Advertisement

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

02:27 PM Apr 08, 2022 | Team Udayavani |

ವೇದಾಂಗ ಜ್ಯೋತಿಷ್ಯದಲ್ಲಿ ನವಗ್ರಹಗಳಿಗಿಂತಲೂ ನಕ್ಷತ್ರಗಳಿಗೆ ಅತೀ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ. ಸಾಮಾನ್ಯವಾಗಿ ನಾವು ಜನ್ಮ ನಕ್ಷತ್ರವನ್ನು ಮಾತ್ರ ತಿಳಿದುಕೊಳ್ಳುತ್ತೇವೆ. ಜನ್ಮ ನಕ್ಷತ್ರವೆಂದರೆ ಒಂದು ವ್ಯಕ್ತಿಯ ಜನನ ಸಮಯದಲ್ಲಿ ಚಂದ್ರ ಯಾವ ನಕ್ಷತ್ರದಲ್ಲಿ ಇರುತ್ತದೆ ಮತ್ತು ಜನ್ಮ ರಾಶಿ ಅಂದರೆ ಆ ನಕ್ಷತ್ರ ಇರುವ ರಾಶಿ. ಅದೇ ಪ್ರಕಾರ ಇತರ ಗ್ರಹಗಳೂ ಕೂಡಾ ಜನನದ ಸಮಯದಲ್ಲಿ ಒಂದೊಂದು ನಕ್ಷತ್ರದಲ್ಲಿಯ, ಅದೇ ಪ್ರಕಾರ ಒಂದೊಂದು ರಾಶಿಯಲ್ಲಿಯೂ ಇರುತ್ತದೆ. ಜ್ಯೋತಿಷ್ಯದ ವಿಶ್ಲೇಷಣೆ ಮಾಡುವ ಸಂದರ್ಭದಲ್ಲಿ ಎಲ್ಲಾ ನಕ್ಷತ್ರಗಳನ್ನು ಪರಿಗಣನೆ ಮಾಡಲಾಗುತ್ತದೆ.

Advertisement

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯ, ಚಂದ್ರಾದಿಯಾಗಿ ರಾಹು ಕೇತು ತನಕ ನವಗ್ರಹಗಳಿಗೆ ಪ್ರಾಮುಖ್ಯತೆಯನ್ನು ಕೊಡುವ ರೀತಿಯಲ್ಲೇ ನಕ್ಷತ್ರಗಳಿಗೂ ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ. ಒಟ್ಟು 27 ನಕ್ಷತ್ರಗಳಿಗೆ. ಅದೇ ರೀತಿ 12 ರಾಶಿಗಳಿವೆ. ಈ 27 ನಕ್ಷತ್ರಗಳು, 12 ರಾಶಿಗಳಲ್ಲಿ ತಮ್ಮ ಸ್ಥಾನಗಳನ್ನು 3 ಭಾಗಗಳಾಗಿ ಪಡೆದುಕೊಂಡಿದೆ.

ಉದಾಹರಣೆಗೆ: ಮೇಷ, ವೃಷಭ, ಮಿಥುನ, ಕರ್ಕಾಟಕ ರಾಶಿಗಳಲ್ಲಿ ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ, ಮೃಗಶಿರಾ, ಆದ್ರಾ, ಪುನರ್ವಸು, ಪುಷ್ಯ, ಆಶ್ಲೇಷ.

ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಗಳಲ್ಲಿ, ಮಘಾ, ಪೂರ್ವ ಪಾಲ್ಗುಣಿ, ಉತ್ತರ ಪಾಲ್ಗುಣಿ, ಹಸ್ತ, ಚಿತ್ರ, ಸ್ವಾತಿ, ವಿಶಾಖ, ಅನುರಾಧ, ಜ್ಯೇಷ್ಠ,

ಧನು, ಮಕರ, ಕುಂಭ, ಮೀನ ರಾಶಿಗಳಲ್ಲಿ, ಮೂಲ, ಪೂರ್ವ ಆಷಾಢ, ಉತ್ತರ ಆಷಾಢ, ಶ್ರಾವಣ, ಧನಿಷ್ಠ, ಶತಭಿಷ, ಪೂರ್ವಭಾದ್ರ, ಉತ್ತರಭಾದ್ರ, ರೇವತಿ ನಕ್ಷತ್ರಗಳು ತಮ್ಮ ಸ್ಥಾನವನ್ನು ಪಡೆದುಕೊಂಡಿದೆ.

