗುತ್ತಾಳೆ. ರಜೋಗುಣವು ಮಹಾಲಕ್ಷ್ಮೀಯಾಗಿ ಸಂಭವಿಸುತ್ತದೆ, ಅದೇ ಮಹಿಷಾಂತಕಿಯಾದ ಮಹಾಲಕ್ಷ್ಮೀ. ಈ ಮಹಿಷವಧಾ ಪ್ರಕರಣದ ನೆನಪೇ ನವರಾತ್ರಿ ಹಾಗೂ ವಿಜಯದಶಮಿ ಎಂದು ನಿರೂಪಣೆ. ಒಂಬತ್ತು ದಿನದ ಯುದ್ಧಕಾಲ ಹಾಗೂ ದಶಮಿಯ ದಿನದ ವಿಜಯೋತ್ಸವ.
ಮೇದಿನಿ ನಿರ್ಮಾಣ
“ಓಂ’ ಕಾರದ ಮೂರ್ತಸ್ವರೂಪವಾಗಿ ಆದಿಮಾಯೆ, ಇವಳೇ ಮೂಲ ಮಾತೆ. ಈ ಅಮ್ಮನಿಂದ ತ್ರಿಮೂರ್ತಿಗಳು, ಬ್ರಹ್ಮ, ವಿಷ್ಣು, ಮಹೇಶ್ವರ. ಬ್ರಹ್ಮ, ಮಹೇಶ್ವರ ಇಬ್ಬರೂ ವಿಷ್ಣುವಿನಲ್ಲಿ ಐಕ್ಯವಾಗುತ್ತಾರೆ. ವಿಷ್ಣು ಯೋಗನಿದ್ದೆಯ ವಶವಾದಾಗ ಅವನ ಕಿವಿಯ ಕಿಲ್ವಿಷದಿಂದ ಮಧು ಕೈಟಭರೆಂಬವರ ಸೃಷ್ಟಿ. ಅವರನ್ನು ಆದಿಮಾಯೆಯು ವಿಷ್ಣುವನ್ನು ಎಚ್ಚರಗೊಳಿಸಿ ವಧಿಸುವಂತೆ ಮಾಡುತ್ತಾಳೆ. ಮಧು ಕೈಟಭರ ಮೇದಸ್ಸಿನಿಂದ ಮೇದಿನಿ ನಿರ್ಮಾಣ. ಅಂಡಜ, ಸ್ವೇದಜ, ಯದ್ಭಿಜ, ಜರಾಯುಜಗಳೆಂಬ ನಾಲ್ಕು ಪ್ರಭೇದಗಳಲ್ಲಿ ಎಂಬತ್ತನಾಲ್ಕು ಲಕ್ಷ ಜೀವರಾಶಿಗಳ ಸೃಷ್ಟಿ. ಇಲ್ಲಿಂದ ಸೃಷ್ಟಿ ಆರಂಭ. ಅನುಸರಿಸಿ ಸ್ಥಿತಿ, ಲಯಗಳು ನಿರಂತರ.
-ಕೆ.ಎಲ್. ಕುಂಡಂತಾಯ