ಬಾಗಲಕೋಟೆ: ಜಿಲ್ಲೆಯಲ್ಲಿ ಮತ್ತೆ ಒಂದು ವರ್ಷದ ಮಗು ಸೇರಿದಂತೆ ಇಬ್ಬರು ಕೋವಿಡ್ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಮುಖರಾಗಿ, ಗುರುವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಗೊಂಡರು. ಈ ವರೆಗೆ 93 ಜನರು ಗುಣಮುಖರಾಗಿದ್ದು, ಸೋಂಕಿತರ ಸಂಖ್ಯೆ 112ಕ್ಕೆ ಏರಿಕೆಯಾಗಿದೆ.
ನವನಗರದ ಸೆಕ್ಟರ್ ನಂ.10ರ ನಿವಾಸಿ, ಮಹಾರಾಷ್ಟ್ರದಿಂದ ಮರಳಿದ್ದ 26 ವರ್ಷದ ಮಹಿಳೆ ಪಿ-5967 ಮತ್ತು ಅವರ 1 ವರ್ಷದ ಹೆಣ್ಣು ಮಗು ಪಿ-5966 ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಜಿಲ್ಲಾ ವೈದ್ಯಾಧಿಕಾರಿ ಡಾ| ಚಂದ್ರಕಾಂತ ಜವಳಿ ಗುಣಮುಖರಾದವರಿಗೆ ಪ್ರಮಾಣ ಪತ್ರ ವಿತರಿಸಿದರೆ, ಆಸ್ಪತ್ರೆ ಸಿಬ್ಬಂದಿ ಕೈಗಳಿಗೆ ಸೀಲ್ ಹಾಕಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು.
ಜಿಲ್ಲೆಯಿಂದ ಕಳುಹಿಸಲಾದ 187 ಸ್ಯಾಂಪಲ್‌ಗಳ ಪೈಕಿ 112 ನೆಗೆಟಿವ್ ಬಂದಿದ್ದು, 75 ವರದಿ ಬರಬೇಕಾಗಿದೆ. ಪ್ರತ್ಯೇಕವಾಗಿ 570 ಜನರ ಮೇಲೆ ನಿಗಾ ವಹಿಸಲಾಗುತ್ತಿದೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 9864 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು, ಈ ಪೈಕಿ 9629 ನೆಗೆಟಿವ್ ಬಂದಿವೆ. 112 ಜನರಿಗೆ ಸೋಂಕು ತಗುಲಿತ್ತು. ಅದರಲ್ಲಿ 93 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಇನ್ನೂ 18 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗುರುವಾರ ಮಹಾರಾಷ್ಟ್ರ ಮತ್ತು ಆಂಧ್ರದಿಂದ ತಲಾ ಒಬ್ಬರು ಜಿಲ್ಲೆಗೆ ಬಂದಿದ್ದು, ಆಂಧ್ರದಿಂದ ಬಂದವರಿಗೆ ಹೋಂ ಕ್ವಾರಂಟೈನ್ ಹಾಗೂ ಮಹಾರಾಷ್ಟ್ರದಿಂದ ಬಂದ ವ್ಯಕ್ತಿಗೆ ಸರ್ಕಾರಿ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಗೋವಾದಿಂದ ಬಂದ ವ್ಯಕ್ತಿಗೆ ಸೋಂಕು: ಗೋವಾದಿಂದ ಆಗಮಿಸಿದ್ದ ಬಾಗಲಕೋಟೆ ತಾಲೂಕಿನ ತಾಂಡಾದ 30 ವರ್ಷದ ಪುರುಷ ಪಿ-7823 (ಬಿಜಿಕೆ-112)ನಿಗೆ ಗುರುವಾರ ಸೋಂಕು ದೃಢಪಟ್ಟಿದೆ. ಈ ವ್ಯಕ್ತಿ ಗೋವಾದಿಂದ ಬಂದ ಬಳಿಕ ತಮ್ಮೂರಿಗೆ ತೆರಳದೇ ನೇರವಾಗಿ ಜಿಲ್ಲಾಸ್ಪತ್ರೆಗೆ ತೆರಳಿ, ತಾನು ಗೋವಾದಿಂದ ಬಂದಿದ್ದು, ಕೋವಿಡ್ ತಪಾಸಣೆ ಮಾಡಿ ಎಂದು ಕೇಳಿಕೊಂಡಿದ್ದರು. ಜಿಲ್ಲಾ ಕೋವಿಡ್-19 ಆಸ್ಪತ್ರೆಯ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದಿತ್ತು. ಬಳಿಕ ಆತನ ಗಂಟಲು ದ್ರವ ಬೆಂಗಳೂರಿಗೆ ಕಳುಹಿಸಲಾಗಿತ್ತು. ಅಲ್ಲಿಯೂ ಪಾಜಿಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.