ನವರಾತ್ರಿ ಭಾರತದ ದೊಡ್ಡ ಹಬ್ಬಗಳಲ್ಲೊಂದು. ಒಂಬತ್ತು ದಿನದ ದುರ್ಗೆ, ಮಾ ಶಕ್ತಿ, ಲಕ್ಷ್ಮೀ, ಸರಸ್ವತಿಯ ಪೂಜೆಯೇ ಮುಖ್ಯವಾಗಿದ್ದು, ಇದನ್ನು ಭಾರತದ ಹೆಚ್ಚಿನ ರಾಜ್ಯಗಳಲ್ಲಿ ಆಚರಿಸುತ್ತಿದ್ದರೂ, ಮಹಾರಾಷ್ಟ್ರ, ಗುಜರಾತ್, ಪಶ್ಚಿಮಬಂಗಾಲದಲ್ಲಿನ ಜನರ ಸಂಭ್ರಮ ಹೇಳತೀರದ್ದು. ನಾನು ಹಲವು ಊರು, ದೇಶ ತಿರುಗಿದಾಗ ನವರಾತ್ರಿಯ ಸಮಯದಲ್ಲಿ ದಾಂಡಿಯ, ಗರ್ಬಾ ಕುಣಿದೋ, ರಸಗುಲ್ಲ, ಸಂದೇಶ್ ತಿಂದೋ ಸಂಭ್ರಮಿಸಿದರೂ ಮನಸ್ಸು ಮಾತ್ರ ನನ್ನ ಬಾಲ್ಯದ ಊರಾದ ಕುಂದಾಪುರವನ್ನು ಕ್ಷಣಕ್ಷಣಕ್ಕೂ ನೆನೆಯದಿರುವುದಿಲ್ಲ.
ನಮ್ಮೂರಲ್ಲಂತೂ ಇಡೀ ಊರಿಗೆ ಊರೇ ಪಾಲ್ಗೊಳ್ಳುವ ನವರಾತ್ರಿ ಪೂಜೆಯ ತಯಾರಿ ಸುಮಾರು ಒಂದು ವಾರದ ಮೊದಲೇ ಶುರು. ತೆಂಗಿನ ಗರಿಯ ಚಪ್ಪರ, ದುರ್ಗಾ ದೇವಿ (ಅಮ್ಮನವರೆಂದು ಕರೆಯುತ್ತಿದ್ದೆವು)ಯನ್ನು ಕೂರಿಸಲು ಪೀಠ, ರಾಗಿ ಹುಲ್ಲಿನ ಹಾಸು, ಲೈಟಿಂಗ್ ಮತ್ತು ದೇವಿಯ ಸುತ್ತ ವಿವಿಧ ದೃಶ್ಯಗಳು- ಹೀಗೆ ಎಲ್ಲದರ ತಯಾರಿಯೇ ಚೆಂದ. ಯಾರೂ ನೋಡಬಾರದೆಂದು ಎದುರಿನಲ್ಲೊಂದು ಬಟ್ಟೆ ಕಟ್ಟಿ ಒಳಗೆ ಕೆಲಸ ಮಾಡುತ್ತಿದ್ದರೆ ನಾವು ಶಾಲೆಗೆ ಹೋಗುವ ಮಕ್ಕಳು ಸ್ವಲ್ಪ ಬಟ್ಟೆ ಸರಿಸಿ ಮುಖವನ್ನು ಒಳಗೆ ತೂರಿಸಿ ಒಳಗೇನಿದೆ ಎಂದು ಇಣುಕಿ ನೋಡುವುದು ಸಾಮಾನ್ಯವಾಗಿತ್ತು, ಇಣುಕುವ ಮಕ್ಕಳ ಸೈನ್ಯವನ್ನು ಓಡಿಸುವುದೂ ಅಷ್ಟೇ ಸಾಮಾನ್ಯವಾಗಿತ್ತು. ಅಲ್ಲದೇ ನನ್ನೂರಿನ ಇನ್ನೊಂದು ವಿಶೇಷವೆಂದರೆ ಒಂಬತ್ತು ದಿನವೂ ಹುಡುಗರು, ಗಂಡಸರು