ಶರದೃತು ಆರಾಧನೆಯ ಪರ್ವ. ಪುನರ್ಮನನ ಪುನರಾವೃತ್ತಿಯ ಕಾಲ. ದೇವಿಯ ಆರಾಧನೆಯೇ ಪ್ರಮುಖವಾದ ಸಾಧನೆಯಿಲ್ಲಿ. ದೈನಂದಿನ ಜೀವನ ಮತ್ತು ಶೈಕ್ಷಣಿಕ ಕಟ್ಟುಪಾಡುಗಳ ಜಂಜಾಟದ ನಡುವೆ, ಅಕ್ಟೋಬರ್ ತಿಂಗಳು ಒಂದು ಸಂಕ್ಷಿಪ್ತ ವಿರಾಮವನ್ನು ನೀಡುತ್ತದೆ. ಕುಟುಂಬ, ಸ್ನೇಹಿತ ಮತ್ತು ಪ್ರೀತಿಪಾತ್ರರೊಂದಿಗೆ ಸಮಯವನ್ನು ಕಳೆಯಲು, ಅನೇಕರಿಗೆ ತಮ್ಮ ಊರುಗಳಿಗೆ ಭೇಟಿ ನೀಡಲು ಅವಕಾಶವನ್ನು ನೀಡುತ್ತದೆ. ಅಕ್ಟೋಬರ್ ಬಗ್ಗೆ ಯೋಚಿಸಿದಾಗ, ತಕ್ಷಣಕ್ಕೆ ನೆನಪಿಗೆ ಬರುವುದೇ ‘ದಸರಾ ರಜಾದಿನ’ ಅಥವಾ ಸರಳವಾಗಿ ‘ಅಕ್ಟೋಬರ್ ರಜಾದಿನ’. ಕರ್ನಾಟಕದ ಮಟ್ಟಿಗೆ ಇದು ನಾಡಹಬ್ಬ.
ನವರಾತ್ರಿ ಮತ್ತು ದಸರಾ ಹಬ್ಬಗಳ ಆಚರಣೆಯು ವಿಭಿನ್ನತೆಯನ್ನು ಪಡೆದುಕೊಂಡಿದೆ. ಪ್ರತಿ ಪ್ರದೇಶವೂ ತನ್ನದೇ ಆದ ವಿಶಿಷ್ಟ ಆಚರಣೆಯನ್ನು ಹೊಂದಿದೆ. ನವರಾತ್ರಿದಸರಾ ಎಂದರೆ ಮೈಸೂರೇ ಎನ್ನುವಷ್ಟರ ಮಟ್ಟಿಗೆ ನಾಡಹಬ್ಬದ ವೈಭವವು ದೇಶಾದ್ಯಂತ ಪ್ರತಿಧ್ವನಿಸುತ್ತದೆ. ದಕ್ಷಿಣ ಕರ್ನಾಟಕದ ಹೃದಯಭಾಗವಾದ ತುಳುನಾಡಿನಲ್ಲಿ ನಡೆಯುವ ನವರಾತ್ರಿ ಉತ್ಸವವು ಶಕ್ತಿಯ ಆರಾಧನೆ ಭಕ್ತಿಯೊಂದಿಗೆ ಸಾಧಿಸಿ ಆಧ್ಯಾತ್ಮಿಕ ಸಂಪರ್ಕವನ್ನು ಬೆಳೆಸುತ್ತದೆ.
ತುಳುನಾಡಿನಲ್ಲಿರುವ ದುರ್ಗೆಯರ ಮಂದಿರಗಳಲ್ಲಿ ಒಂಬತ್ತೂ ದಿನಗಳ ಆರಾಧನೆ ರೂಢಿಯಲ್ಲಿದೆ. ಅದರ ಜೊತೆಗೆ ಶಾರದಾ ದೇವಿಯ ವಿಗ್ರಹ ಸ್ಥಾಪನೆ ಆರಾಧನೆಯೂ ಪ್ರಚಲಿತದಲ್ಲಿದೆ. ಶಾಲೆಯಲ್ಲಿ ಶಾರದಾಪೂಜೆಯೂ ಆಯೋಜನೆಯಾಗುತ್ತದೆ. ದಸರಾ ವಿರಾಮದ ಆಗಮನವು ಅನೇಕರಿಗೆ ಅಳಿಸಲಾಗದ ಬಾಲ್ಯದ ನೆನಪನ್ನು ರೂಪಿಸುವುದರೊಂದಿಗೆ, ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳ ಮುಕ್ತಾಯವನ್ನು ಕುತೂಹಲದಿಂದ ನಿರೀಕ್ಷಿಸುತ್ತಾರೆ.
