Advertisement

ನವರಾತ್ರಿ ಸೊಬಗು; ನಗರವೆಲ್ಲ ದೀಪಾಲಂಕಾರದ ಮೆರುಗು

03:05 PM Sep 30, 2022 | Team Udayavani |

ಮಹಾನಗರ: ನಾಡಿನೆಲ್ಲೆಡೆ ನವರಾತ್ರಿ ಸಂಭ್ರಮ. ದೇವಾಲಯಗಳಲ್ಲಿ ಭಕ್ತಿ ಸಡಗರ. ಇದಕ್ಕೆ ಪೂರಕವಾಗಿ ನಗರವೆಲ್ಲ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.

Advertisement

ಶ್ರೀ ಕ್ಷೇತ್ರ ಕುದ್ರೋಳಿ, ಶ್ರೀ ಮಂಗಳಾದೇವಿ ದೇವಸ್ಥಾನ ಸಹಿತ ನಗರದ ಹಲವು ದೇವಾಲಯಗಳು ವಿದ್ಯುದ್ದೀಪಾಲಂಕೃತವಾಗಿ ಕಂಗೊಳಿಸುತ್ತಿರುವುದನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ವಿವಿಧ ಮಾದರಿಯ ನವ ನವೀನ ವಿನ್ಯಾಸದ ಮಿನಿಯೇಚರ್‌ಗಳಿಂದ ಅಲಂಕೃತಗೊಂಡ ದೇವಳದ ಗೋಪುರ, ಪೌಳಿಗಳನ್ನು ರಾತ್ರಿ ವೇಳೆ ವೀಕ್ಷಿಸುವುದು ಆನಂದಮಯ. ಪೂರಕವಾಗಿ ಮಂಗಳೂರಿನ ಹಲವು ಸರ್ಕಲ್‌, ರಸ್ತೆಗಳನ್ನು ವಿಶೇಷವಾಗಿ ಸಿಂಗರಿಸಲಾಗಿದೆ. ದಸರಾ ಹಿನ್ನೆಲೆಯಲ್ಲಿ ಈ ಬಾರಿ ರಸ್ತೆಗಳ ಬೆಳಕಿನ ಶೃಂಗಾರವನ್ನು ಮಂಗಳೂರು ಪಾಲಿಕೆಯೇ ನಿರ್ವಹಿಸಿದೆ.

ಜಗದ್ವಿಖ್ಯಾತ ಮಂಗಳೂರು ದಸರಾ ಎಂದು ಗಮನಸೆಳೆದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿ ಮಹೋತ್ಸವ ನೆಲೆಯಲ್ಲಿ ನಗರದ ವಿವಿಧ ರಸ್ತೆಗಳಿಗೆ ಬೆಳಕಿನ ಶೃಂಗಾರ ಮಾಡಲಾಗಿದೆ. ದಸರಾ ಮೆರವಣಿಗೆ ಸಾಗಿ ಬರುವ ಮುಖ್ಯರಸ್ತೆಗಳು ಬಗೆಬಗೆಯ ಬೆಳಕಿನ ಚಿತ್ತಾರದಿಂದ ಕನ್ಮಣ ಸೆಳೆಯುತ್ತಿದೆ. ಪುರಾಣ ಪ್ರಸಿದ್ಧ ಶ್ರೀ ಮಂಗಳಾದೇವಿ ದೇವಸ್ಥಾನದ ಮುಂಭಾಗ ಹಾಗೂ ಅಕ್ಕ ಪಕ್ಕದ ರಸ್ತೆಗಳು ಕೂಡ ಬೆಳಕಿನ ಶೃಂಗಾರದಿಂದ ಕಂಗೊಳಿಸುತ್ತಿದೆ. ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನ, ಕೊಡಿಯಾಲಬೈಲ್‌ನ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರ, ಬೋಳಾರ ಶ್ರೀ ಮಾರಿಯಮ್ಮ ಮಹಿಷಾಮರ್ಧಿನಿ ದೇವಸ್ಥಾನ, ಉರ್ವಾ ಶ್ರೀ ಮಾರಿಯಮ್ಮ ದೇವಸಾœನ ಸಹಿತ ವಿವಿಧ ದೇವಾಲಯಗಳು, ಆಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಣ್ಣ ಬಣ್ಣದ ಬೆಳಕಿನೊಂದಿಗೆ ಗಮನಸೆಳೆಯುತ್ತಿದೆ.

ಶಕ್ತಿ ದೇವತೆಯ ಹಬ್ಬ

ಒಂಬತ್ತು ದಿನ ಒಂದೊಂದು ಶಕ್ತಿ ದೇವತೆಯನ್ನು ಆರಾಧಿಸುವುದೇ ನವರಾತ್ರಿಯ ವಿಶೇಷ. ರಾಜ್ಯದಲ್ಲಿ ನಾಡಹಬ್ಬದಂತೆ ನವರಾತ್ರಿಯನ್ನು ಆಚರಿಸಲಾಗುತ್ತಿದ್ದರೆ, ಕರಾವಳಿಯಲ್ಲಿ ಮಂಗಳೂರು ದಸರಾ ಸ್ವರೂಪದಲ್ಲಿ ಸಂಭ್ರಮಿಸಲಾಗುತ್ತಿದೆ. ಶಕ್ತಿ ದೇವತೆಯ ಹಬ್ಬ ನವರಾತ್ರಿ ಉತ್ಸವ ಸೆ. 26 ರಿಂದ ಆರಂಭವಾಗಿದ್ದು, ದೇವಾಲಯಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಸಾವಿರಾರು ಜನಸಂದೋಹದ ಮಧ್ಯೆ ನಡೆಯುತ್ತಿರುವ ನವರಾತ್ರಿ ಮಹೋತ್ಸವ ಭಕ್ತ ಸಮೂಹಕ್ಕೆ ಹೊಸ ಚೈತನ್ಯ ಮೂಡಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next