Advertisement

ಈಗ ನವಾಂಶದ ಬಗ್ಗೆ ತಿಳಿಯೋಣ:

ನವಾಂಶ ಅಂದರೆ 9 ಭಾಗ, ಸೌರವ್ಯೂಹವನ್ನು ಒಂದು ವೃತ್ತವನ್ನಾಗಿ ತೆಗೆದುಕೊಂಡು, ಅಂದರೆ 360 ಡಿಗ್ರಿ, ಅದರಲ್ಲಿ 12 ರಾಶಿಗಳು, ಪ್ರತಿ ರಾಶಿ 30 ಡಿಗ್ರಿ (360 % 12= 30 ಡಿಗ್ರಿ), 27 ನಕ್ಷತ್ರಗಳು (360 ಭಾಗಿಸು 27= 13 ಡಿಗ್ರಿ 20’) ಅಂದರೆ ಪ್ರತಿ ನಕ್ಷತ್ರದ ವಿಸ್ತಾರ 13 ಡಿಗ್ರಿ, 20 ನಿಮಿಷ.

ಪ್ರತಿ ನಕ್ಷತ್ರದ ವಿಸ್ತಾರವನ್ನು (13 ಡಿಗ್ರಿ, 20 ಮಿನಿಟ್) ನಾಲ್ಕು ಭಾಗ ಮಾಡಿದಾಗ ಪ್ರತಿ ಭಾಗ 3 ಡಿಗ್ರಿ, 20 ಮಿನಿಟ್ ಆಗುತ್ತದೆ. ಅದನ್ನು ಚರಣ ಎಂಬುದಾಗಿಯೂ, ಪಾದ ಎಂದೂ ಕರೆಯುತ್ತಾರೆ. ಅಂದರೆ ಒಂದು ಪಾದ 3 ಡಿಗ್ರಿ 20 ಮಿನಿಟ್.

ನಾಲ್ಕು ಪಾದ, = 13 ಡಿಗ್ರಿ 20 ಮಿನಿಟ್ ( 3ಡಿಗ್ರಿ 20 + 3 ಡಿಗ್ರಿ 20 + 3 ಡಿಗ್ರಿ 20 + 3 ಡಿಗ್ರಿ 20 ಮಿನಿಟ್ = 13 ಡಿಗ್ರಿ 20 ಮಿನಿಟ್). ಒಂದು ರಾಶಿ ಅಂದರೆ 30 ಡಿಗ್ರಿ, ಹಾಗಾದರೆ ಒಂದು ರಾಶಿಯಲ್ಲಿ 9 ಪಾದಗಳೂ (ಚರಣ, ಅಂಶ) ಇದೆ ಅಂತಾಯಿತು. (3 ಡಿಗ್ರಿ 20 ಮಿನಿಟ್ X9 = 30 ಡಿಗ್ರಿ).

ಅಂದರೆ ಮೇಷ ರಾಶಿಯಲ್ಲಿ..

ಅಶ್ವಿನಿ 4 ಭಾಗ (ಪಾದ, ಚರಣ)

ಭರಣಿ 4 ಭಾಗ (ಪಾದ, ಚರಣ)

ಕೃತಿಕ 1 ಭಾಗ (ಪಾದ, ಚರಣ)