ಶಾರದಾ ದೇವಿಯು ಜ್ಞಾನ, ಬುದ್ಧಿಶಕ್ತಿ, ಸಂಗೀತ ಮತ್ತು ಕಲೆಯ ಸಾಕಾರರೂಪ. ಈ ಹಬ್ಬದ ಸಮಯದಲ್ಲಿ, ಅನೇಕ ಭಕ್ತರು ಹುಲಿ, ಸಿಂಹ, ಕರಡಿ ಮುಂತಾದ ಹಲವು ವೇಷಭೂಷಣಗಳನ್ನು ಧರಿಸಿ ದೇವಿಯ ಸಮ್ಮುಖದಲ್ಲಿ ಸೊಗಸಾಗಿ ಭಕ್ತಿಯಿಂದ ಕುಣಿಯುವುದು ನೋಡುವುದೇ ಚೆಂದ. ಮಂಗಳೂರಿನ ಕುದ್ರೋಳಿಯ ಒಂಬತ್ತೂ ದಿನಗಳ ನವದುರ್ಗೆಯರ ಆರಾಧನೆ, ವೆಂಕಟರಮಣದ ಶಾರದಾದೇವಿಯ ಅನವರತ ಅವತಾರಗಳು ಕಣ್ಮನಸೆಳೆದು ಭಕ್ತಿಯನ್ನು ಉಕ್ಕಿಸುತ್ತದೆ. ಮಂಗಳೂರಿನ ವೆಂಕಟರಮಣ ಶಾರದೋತ್ಸವಕ್ಕಂತೂ ನೂರಾಒಂದರ ಹಬ್ಬ. ದುರ್ಗೆಯರ ಆರಾಧನೆಗೆ ಹುಲಿವೇಷದ ಮೆರುಗು. ಊರಿನ ಬೀದಿಗಳಲ್ಲಿ ಮಾರ್ನೆಮಿಯ ವೇಷಗಳು, ಹುಲಿವೇಷದ ತಾಸೆ ಸದ್ದುಗಳಿಂದ ತುಂಬಿರುತ್ತದೆ.
ಹುಲಿವೇಷದ ತಾಸೆಯ ಶಬ್ದ ಕೇಳಿದ ತಕ್ಷಣವೇ, ಆ ಹುಲಿವೇಷ ತಂಡವು ನಮ್ಮ ಮನೆಗೆ ಬರಲಿ ಎಂದು ಮನೆಯ ಕಿಟಕಿಯಿಂದ ಅವರು ಬರುವುದನ್ನು ಕಾದು ಕೂತದ್ದು ಹಾಗೂ ಅವರೊಂದಿಗೆ ನೃತ್ಯ ಮಾಡಿದ್ದು ಇವೆಲ್ಲಾ ಖಂಡಿತಾ ಅನೇಕರ ಜೀವನದ ಮರೆಯಲಾಗ ನೆನಪಾಗಿವೆ. ನಮ್ಮ ಪುಸ್ತಕವನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡಿದ್ದು, ವಾಹನ ಪೂಜೆ ನಡೆಯುವಾಗ ಮನೆಯವರ ದೊಡ್ಡ ವಾಹನದ ಮಧ್ಯ ನಮ್ಮ ಚಿಕ್ಕ ಸೈಕಲ್ ನಿಲ್ಲಿಸಿ ಅದರ ಪೂಜೆ ಮಾಡಿದ್ದು, ಹೊಸ ಬಟ್ಟೆ ಧರಿಸಿ ಅದರ ಮೇಲೆ ಕೇಸರಿ ಶಾಲು ಹಾಕಿ ಊರಿಡಿ ತಿರುಗಾಡಿದ್ದು ಇವೆಲ್ಲಾ ಬಾಲ್ಯದ ಇನ್ನೊಂದು ನೆನಪು.