ತರತರದ ವೇಷಗಳನ್ನು ಹಾಕಿಕೊಂಡು ಮನೆಮನೆಗೆ ಹೋಗಿ ದುಡ್ಡನ್ನು ಕೇಳುವುದು. ಈ ಸಮಯದಲ್ಲಿ ಊರಿಗೆ ಬಂದಿರೆಂದರೆ ಯಾವ ದಾರಿಯಲ್ಲಿ ನೀವು ನಡೆದರೂ, ಯಾವ ತಿರುವಿನಲ್ಲಿ ತಿರುಗಿದರೂ ತರತರಹದ ವೇಷಗಳು ನಿಮ್ಮ ಎದುರಾಗುವವು. ಕೆಲವರು ಪಾರಂಪರಿಕವಾಗಿ ವೇಷ ಹಾಕಿಕೊಂಡು ಬರುತ್ತಿದ್ದರೆ, ಇನ್ನು ಕೆಲವರು ವೇಷ ಹಾಕುವ ಹರಕೆಯೂ ಹೊರುವುದಿದೆಯಂತೆ : `ಗಂಡಿಗೆ ಜೋರ್ ಹುಷಾರಿಲ್ಲ, ತಾಯಿ ನೀ ನನ್ನ ಮಗನ್ನ ಗುಣ ಮಾಡ್ರೆ ನಾ ವೇಷ ಹಾಕಸ್ಥೆ’. ಮಗ ಹುಷಾರಾದರೆ ಆ ವರ್ಷ ಮಗನು ವೇಷ ಹಾಕುವುದು ಗ್ಯಾರಂಟಿ. ಇನ್ನು ಕೆಲಸವಿಲ್ಲದವರು ಜೀವನೋಪಾಯಕ್ಕಾಗಿ ವೇಷ ಹಾಕಿಕೊಂಡು ಮನೆಮನೆಗೆ, ಅಂಗಡಿಗಳಿಗೆ ಹೋಗಿ ದುಡ್ಡು ಕೇಳುವವರೂ ಇದ್ದಾರೆ.
ಆರು ವರ್ಷದಿಂದ ಹಿಡಿದು ಅರವತ್ತು ವರ್ಷದವರೂ ವೇಷ ಹಾಕುವುದುಂಟು, ಯಾವ ವೇಷವೆಂದು ಕೇಳಬೇಡಿ, ಎಲ್ಲವೂ ಇದೆ, ಪೇಪರ್ ಹುಡುಗ, ಹಾಲು ಮಾರುವವ, ಹುಚ್ಚ , ವೈದ್ಯ, ವಕೀಲ ವೇಷದಿಂದ ಹಿಡಿದು, ಪ್ರಾಣಿಗಳನ್ನೂ ಬಿಡದೆ ಕೋತಿ, ಕರಡಿ, ಹುಲಿ, ಸಿಂಹ, ನಂಬಿದರೆ ನಂಬಿ ಬಿಟ್ಟರೆ ಬಿಡಿ, ಕಿವಿಯ ಕುಗ್ಗೆ ತೆಗೆಯುವವನ ವೇಷವೂ ಇದೆ. ಅತೀ ಸುಲಭದ ವೇಷವೆಂದರೆ ಪೇಪರ್ ಮಾರುವವನದ್ದು, ಪ್ಯಾಂಟೋ, ಚೆಡ್ಡಿಯೋ ಹಾಕಿಕೊಂಡು, ಮೇಲೊಂದು ಶರ್ಟು, ಮುಖಕ್ಕೊಂದಿಷ್ಟು ಬಣ್ಣ ಹಾಕಿ, ಕೈಲೊಂದಿಷ್ಟು ಪೇಪರ್ ತಿರುಗಿಸುತ್ತ, `ಹ್ವಾಯ್… ದಿವ್ಸ ಪೇಪರ್ ಹಾಕ್ತೆ, ದುಡ್ಡ ಕೊಡೆª ಮಸ್ತ್ ದಿವ್ಸ ಅಯ್ತ… ಕೊಡಿ ಕಾಂಬಾ’ ಎನ್ನುತ್ತ ದುಡ್ಡಿಗಾಗಿ ಕೈ ಮುಂದೆ ಮಾಡುತ್ತಾರೆ. ವೇಷ ಬಂತೆಂದರೆ ಒಂದು ಹಿಂಡು ಮಕ್ಕಳೂ ಅವುಗಳ ಹಿಂದೆ. ನವರಾತ್ರಿಯ ಮೊದಲ ದಿನದ ಮೊದಲು ಬರುವ ವೇಷ ನಾರದ, ಕುತ್ತಿಗೆಯಲ್ಲಿ ತಂಬೂರಿ, ಕೈಯಲ್ಲಿ ತಾಳ, ಕಾಲಲ್ಲಿ ದಪ್ಪ ಗೆಜ್ಜೆ. “ನಾರಾಯಣ ನಾರಾಯಣ’ ಎನ್ನುತ್ತ ಮನೆಗೆ ಬಂದನೆಂದರೆ ನವರಾತ್ರಿ ಬಂದಿತಂತೆಯೇ! `ಹೊಯ… ನೀವ್, ಈಗ ಎಲ್ಲಿಂದ ಬಂದದ್ª? ದಾರಿ ಮೇಲ… ಯಾರ್ಯಾರ್ ಸಿಕ್ಕಿದ್ರ್?’ ಎನ್ನುವ ಪ್ರಶ್ನೆ ಹಾಕದೆ ಬಿಡುವವಳಲ್ಲ ನಾನು, ನಾರದನಿಂದ ಬರುವ ಉತ್ತರ, `ದೇವಲೋಕದಿಂದ ಈಗಷ್ಟೇ ಭೂಮಿಗೆ ಬಂದೆ, ದಾರೀಲಿ ರಾಮ, ಕೃಷ್ಣ, ವಿಷ್ಣು ಎಲ್ಲಾ ಕೂತಿದ್ರ, ಭೂಮಿಗೆ ಹೊತಾ ಇದ್ರಿಯಾ ನಾರದ್ರೇ, ಗೀತು ಹೆಣ್ಣಿನ ಮಾತಾಡಸ್ಕಂಡ ಬನ್ನಿ ಅಂದ್ರ’ ಅಂದಾಗ ಅದು ಸುಳ್ಳೆಂದು ಗೊತ್ತಿದ್ದರೂ ನನ್ನ ಮುಖವಂತೂ ಊರಗಲವಾಗುವುದು. ಡ್ಯಾನ್ಸ್ ಪಾರ್ಟಿ, ಹುಲಿ ವೇಷಗಳ ಗತ್ತೇ ಬೇರೆ, ದೊಡ್ಡ ಬ್ಯಾಂಡ್ ಸೆಟ್ಟಿನೊಂದಿಗೆ 7-8 ವೇಷಧಾರಿಗಳ ಗ್ರೂಪು ಮಾಡಿಕೊಂಡು ಮನೆ ಮನೆಗೆ, ಅಂಗಡಿಗಳಿಗೆ ಹೊರಡುತ್ತಿದ್ದವು. ಅಮ್ಮನಂತೂ ವೇಷಗಳಿಗೆ ಕೊಡಲು ನವರಾತ್ರಿಗೆ 2-3 ತಿಂಗಳಿರುವಾಗಲೇ ಚಿಲ್ಲರೆ ಒಟ್ಟು ಮಾಡಲು ಶುರು ಮಾಡುತ್ತಾರೆ. ಆಗ ಚಿಕ್ಕಪುಟ್ಟ ವೇಷಗಳಿಗೆ ನಾಲ್ಕಾಣೆ (25 ಪೈಸೆ) ಕೊಟ್ಟರೂ ಸಾಕಿತ್ತು, ಹುಲಿ ವೇಷದ ಗ್ರೂಪುಗಳಿಗೆ ಕಡಿಮೆಯೆಂದರೂ 10 ರೂಪಾಯಿ ಕೊಡಬೇಕಿತ್ತು, ಈಗ ನೂರು ರೂಪಾಯಿ ಕೊಟ್ಟರೂ ವಾಪಸು ಕೊಟ್ಟು ಹೋಗುತ್ತಾರೆಂದು ಸುದ್ದಿ.
