ಹುಬ್ಬಳ್ಳಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ಮಾಡಿದ್ದ ನವಲಗುಂದ ತಾಲೂಕಿನ ನಾವಳ್ಳಿ ಗ್ರಾಮದ ಚಿತ್ರಣ ಬದಲಾಗಿದ್ದು, ಅಂದು ನೀಡಿದ್ದ ಭರವಸೆಗಳ ಪೈಕಿ ಇನ್ನಷ್ಟು ಯೋಜನೆಗಳು ಅನುಷ್ಠಾನಗೊಳ್ಳಬೇಕಾಗಿತ್ತು ಎನ್ನುವ ಮಿಶ್ರ ಅಭಿಪ್ರಾಯ ಗ್ರಾಮದ ಜನತೆಯಲ್ಲಿದೆ.
ಸಿಎಂ ಕುಮಾರಸ್ವಾಮಿ 2006, ಅ.10ರಂದು ಗ್ರಾಮದ ಬಡ ಮಹಿಳೆ ಅಲ್ಲಾಭಿ ನದಾಫ್ ಎಂಬುವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಈ ವಾಸ್ತವ್ಯ ರಾಜ್ಯದಲ್ಲಿ ಕೆಲ ಬದಲಾವಣೆಗೆ ಕಾರಣವಾಯಿತು ಎಂದು ಇಲ್ಲಿನ ಜನರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಸಾರಾಯಿ ನಿಷೇಧಕ್ಕೆ ಇಲ್ಲಿನ ಮಹಿಳೆಯರು ಮನವಿ ಸಲ್ಲಿಸಿ ಕಣ್ಣೀರು ಹಾಕಿದ್ದರ ಪರಿಣಾಮ ನಿಷೇಧ ರಾಜ್ಯಕ್ಕೆ ಅನ್ವಯಿಸಿತು. ಈರುಳ್ಳಿ ಬೆಳೆಗೆ ಮೊದಲ ಬಾರಿಗೆ ಬೆಂಬಲ ಬೆಲ ಘೋಷಿಸಿದ್ದು ಇಲ್ಲಿಂದಲೇ. ಅಂಗನವಾಡಿ ಕಾರ್ಯಕರ್ತೆಯರಿಗೆ ಜಿಪಂ ವತಿಯಿಂದ ಗೌರವಧನ ಪಾವತಿಸುವ ನಿರ್ಧಾರ ಕೈಗೊಳ್ಳಲಾಯಿತು. ಮಾಜಿ ಪೈಲ್ವಾನರಿಗೆ ಪಿಂಚಣಿ ದ್ವಿಗುಣಗೊಳಿಸಲಾಗಿತ್ತು. ಬಸ್ ಕಾಣದ ಗ್ರಾಮಕ್ಕೆ ಅಂದು ಮುಖ್ಯಮಂತ್ರಿ ಆರಂಭಿಸಿದ ಬಸ್ ಇಂದು ಕುಮಾರಸ್ವಾಮಿ ಬಸ್ ಎಂದು ಗುರುತಿಸಲಾಗುತ್ತದೆ.
ಹೆಣ್ಣು ನೀಡಲು ಹಿಂದೇಟು: ಇಲ್ಲಿನ ಗ್ರಾಮಸ್ಥರು ಹೇಳುವ ಪ್ರಕಾರ ಮಳೆಗಾಲದಲ್ಲಿ ನಡುಗಡ್ಡೆಯಂತಾಗಿ ರಸ್ತೆ ಸಂಪರ್ಕ ಇರುತ್ತಿರಲಿಲ್ಲ. ಹೀಗಾಗಿ ನಮ್ಮ ಗ್ರಾಮಕ್ಕೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದರು. ಇಂದು ನಾವಳ್ಳಿಗೆ ನವಲಗುಂದ, ಶಲವಡಿ, ಅಣ್ಣಿಗೇರಿ ಭಾಗದಿಂದ ರಸ್ತೆ ಸಂಪರ್ಕ ಸುಧಾರಿಸಿದ್ದು, ನಿತ್ಯವೂ ಏಳೆಂಟು
ಪ್ರಾಥಮಿಕ ಶಾಲೆಯೇ ಕೊನೆ: ಗ್ರಾಮದ ಮುಂದೆ ಹರಿಯುವ ಹಂದಿಗನಾಳ ಹಳ್ಳ ತುಂಬಿ ಹರಿಯುತ್ತಿದ್ದ ಕಾರಣದಿಂದ ಇಲ್ಲಿನ ಬಾಲಕಿಯರಿಗೆ ಪ್ರಾಥಮಿಕ ಶಿಕ್ಷಣವೇ ಕೊನೆಯಾಗಿತ್ತು. ಹೆಣ್ಣು ಮಕ್ಕಳನ್ನು ದೂರದ ತುಪ್ಪದಕುರಹಟ್ಟಿ ಹಾಗೂ ಶಲವಡಿ ಗ್ರಾಮದ ಪ್ರೌಢ ಶಾಲೆಗೆ ಕಳುಹಿಸುತ್ತಿರಲಿಲ್ಲ. ಆದರೆ ಇಂದು ಗ್ರಾಮದಲ್ಲಿ ಹೈಸ್ಕೂಲ್ ಶಾಲೆ ಆರಂಭವಾಗಿದ್ದು, ಗ್ರಾಮದ ಮಕ್ಕಳು ಇದೇ ಶಾಲೆಗೆ ತೆರಳುತ್ತಿದ್ದಾರೆ. ಅಂದಿನ ದಿನಗಳಲ್ಲಿ 5 ಕಿಮೀ ವ್ಯಾಪ್ತಿಯಲ್ಲಿ ಮತ್ತೂಂದು ಪ್ರೌಢಶಾಲೆ ಆರಂಭಿಸಲು ಸಾಧ್ಯವಿಲ್ಲ ಎನ್ನುವ ನಿಯಮವಿದ್ದರೂ ಅಂದಿನ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಶಾಲೆ ಮಂಜೂರು ಮಾಡುವಲ್ಲಿ ಮುತುವರ್ಜಿ ವಹಿಸಿದ್ದರು ಎಂಬುದು ಗ್ರಾಮದ ಹಿರಿಯ ಡಿ.ಎಂ.ಶಲವಡಿ ಅವರ ಅನಿಸಿಕೆ.
•ಹೇಮರಡ್ಡಿ ಸೈದಾಪುರ