ನವರಾತ್ರಿಯ ದಿನಗಳಲ್ಲಿ, ಸಮಯವು ಕಾಡು ಕುದುರೆಯಂತೆ ಧಾವಿಸುತ್ತದೆ, ಆದರೂ, ಅಂತಿಮ ದಿನವು ಅವಸರದಿಂದ ಸಮೀಪಿಸುತ್ತದೆ. ವಿಜಯದಶಮಿ, ವಿಜಯದ ದಿನ, ಶಾರದಾ ದೇವಿಯ ಭವ್ಯ ಶೋಭಾಯಾತ್ರೆಯಲ್ಲಿ ಕೊನೆಗೊಳ್ಳುತ್ತದೆ. ಸಾಕಷ್ಟು ಟ್ಯಾಬ್ಲೋಗಳು ಈ ದೃಶ್ಯವನ್ನು ಅಲಂಕರಿಸುತ್ತವೆ. ದೇವಿಯ ವಿಗ್ರಹವನ್ನು ಪಲ್ಲಕ್ಕಿಯಲ್ಲಿರಿಸಿ ವಾದ್ಯಗೋಷ್ಠಿಯ ತಲ್ಲೀನತೆಯಲ್ಲಿ ನಡೆದು ಸಾಗುವ ಆನಂದವೇ ಬೇರೆ. ಆದಾಗ್ಯೂ, ಶಾರದಾ ದೇವಿಯ ವಿಗ್ರಹದ ವಿಸರ್ಜನೆಯ ಸಮಯ ಬರುತ್ತಿದ್ದಂತೆ, ಮೌನವಾದ ಗಂಭೀರತೆಯು ಇಳಿಯುತ್ತದೆ. ತಾಯಿ ಶಾರದಾ ದೇವಿಯ ಶಾಂತನೋಟದಲ್ಲಿ ಭಕ್ತರು ವಿಸರ್ಜನೆಗೆ ಮುನ್ನ ಮ್ಲಾನವಾಗವುದು ಸಾಮಾನ್ಯ. ಈ ಸೊಗಸಾದ ಘಟನೆ ಮತ್ತೊಮ್ಮ ಜೀವನವನ್ನು ಅಲಂಕರಿಸಲು ಇನ್ನೂ ಒಂದು ವರ್ಷ ಕಾಯಬೇಕು ಎಂದಾಗ ಹೃದಯ ಭಾರವಾಗುವುದು ಸಹಜ.
ಅಲ್ಲಿದ್ದು ಅದನ್ನು ಹತ್ತಿರದಿಂದ ಅನುಭವಿಸುವುದು ದೂರದ ದೇಶದಿಂದ ನೋಡುವುದಕ್ಕಿಂತ ಸಂಪೂರ್ಣವಾಗಿ ವಿಭಿನ್ನವಾಗಿವೆ. ಎಲ್ಲವನ್ನು ಬೆಳಗುವುದು ಸಾನ್ನಿಧ್ಯವಲ್ಲವೇ? ಕರುಣಾಮಯಿ ಶಕ್ತಿ ದೇವತೆಯ ದಯೆಯಿಂದ ಇಡೀ ಮಾನವಕುಲಕ್ಕೆ ಜ್ಞಾನ, ಶಕ್ತಿ ದೊರೆಯಲಿ, ಪ್ರಗತಿಯ ಹಾದಿಯನ್ನು ಬೆಳಗಿಸಲಿ. ಈ ನವರಾತ್ರಿಯ ಶಕ್ತಿಯ ಆರಾಧನೆಯಿಂದ ಸಂತೋಷ ಮತ್ತು ಸಮೃದ್ಧಿ ಮೇಲುಗೈ ಸಾಧಿಸಲಿ. ನಿಮಗೆ ನವರಾತ್ರಿಯ ಶುಭಾಶಯಗಳು!
ವಿಟ್ಲ ತನುಜ್ ಶೆಣೈ,
ಚೆಲ್ಟೆನ್ಹ್ಯಾಮ್