ಚಿಕ್ಕವಳಿದ್ದಾಗ ನಾನಂತೂ ಈ ವೇಷಗಳ ಕಟ್ಟಾ ಅಭಿಮಾನಿಯಾಗಿದ್ದೆ , ಮನೆಗೆ ಬಂದ ವೇಷಗಳ ಹಿಂದೆ ಹಿಂದೆ ನಡೆಯುತ್ತ ಹಲವು ಮನೆಗಳಿಗೆ ಹೊಕ್ಕು ಹೊರಡುತ್ತಿದ್ದೆ . ಇನ್ನು ಹುಲಿ ವೇಷ, ಡ್ಯಾನ್ಸ್ ಪಾರ್ಟಿ ವೇಷಗಳ ಹಿಂದೆ ಹಿಂದೆ ಹೋಗುತ್ತ ಅರ್ಧ ಊರೇ ತಿರುಗಾಡುತ್ತಿದ್ದೆ. ನವರಾತ್ರಿಯ ಹಳದಿ ಬಣ್ಣದ ಪಟ್ಟೆ ಪಟ್ಟೆಯ ಎರಡು ಕಾಲಿನ ಹುಲಿಗಳಲ್ಲಿ ಕೆಲವು ಮರಿ, ಕೆಲವು ಮುದಿ, ಮತ್ತೆ ಕೆಲವು ಡೊಳ್ಳು ಹೊಟ್ಟೆಯವು. ಹುಲಿಗಳು ಬ್ಯಾಂಡಿಗೆ ಸರಿಯಾಗಿ ಕುಣಿಯುತ್ತಿದ್ದರೆ, ನನಗೂ ಮನಸ್ಸಿನಲ್ಲೇ ಸ್ಫೂರ್ತಿ ಉಕ್ಕುವುದಿದೆ, ನನಗೂ ಕುಣಿಯಲು ಮನಸ್ಸಿದ್ದರೂ ಹೆಣ್ಣು ಮಕ್ಕಳೂ ಕುಣಿಯುವುದಿದೆಯೇ? ಮೈಮೇಲೆ ಕಾಗೆ ಬಂಗಾರವನ್ನು ಅಂಟಿಸಿಕೊಂಡ ಚಿಂಗಾರಿ ಹುಲಿಗಳೇ ನವರಾತ್ರಿಯ ಹೀರೋಗಳು. ಹುಲಿಗಳು ಕುಣಿಯುತ್ತಿರಬೇಕಾದರೆ ಡೊಳ್ಳು ಹೊಟ್ಟೆಯವನೊಬ್ಬ ಕೋವಿಯಿಂದ “ಡಂ ಡಂ’ ಎನ್ನುತ್ತ ಸದ್ದು ಮಾಡಿ ಹುಲಿಗಳನ್ನು ಹೊಡೆಯುವ ನಾಟಕ, ಹುಲಿಗಳು ಡ್ಯಾನ್ಸ್ ಮಾಡುತ್ತ ಮಾಡುತ್ತ ನೆಲದ ಮೇಲಿಟ್ಟಿರುವ ಹತ್ತರ ನೋಟನ್ನು ಬಾಯಲ್ಲಿ ಕಚ್ಚುವ ಆಟ ಎಲ್ಲವೂ ಊರವರಿಗಿಷ್ಟವಾದ ಕಸರತ್ತುಗಳು. ಇನ್ನು ಡ್ಯಾನ್ಸ್ ಪಾರ್ಟಿಯಲ್ಲಿ ಡೊಳ್ಳು ಹೊಟ್ಟೆಯ ಹುಡುಗ, ಸ್ಕರ್ಟ್ ಹಾಕಿದ ಹುಡುಗಿಯ ವೇಷ ಕೈ ಕೈ ಹಿಡಿದು ಡ್ಯಾನ್ಸ್ ಮಾಡುತ್ತಿರಬೇಕಾದರೆ ಸುತ್ತ ನೆರೆದಿರುವವರ ಶಿಳ್ಳೆಗಳ ಶಬ್ದ ತಾರಕಕ್ಕೇರುತ್ತದೆ. ನವರಾತ್ರಿಯ ಒಂದೊಂದು ದಿನವೂ ಸಾಗಿದಂತೆ ವೇಷಗಳ ಸಂಖ್ಯೆ ಹೆಚ್ಚಿ ಕೊನೆಯ ದಿನ ಎಲ್ಲಾ ವೇಷಗಳು ಒಟ್ಟಾಗಿ ಮೆರವಣಿಗೆಯಲ್ಲಿ ದುರ್ಗಾ ದೇವಿಯೊಂದಿಗೆ ಸಾಗಿ ಊರಿಗೆ ಒಂದು ಸುತ್ತು ಬರುತ್ತಿರಬೇಕಾದರೆ ಅದನ್ನು ನೋಡಲು ನಾವೆಲ್ಲ ಪೇಟೆಯ ಎತ್ತರದ ಕಟ್ಟಡದ ಮಾಳಿಗೆಯ ಮೇಲೆ ನಿಲ್ಲುತ್ತಿದ್ದೆವು. ಎಲ್ಲವೂ ಸಡಗರ, ಎಲ್ಲವೂ ಚೆಂದ- ಟೀವಿ, ಕಂಪ್ಯೂಟರ್, ವಾಟ್ಸಾಪ್, ಫೇಸ್‌ಬುಕ್ ಇಲ್ಲದ ಆ ಕಾಲದಲ್ಲಿ.
ಸುಮಾರಾಗಿ ಸೆಪ್ಟಂಬರ್ ಕೊನೆ, ಇಲ್ಲವೇ ಅಕ್ಟೋಬರ್‌ನಲ್ಲಿ ಬರುವ ನವರಾತ್ರಿ ಹಬ್ಬ , ಶಾಲೆಗೆ ಆಗಷ್ಟೇ ಪರೀಕ್ಷೆ ಮುಗಿದು ದಸರಾ ರಜೆ ಶುರುವಾಗಿರುತ್ತದೆ. ನವರಾತ್ರಿ ಬಂತೆಂದರೆ ನಮ್ಮ ಮನೆಯಿಂದ ಸ್ವಲ್ಪ ದೂರಕ್ಕೆ ಮೂರು ರಸ್ತೆ ಕೂಡುವಲ್ಲಿ ನಿಂತು ಯಾವ ವೇಷ ಎಲ್ಲಿಗೆ ಹೋಗುತ್ತಿದೆ, ಎಲ್ಲಿಂದ ಬರುತ್ತಿದೆಯೆಂಬ ಲೆಕ್ಕ ಹಾಕುತ್ತಿದ್ದೆ , ಹತ್ತಿರ ಬಂದ ವೇಷಗಳನ್ನು “ನಮ್ಮ ಮನೆಗೆ ಬನ್ನಿ, ನಮ್ಮ ಮನೆಗೆ ಬನ್ನಿ, ಇಲ್ಲೇ ಹತ್ತರ ಇತ್ತ ನಮ್ಮನೆ, ಅಮ್ಮ ದುಡ್ಡ ಒಟ್ಟ ಮಾಡಿ ಇಟ್ಟಿದ್ರ, ಬಂದ ಕುಣಿದ್ರೆ ಸಾಕ್, ದುಡ್ಡ ಕೊಡತ್ರ’ ಎನ್ನುತ್ತ ನಮ್ಮ ಮನೆಗೂ ಕರೆದುಕೊಂಡು ಹೋಗುತ್ತಿದ್ದೆ. ವೇಷಗಳಿಗೆ ದುಡ್ಡು ಕೊಡಬೇಕಾಗುತ್ತದೆಂದು