ನವಲಗುಂದ: ಯಮನೂರಿನ ರಾಜಾಭಾಗ ಸವಾರ ಉರ್ಫ್ ಚಾಂಗದೇವರ ಜಾತ್ರೆ ರವಿವಾರದಿಂದ ಆರಂಭಗೊಂಡಿದ್ದು, ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಗಂಧಾಭಿಷೇಕ ನಡೆಯಿತು. ಚಾಂಗದೇವರು ನಮಗೆ ಒಳ್ಳೆಯದನ್ನು ಮಾಡಲಿ. ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಲಿ. ಈ ವರ್ಷ ಮಳೆ ಬೆಳೆ ಚೆನ್ನಾಗಿ ಬರಲಿ ಎಂದು ಭಕ್ತರು ಪ್ರಾರ್ಥಿಸಿದರು.
ಗಂಧಾಭಿಷೇಕಕ್ಕೆ ಸಂಬಂಧಿಸಿದಂತೆ ಬರ್ಗೆ ಮನೆತನ ಸಂತರು ಚಾಂಗದೇವನಿಗೆ ದೀಪ ಹಚ್ಚಲು ಬೆಣ್ಣಿ ಹಳ್ಳಕ್ಕೆ ನೀರು ತರಲು ಹೊರಡುವ ಸಮಯದಲ್ಲಿ ರಸ್ತೆಯ ಮೇಲೆ ಭಕ್ತರು ಬೆನ್ನು ಮೇಲಾಗಿ ಮಲಗತೊಡಗಿದರು. ಸಂತರ ಪಾದ ಸ್ಪರ್ಶದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಅವರದಾಗಿತ್ತು. ಗದ್ದಲ ಹೆಚ್ಚಾದಾಗ ಪೊಲೀಸರು ಲಾಠಿ ರುಚಿ ತೋರಿಸಲು ಮುಂದಾದರು. ಆಗ ನಿರಾಶೆ ಹೊಂದಿದ ಭಕ್ತರು ಪಕ್ಕಕ್ಕೆ ಸರಿದರು. ಬೆಣ್ಣಿಹಳ್ಳದಿಂದ ತಂದ ನೀರಿನಿಂದ ಗರ್ಭಗುಡಿಯಲ್ಲಿ ಸಂತರು ದೀಪ ಹಚ್ಚುತ್ತಿದಂತೆ ಭಕ್ತರು ರೋಮಾಂಚನಗೊಂಡರು.
ಹಿಂದೂ-ಮುಸ್ಲಿಂ ಭಾವೈಕತೆಗೆ ಸಾಕ್ಷಿಯಾದ ಚಾಂಗದೇವರ ದೇವಸ್ಥಾನಲ್ಲಿ ಪೂಜೆ ಹಾಗೂ ಫಾತಿಹಾ(ಓದಿಕೆ) ಏಕಕಾಲಕ್ಕೆ ನಡೆಯಿತು.
ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.
ಎಚ್. ಕೋನರಡ್ಡಿ, ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಗಂಧಾಭಿಷೇಕದಲ್ಲಿ ಪಾಲ್ಗೊಂಡು ದೇವರ ದರ್ಶನಾಶೀರ್ವಾದ ಪಡೆದರು.