Advertisement

ನವಲಗುಂದ ಬಂದ್‌: ಹೆದ್ದಾರಿ ತಡೆ

06:30 AM Dec 21, 2017 | |

ನವಲಗುಂದ: ಮಹದಾಯಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಪಕ್ಷಾತೀತ ಹೋರಾಟ ಸಮಿತಿ ಕರೆ ನೀಡಿದ್ದ ನವಲಗುಂದ ಬಂದ್‌ನಲ್ಲಿ 10 ತಾಸಿಗೂ ಹೆಚ್ಚು ಕಾಲ ಹುಬ್ಬಳ್ಳಿ-ವಿಜಯಪುರ ಹೆದ್ದಾರಿ ತಡೆ ನಡೆಸಿ ರೈತರು ಪ್ರತಿಭಟನೆ ನಡೆಸಿದರು.

Advertisement

ಪಟ್ಟಣದ ರೈತ ಭವನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಮುಖಂಡರು ಹೆದ್ದಾರಿ ಮೂಲಕ ಬಸ್‌ ನಿಲ್ದಾಣ, ಮಾರುಕಟ್ಟೆಗಳಲ್ಲಿ ಸಂಚರಿಸಿ ರಾಜ್ಯ,ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅನೇಕ ರೈತಪರ ಸಂಘಟನೆಗಳೂ ಪ್ರತಿಭಟನೆಗೆ ಸಾಥ್‌ ನೀಡಿದವು. ಡಿ. 15ರೊಳಗೆ ಮಹದಾಯಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದ್ದ ಯಡಿಯೂರಪ್ಪ ಮಾತಿಗೆ ತಪ್ಪಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.ಬೆಳಗ್ಗೆಯಿಂದಲೇ ಪಟ್ಟಣದ ಅಂಗಡಿ ಮುಂಗಟ್ಟು, ಶಾಲಾ-ಕಾಲೇಜು, ಸರಕಾರಿ ಕಚೇರಿ, ಬ್ಯಾಂಕ್‌ಗಳನ್ನು ಬಂದ್‌ ಮಾಡಲಾಗಿತ್ತು. ಬಸ್‌ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡಿದರು.

ಮಹದಾಯಿ ಇತ್ಯರ್ಥಕ್ಕೆ ಸಹಕಾರ ನೀಡಲು ಸಿದ್ಧ:ಸಿಎಂ
ಮುದ್ದೇಬಿಹಾಳ
: ಬಿಜೆಪಿಯವರು ಮಹದಾಯಿ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ನಡೆಸಿದಲ್ಲಿ ಎಲ್ಲ ರೀತಿಯ ಸಹಕಾರ ನೀಡಲು ನಾನು ಸಿದ್ಧನಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿ ಧಿಗಳೊಂದಿಗೆ ಮಾತನಾಡಿದ ಅವರು, “ನಮ್ಮ ಸರ್ಕಾರ ಬಂದ ಮೇಲೆ ಬಿಜೆಪಿಯವರು ಏನೂ ಮಾಡದೆ ಸುಮ್ಮನಿದ್ದರು. ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಮಹದಾಯಿ ಸಮಸ್ಯೆ ಬಗೆಹರಿಸುತ್ತೇವೆ ಅಂತಾರೆ. ಕಾಲಹರಣ ಮಾಡುತ್ತಿದ್ದ ಬಿಜೆಪಿ ನಾಯಕರು ಈಗ ಎಚ್ಚರಗೊಂಡಿದ್ದಾರೆ. ಪ್ರಧಾನಿ ಮೋದಿಗೆ ನಾನು ಎರಡೂ¾ರು ಬಾರಿ ಈ ಸಮಸ್ಯೆ ಪರಿಹರಿಸಲು ಕೋರಿ ಪತ್ರ ಬರೆದಿದ್ದೇನೆ. ನಿಯೋಗದೊಂದಿಗೆ ಹೋಗಿದ್ದೇನೆ. ಆದರೆ, ಆಗ ಸಮಸ್ಯೆ ಪರಿಹರಿಸುವ ಭರವಸೆ ಕೊಡದ ಬಿಜೆಪಿ ನಾಯಕರು ಈಗ ಚುನಾವಣೆ ಹತ್ತಿರವಾದಂತೆ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಮಹದಾಯಿಗಾಗಿ ಪರೀಕರ್‌ಗೆ ಅಧಿಕಾರ ವಿಯೋಗ ಭೀತಿ
ಪಣಜಿ
: ಮಹದಾಯಿ ವಿವಾದ ಬಗೆಹರಿಸಲು ಬಿಜೆಪಿ ಉತ್ಸುಕವಾದ ಬೆನ್ನಲ್ಲೇ ಗೋವಾದಲ್ಲಿ ಮುಖ್ಯಮಂತ್ರಿ ಮನೋಹರ್‌ ಪರೀಕರ್‌ ಅವರಿಗೆ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಗೋವಾದಲ್ಲಿ ಮಿತ್ರಪಕ್ಷಗಳ ಬೆಂಬಲದಿಂದ ರಚಿತವಾಗಿರುವ ಸರ್ಕಾರದಲ್ಲಿ ಭಿನ್ನಮತ ಏಳುವ ಸಾಧ್ಯತೆಯಿದೆ. ಹೀಗಾಗಿ ಮಹದಾಯಿ ನದಿ ನೀರು ಹಂಚಿಕೆ ಮಾತುಕತೆ ಫಲಪ್ರದವಾಗುವ ಸೂಚನೆ ಕಡಿಮೆ ಎಂದೇ ಹೇಳಲಾಗುತ್ತಿದೆ.

Advertisement

ಮಹದಾಯಿ ನದಿ ನೀರು ಹಂಚಿಕೆ ಸಮಸ್ಯೆಯನ್ನು ನ್ಯಾಯಾಧಿಕರಣದ ಹೊರಗೆ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನೇತೃತ್ವದಲ್ಲಿ ಗೋವಾ ಸಿಎಂ ಮನೋಹರ್‌ ಪರೀಕರ್‌ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗಿರುವ ವಿಷಯ ಗೋವಾ ರಾಜ್ಯಾದ್ಯಂತ ತೀವ್ರ ಚರ್ಚೆಗೂ ಕಾರಣವಾಗಿದೆ. ಮಹದಾಯಿ ನದಿ ನೀರನ್ನು ಕರ್ನಾಟಕಕ್ಕೆ ಹರಿಬಿಡಲು ಒಪ್ಪಿದಲ್ಲಿ ಗೋವಾದಲ್ಲೂ ಹೋರಾಟ ಆರಂಭವಾಗಲಿದೆ. ಅಲ್ಲದೆ ಗೋವಾದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ಕುಸಿದು ಬೀಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಮಹದಾಯಿ ನದಿ ನೀರನ್ನು ಗೋವಾದಲ್ಲಿ ಯಾವುದೇ ಕೃಷಿ ಕ್ಷೇತ್ರಕ್ಕೂ ಬಳಸದೇ ನೇರವಾಗಿ ಸಮುದ್ರಕ್ಕೆ ಬಿಡುತ್ತಿದೆ. ನ್ಯಾಯಾಧಿಕರಣದಲ್ಲಿ ಈ ಪ್ರಕರಣಕ್ಕಾಗಿ ಗೋವಾ ಸರ್ಕಾರ ವಿಶೇಷ ವಕೀಲರ ತಂಡವನ್ನೇ ನೇಮಿಸಿದೆ. ಅಲ್ಲದೆ ತೀರ್ಪು ಸಹ ಗೋವಾ ಪರವಾಗಿ ಬೀಳಲಿದೆ ಎಂದು ಹಲವು ಬಾರಿ ಹೇಳಿದ್ದಿದೆ. ಇದರಿಂದಾಗಿ ಪರೀಕರ್‌ ಮಹದಾಯಿ ನೀರನ್ನು ಕರ್ನಾಟಕಕ್ಕೆ ಬಿಡಲು ನೇರವಾಗಿ ಒಪ್ಪಿಕೊಳ್ಳುವುದು ಅಸಾಧ್ಯ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next