ಎದುರುಗಡೆ ಬಾಗಿಲಿಗೆ ಬೀಗ ಹಾಕಿ ಹಿಂದುಗಡೆ ಬಾಗಿಲಿನಿಂದ ಓಡಾಡುವವರೂ ಇರುವಾಗ, ನಾನು ವೇಷಗಳನ್ನು ಮನೆಗೆ ಕರೆದುಕೊಂಡು ಹೋಗುವ ಪರಿಯಿಂದ ಸ್ವಲ್ಪ ಫೇಮಸ್ ಆಗಿದ್ದೆ . ಕಾಲೇಜಿಗೆ ಹೋಗಲು ಶುರುಮಾಡಿದಾಗಲೂ ನನ್ನನ್ನು ಗುರುತಿಸಿ ಜನರು, `ಹೊಯ… ಈಗ ವೇಷನ ಮನೆಗ್ ಬನ್ನಿ. ಅಂತ ಕರ್ಕ ಹೊತಿಲ್ಯ? ನೀವ್ ಸಣ್ಣದಿಪ್ಪೊತ್ತಿಗೆ ನಮ್ಮನ್ನೆಲ್ಲ ಮನೆಗ್ ಬನ್ನಿ ಬನ್ನಿ ಅಂತ್ ಕರೀತಿದ್ರಿ, ನೆನಪಿತಾ ನಿಮಗೆ?’ ಎಂದಾಗ ನಾನಂತೂ ನಾಚಿ ಹೆಚ್ಚು ಮಾತಾಡದೆ ಅಲ್ಲಿಂದ ಕಂಬಿ ಕೀಳುತ್ತಿದ್ದೆ .
ಹಲವು ವರ್ಷಗಳ ಕಾಲ ಬೇರೆ ದೇಶದಲ್ಲಿದ್ದು ಬೆಂಗಳೂರಿಗೆ ಹಿಂತಿರುಗಿದೆ, ನವರಾತ್ರಿ ಹಬ್ಬದಂದೂ ಕುಂದಾಪುರಕ್ಕೂ ಕಾಲಿಟ್ಟೆ. ನಾ ಕಲಿತ ಶಾಲೆ, ಹೈಸ್ಕೂಲು, ಕಾಲೇಜು ಎಲ್ಲವೂ ದೊಡ್ಡದಾಗಿದ್ದು, ಊರಿನಲ್ಲಿ ಹಲವು ಬಹು ಮಹಡಿ ಕಟ್ಟಡಗಳು ತಲೆ ಎತ್ತಿದ್ದವು. ಆದರೆ, ಊರಿನಲ್ಲಿ ಅಮ್ಮ, ಅಪ್ಪ, ನಾ ಆಡಿ ಬೆಳೆದ ಮನೆಯಿಲ್ಲದೆ ಅನಾಥಳೆಂದೆನಿಸಿತು. ನಾ ಚಿಕ್ಕವಳಿದ್ದಾ ಗ ಚಿಕ್ಕವರಿದ್ದವರೆಲ್ಲ ದೊಡ್ಡವರಾಗಿದ್ದರು, ದೊಡ್ಡವರಿದ್ದವರೆಲ್ಲ ಮುದುಕರಾಗಿದ್ದರು, ಇಲ್ಲವೇ ಇಹಲೋಕದ ಯಾತ್ರೆ ಮುಗಿಸಿದ್ದರು, ನನ್ನ ಫ್ರೆಂಡ್ಸ್ … ಎಲ್ಲಾ ಮದುವೆಯಾಗಿ ಬೇರೆ ಬೇರೆ ಊರಿನಲ್ಲಿದ್ದರು, ನನ್ನನ್ನು ಗುರುತಿಸಿದವರೇ ಇಲ್ಲವೆನ್ನಬಹುದೊ ಏನೊ, ಇಲ್ಲ ನನಗೇ ಅವರನ್ನು ಗುರುತು ಹಿಡಿಯಲಾಗಲಿಲ್ಲ. ಕುಂದಾಪುರ ನನ್ನ ಹೆಸರಿಗಂಟಿಕೊಂಡಿದ್ದರೂ ನಾನು ಕುಂದಾಪುರದಿಂದ ಬಹಳ ದೂರವಾಗಿದ್ದೇನೆ ಅನ್ನಿಸಿತು, ನಾ ಆಡಿ ಬೆಳೆದ ಊರು ನನ್ನ ಗುರುತಿಸಲಿಲ್ಲ. ವೇಷಗಳ ಸಂಖ್ಯೆ ಬಹಳಷ್ಟು ಕಡಿಮೆಯಾಗಿದ್ದವು, ವೇಷಗಳಿಗೆ ಮೊದಲಿನ ಚೆಂದವೂ ಇರಲಿಲ್ಲ, ಇದಂತೂ ನನ್ನ ಅನಿಸಿಕೆಯಿರಬಹುದು.
ಸರಿ ಇನ್ನೇನು, ಊರಿಂದ ಹೊರಡಬೇಕೆಂದು ಕಾರು ಹತ್ತುವಾಗ ಹಿಂದಿನಿಂದ `ನಾರಾಯಣ ನಾರಾಯಣ’ ಎನ್ನುವುದು ಕೇಳಿಸಿತು, ತಿರುಗಿ ನೋಡಿದಾಗ ಅದೇ ಹಳೆಯ ನಾರದ ವೇಷಧಾರಿ ನನ್ನೆದುರು ನಿಂತಿದ್ದರು. ಬೆನ್ನು ಬಗ್ಗಿತ್ತು, ಕೆನ್ನೆಯೆಲ್ಲ ಒಳಗೆ ಹೋಗಿತ್ತು. “ವಕೀಲರ ಮಗಳ್ ಗೀತಮ್ಮ ಅಲ್ಲದಾ? ಗುರ್ತಾ ಸಿಕ್ಕತಾ ಅಮ್ಮ, ಏಗಳ್ ಬಂದದ್ª, ಹುಶಾರಿದ್ರಿಯಾ?’ ಎಂದಾಗ, “ಓಹೋ ನನ್ನನ್ನು ಗುರುತಿಸುವವರು ಇದ್ದಾ ರಿಲ್ಲಿ’ ಎನಿಸಿ ಕಣ್ಣಲ್ಲಿ ನೀರು ಬಂತು, ಪರ್ಸ್‌ನಿಂದ ಕೈಗೆ ಸಿಕ್ಕಿದ ನೋಟುಗಳನ್ನು ತೆಗೆದು ಕೊಡಲು ಮುಂದಾದರೆ, “ಬ್ಯಾಡಮ್ಮ, ಬಾಳ ವರ್ಷದ ಮ್ಯಾಲೆ ಊರಿಗೆ ಬಂದಿರಿ, ನಿಮ್ಮ ಕೈಯಿಂದ ದುಡ್ಡ ತೆಂಗತ್ತಿಲ್ಲ ಇವತ್ತ್’ ಎನ್ನುತ್ತಾ ಸೀನ, “ಗೀತಮ್ಮನಿಗೆ ಒಂದ ಬೊಂಡ ಕೆತ್ತಿ ಕೋಡ, ದುಡ್ಡ ನಾ ಕೊಡ್ತೆ’ ಎಂದ ನಾರದ ನನ್ನಣ್ಣನ ಸ್ಥಾನದಲ್ಲಿ ನಿಂತಿದ್ದ !
ಗೀತಾ ಕುಂದಾಪುರ