ವೃಷಭ ರಾಶಿಯಲ್ಲಿ…

ಕೃತಿಕ 3 ಭಾಗ

ರೋಹಿಣಿ 4 ಭಾಗ

ಮೃಗಶಿರ 2 ಭಾಗ

ಮಿಥುನ ರಾಶಿಯಲ್ಲಿ…

ಮೃಗಶಿರ 2 ಭಾಗ

ಆದ್ರಾ 4 ಭಾಗ

ಪುನರ್ವಸು 3 ಭಾಗ

ಕರ್ಕಾಟಕ ರಾಶಿಯಲ್ಲಿ…

ಪುನರ್ವಸು 1 ಭಾಗ

ಪುಷ್ಯ 4 ಭಾಗ

ಅಶ್ಲೇಷ 4ಭಾಗ

ಮೇಷದಲ್ಲಿ 9 ನವಾಂಶ, ವೃಷಭದಲ್ಲಿ 9 ನವಾಂಶ, ಮಿಥುನದಲ್ಲಿ 9 ನವಾಂಶ, ಕರ್ಕಾಟಕದಲ್ಲಿ 9 ನವಾಂಶ. ಹೀಗೆ ಮುಂದುವರೆದು, ಸಿಂಹದಿಂದ ವೃಶ್ಚಿಕದವರೆಗೆ, ಮಘ ಆದಿಯಾಗಿ ಜ್ಯೇಷ್ಠವೂ, ಧನುದಿಂದ ಮೀನಾದವರೆಗೆ, ಮೂಲ ಆದಿಯಾದಿ ರೇವತಿ ನಕ್ಷತ್ರದ ಪ್ರತಿ ಪಾದವು ತಮ್ಮ ಸ್ಥಾನವನ್ನು ಪಡೆದುಕೊಂಡಿರುತ್ತದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ನಕ್ಷತ್ರ ಪಾದವು ವಿಶೇಷ ಸ್ಥಾನವನ್ನು ಪಡೆದುಕೊಂಡಿರುತ್ತದೆ. ನಕ್ಷತ್ರ ಪಾದದ ಆಧಾರದ ಮೇಲೆ ನವಾಂಶ ಕುಂಡಲಿಯನ್ನು ಮಾಡಲಾಗುತ್ತದೆ. ನವಾಂಶ ಕುಂಡಲಿಯು ಜನ್ಮ ಕುಂಡಲಿಯಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಗ್ರಹಗಳ ನಿಜವಾದ ಸಾಮರ್ಥ್ಯವನ್ನು ನೋಡಲು ನವಾಂಶ ಕುಂಡಲಿಯನ್ನು ಪರೀಕ್ಷಿಸಬೇಕಾಗುತ್ತದೆ.

ಉದಾಹರಣೆಗೆ, ಜನ್ಮ ಕುಂಡಲಿಯಲ್ಲಿ ಶನಿ ಮೇಷ ರಾಶಿಯಲ್ಲಿದ್ದರೆ, ಸಾಮಾನ್ಯವಾಗಿ ಶನಿದಶಾ(ಕಾಲ)ದಲ್ಲಿ ಅಶುಭ ಫಲಗಳನ್ನು ನಿರೀಕ್ಷಿಸಬಹುದಾಗಿದೆ. ಆದರೆ ನವಾಂಶ ಕುಂಡಲಿಯಲ್ಲಿ ಶನಿ ಒಂದು ವೇಳೆ ತುಲಾ ರಾಶಿಯಲ್ಲಿದ್ದರೆ, ಅತ್ಯಂತ ಶುಭ ಫಲಗಳನ್ನು ನಿರೀಕ್ಷಿಸಬಹುದಾಗಿದೆ. ಆದ ಕಾರಣ ಜ್ಯೋತಿಷ್ಯ ಶಾಸ್ತ್ರದಲ್ಲಿ ನವಾಂಶವು ಬಹಳ ಪ್ರಾಮುಖ್ಯತೆಯನ್ನು ಕೊಡಲಾಗಿದೆ. ಪ್ರತಿ ನಕ್ಷತ್ರವು 4 ಅಂಶಗಳೊಂದಿಗೆ, 27 ನಕ್ಷತ್ರವು 108 ಅಂಶಗಳನ್ನು ಹೊಂದಿದೆ. ಆದ ಕಾರಣ 108 ಅಥವಾ ಅಷ್ಟೋತ್ತರಿ (ಅಷ್ಟ ಶತ ಉತ್ತರಿ)ಗೆ ಬಹಳ ಪ್ರಾಮುಖ್ಯತೆಯನ್ನು ಜ್ಯೋತಿಷ್ಯದಲ್ಲಿ ನೀಡಲಾಗಿದೆ.

ರವೀಂದ್ರ.ಎ, ಬಿಎಸ್ಸಿ, ಎಲ್ ಎಲ್ ಬಿ

ಜ್ಯೋತಿಷ್ಯ ವಿಶ್ಲೇಷಕರು, ಜ್ಯೋತಿಷ್ಯ ವಿಶಾರದ

ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next